ಮರಬಿದ್ದು ಹಾನಿಯಾದರೆ ಅರಣ್ಯ ಅಧಿಕಾರಿಗಳೇ ಹೊಣೆ

jyp1 (1)
Published on

ಜಯಪುರ: ರಸ್ತೆ, ಶಾಲೆ, ಬಸ್‌ನಿಲ್ದಾಣ ಸೇರಿದಂತೆ ಸಾರ್ವಜನಿಕ ಸ್ಥಳ ಹಾಗೂ ಮನೆಗಳ ಬದಿಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಅನುಮತಿ ಕೋರಿ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿರುವ ಅರ್ಜಿಗಳನ್ನು ಕೂಡಲೇ ಪರಿಶೀಲಿಸಿ ಅರಣ್ಯ ಅನುಮತಿ ನೀಡಬೇಕು, ಇಲ್ಲವಾದಲ್ಲಿ ಮರಗಳು ಬಿದ್ದು ಪ್ರಾಣ ಹನಿಯಾದರೆ ಅರಣ್ಯ ಇಲಾಖೆಯನ್ನು ಹೊಣೆಯಾಗಿಸಿ ಪೊಲೀಸರು ಪ್ರಕರಣ ದಾಖಲಿಸಬೇಕು ಎಂದು ಶಾಸಕ ಟಿ ಡಿ ರಾಜೇಗೌಡ ಹೇಳಿದರು.

ಮರ ಬಿದ್ದು ಮೃತಪಟ್ಟ ಶಿಡ್ಲೆಮನೆಯ ರತ್ನಾಕರ ಕುಟುಂಬಸ್ಥರನ್ನು ಜಯಪುರದ ಸಾರ್ವಜನಿಕ ಅರೋಗ್ಯ ಕೇಂದ್ರದಲ್ಲಿ ಭೇಟಿಯಾಗಿ ಮಾತನಾಡಿ, ಮರ ಬಿದ್ದು ಅಮಾಯಕ ಅಟೋ ಚಾಲಕ ಮೃತಪಟ್ಟಿದ್ದಾರೆ. ಸರ್ಕಾರದಿಂದ ಮೃತರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡಲಾಗುತ್ತದೆ. ಆದರೆ ಹೋದ ಜೀವವನ್ನು ಮರಳಿ ತರಲಾಗದು. ಸಂಬಂಧಪಟ್ಟ ಇಲಾಖೆಗಳು ಗಮನಹರಿಸಿ ಅಪಾಯಕಾರಿ ಮರಗಳ ತೆರವಿಗೆ ಮುಂದಾಗಬೇಕು. ಈ ಬಗ್ಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲ ಅಧಿಕಾರಿಗಳಿಗೆ ತಿಳಿಸಿದ್ದು, ಅಪಾಯಕಾರಿ ಮರಗಳ ತೆರವಿಗೆ ಅನುಮತಿ ನೀಡದೆ ತೊಂದರೆಯಾದರೆ ಅಂತಹ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಈ ವಿಚಾರದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಬಾರದು ಎಂದರು.

ಶೃಂಗೇರಿಯಲ್ಲಿ 100 ಬೆಡ್‌ನ ಆಸ್ಪತ್ರೆಗೆ ಸರ್ಕಾರ ಸುಮಾರು 37 ಕೋಟಿ ಹಣ ಇರಿಸಿದ್ದು, ಆಸ್ಪತ್ರೆ ನಿರ್ಮಾಣಕ್ಕೆ ಗುರುತಿಸಿದ ಜಾಗಕ್ಕೆ ಕೇಂದ್ರ ಅರಣ್ಯ ಇಲಾಖೆ ಅನುಮತಿ ನೀಡದೇ, ಮಂಜೂರಾತಿಗೆ ನೀಡಿದ ನಮ್ಮ ಮನವಿಯನ್ನು ವಜಾ ಮಾಡಿದೆ. ಕೇಂದ್ರ ಅರಣ್ಯ ಇಲಾಖೆಯ ಈ ಕ್ರಮ ಖಂಡನೀಯ. ಕಂದಾಯ ಇಲಾಖೆ ಬೇರೊಂದು ಜಾಗದಲ್ಲಿ ಆಸ್ಪತ್ರೆ ನಿರ್ಮಾಣವಾಗಲಿದೆ. ಹಾಗೂ ಜಯಪುರದ ಹೊಸ ಆಸ್ಪತ್ರೆ ಕಟ್ಟಡವನ್ನು ಶೀಘ್ರದಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net