

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ
ಬಯಲು ಸೀಮೆ ಗ್ರಾಮಾಂತರ ಜಿಲ್ಲೆಯಲ್ಲಿ ಜಿಲ್ಲಾ ಅರಣ್ಯ ಇಲಾಖೆ 600 ಹೆಕ್ಟೇರ್ ಪ್ರದೇಶದಲ್ಲಿ 25 ಕ್ಕೂ ಹೆಚ್ಚು ವಿವಿಧ ಜಾತಿಯ 5 ಲಕ್ಷ ಸಸಿಗಳನ್ನು ನೆಡುವ ಮೂಲಕ ಪ್ರಸಕ್ತ ಸಾಲಿನ ಅರಣ್ಯೀಕರಣಕ್ಕೆ ಮುಂದಾಗಿದ್ದು ಜಿಲ್ಲೆಯಲ್ಲಿ ದಟ್ಟಾರಣ್ಯ ನಿರ್ಮಾಣಕ್ಕೆ ನೀಲನಿಕ್ಷೆ ಸಿದ್ದಪಡಿಸಿದೆ.
ತೇಗ, ಬೀಟೆಯಂಥ ಜಾತಿ ಸಸಿಗಳಿಂದ ಹಿಡಿದು ಮಾವು, ನಲ್ಲಿ, ನೇರಳೆ, ಹಲಸು ಸೇರಿ ವಿವಿಧ ಬಗೆಯ ಹಣ್ಣಿನ ಗಿಡಗಳನ್ನು ನೆಟ್ಟು ಪೋಷಿಸುವ ಗುರಿಯೊಂದಿಗೆ ಕಾರ್ಯೋನ್ಮುಖವಾಗಿದೆ. ಪ್ರತಿ ವರ್ಷ ಮಳೆಗಾಲದ ಆರಂಭದಲ್ಲಿ ಇದೇ ಮಾದರಿಯ ಅಭಿಯಾನ ನಡೆಯುತ್ತಿದೆ ಪ್ರತಿ ಬಾರಿ ಹತ್ತಿಪ್ಪತ್ತು ಜಾತಿಯ ಸಸಿಗಳನ್ನಷ್ಟೇ ನೆಡುವ ಕಾರ್ಯಕ್ರಮ ರೂಪಿಸಲಾಗುತ್ತಿತ್ತು. ಆದರೆ ಈ ಬಾರಿ 25ಕ್ಕೂ ಹೆಚ್ಚು ಬಗೆಯ ಸಸಿಗಳನ್ನು ನೆಡಲು ಸಿದ್ದತೆ ಮಾಡಿಕೊಂಡಿರುವುದು ವಿಶೇಷ. ಇದಕ್ಕಾಗಿ ಈಗಾಗಲೇ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿನ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ ಸಸಿಗಳನ್ನು ಬೆಳೆಸಲಾಗಿದ್ದು, ಕಳೆದೊಂದು ವಾರದಿಂದ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಆಗಸ್ಟ್ ಅಂತ್ಯದವರೆ:
ಮೇ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಒಣಗಿ ಬರಡಾಗಿದ್ದಂತ ಅರಣ್ಯ ಪ್ರದೇಶಗಳಲ್ಲಿ ಹಸಿರು ಮರುಕಳಿಸಿದೆ. ಜೂನ್‌ನಿಂದ ಈ ಬಾರಿ ಉತ್ತಮ ಮಳೆಯಾಗುವ ನಿರೀಕ್ಷೆ ಹಿನ್ನೆಲೆಯಲ್ಲಿ ದೊಡ್ಡಮಟ್ಟದಲ್ಲಿ ಸಸಿಗಳನ್ನು ನೆಡುವ ಅಭಿಯಾನಕ್ಕೆ ಇಲಾಖೆ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ಕಳೆದ ವಾರದಿಂದಲೇ ಸಸಿಗಳ ಪ್ಲಾಂಟೇಷನ್ ಆರಂಭಿಸಿದ್ದು, ಆಗಸ್ಟ್ ಅಂತ್ಯದವರೆಗೆ ಈ ಅಭಿಯಾನ ನಿರಂತರ ನಡೆಯಲಿದೆ. ಸುಮಾರು 5 ಲಕ್ಷ ಸಸಿನಗಳನ್ನು ನೆಡುವ ಗುರಿಯೊಂದಿಗೆ ಇಲಾಖೆ ಸನ್ನದ್ಧವಾಗಿದೆ.
ನೀಲಗಿರಿ ತೆರವು:
ಅರಣ್ಯ ಪ್ರದೇಶಗಳಲ್ಲಿ ಬೆಳೆದು ನಿಂತಿರುವ ಅಂತರ್ಜಲಕ್ಕೆ ಕಂಟಕವಾಗಿರುವು ನೀಲಗಿರಿ ತೆರವಿಗೆ ಇಲಾಖೆ ಒತ್ತು ನೀಡಿದೆ. ಇದಕ್ಕಾಗಿ ಕೆಎಸ್‌ಎ್ಐಸಿಗೆ ಟೆಂಟರ್ ನೀಡಿದ್ದು, ಸುಮಾರು 200 ಹೆಕ್ಟೇರ್ ಪ್ರದೇಶದಲ್ಲಿ ನೀಲಗಿರಿ ತೆರವು ನಡೆಯಲಿದೆ. ನೀಲಗಿರಿ ತೆರವು ಮಾಡಿದ ಪ್ರದೇಶದಲ್ಲಿ ತರಹೇವಾರಿ ಸಸಿಗಳನ್ನು ನೆಟ್ಟು ದಟ್ಟಾರಣ್ಯದ ರೂಪಕೊಡಲು ಇಲಾಖೆ ನೀಲನಕ್ಷೆ ಸಿದ್ದಪಡಿಸಿದೆ.
ಬದಲಿ ಸಸಿಗಳ ಪ್ಲಾಂಟೇಷನ್: ಕಳೆದ ಎರಡು ವರ್ಷದ ಅವಧಿಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಲಕ್ಷಾಂತರ ಸಸಿಗಳನ್ನು ನಡೆಸಲಾಗಿದೆ. ಆದರೆ ಕಳೆದೆರಡುವ ವರ್ಷದಿಂದ ನಿರೀಕ್ಷಿತ ಮಳೆ ಇಲ್ಲದೆ ಶೇ.40 ಸಸಿಗಳು ಹಾಳಾಗಿವೆ. ಇಂಥ ಜಾಗಗಳನ್ನು ಗುರುತಿಸಿ ಅದೇ ಸ್ಥಳಗಳಲ್ಲಿ ಮತ್ತೆ ಸಸಿಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜತೆಗೆ ಹಾಳಾಗುತ್ತಿರುವ ಸಸಿಗಳಿಗೆ ಪೋಷಾಕಾಂಶ ನೀರಿನ ವ್ಯವಸ್ಥೆಯೊಂದಿಗೆ ಮರುಜೀವ ಕೊಡುವ ಪ್ರಯತ್ನಕ್ಕೆ ಇಲಾಖೆ ಹೆಜ್ಜೆ ಇಟ್ಟಿದೆ.
ರಸ್ತೆ ಬದಿ ಸಸಿ: ಜಿಲ್ಲೆಯ ನಾಲ್ಕೂ ತಾಲೂಕುಗಳ ಪೈಕಿ ಪ್ರಸಕ್ತ ಸಾಲಿನಲ್ಲಿ ಈ ಬಾರಿ ನೆಲಮಂಗಲ ಹಾಗೂ ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿ ರಸ್ತೆ ಬದಿ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೆದ್ದಾರಿ ಸೇರಿ ಎಲ್ಲ ಪ್ರಮುಖ ರಸ್ತೆಗಳ ಎರಡೂ ಬದಿಗಳಲ್ಲಿ ತೇಗ, ಬೇವು, ಮಹಾಘನಿ ಸೇರಿ ಹಣ್ಣಿನ ಗಿಡಗಳನ್ನು ನೆಟ್ಟು ಅವುಗಳಿಗೆ ರಕ್ಷಣಾ ಬೇಲಿಗಳನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಸಿದ್ದತೆ ನಡೆಸಿದೆ. ಇದರೊಂದಿಗೆ ಜಿಲ್ಲೆಯಲ್ಲಿನ ಅರಣ್ಯ ಪ್ರದೇಶಗಳಲ್ಲಿ ಕೆಲವು ವಿರಳವಾಗಿರುವ ಮರಗಿಡಗಳನ್ನು ಹೊಂದಿರುವ ಅರಣ್ಯ ಪ್ರದೇಶಗಳಿವೆ, ಇಂಥ ಜಾಗದಲ್ಲಿ ಒತ್ತೊತ್ತಾಗಿ ಸಸಿಗಳನ್ನು ನೆಡುವ ಮೂಲಕ ದಟ್ಟಾರಣ್ಯದ ರೂಪ ಕೊಡಲು ಚಿಂತಿಸಲಾಗಿದೆ. ಹಂತಹಂತವಾಗಿ ಜಿಲ್ಲೆಯ ನಾಲ್ಕೂ ತಾಲೂಕು ವ್ಯಾಪ್ತಿಯ ಅರಣ್ಯ ಪ್ರದೇಶಗಳಲ್ಲಿ ಸಸಿಗಳ ಪ್ಲಾಂಟೇಷನ್ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿರ್ವಹಣೆ ಕೊರತೆ: ಪ್ರತಿ ವರ್ಷ ಅರಣ್ಯ ಇಲಾಖೆ ಲಕ್ಷಾಂತರ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತದೆ ಆದರೆ ಈ ಪೈಕಿ ಶೇ.30 ಸಸಿಗಳಷ್ಟೇ ಉಳಿದುಕೊಳ್ಳುತ್ತವೆ ನಿರ್ವಹಣೆ ಕೊರತೆಯಿಂದ ಶೇ.70 ಸಸಿಗಳು ನಾಮಾವಶೇಷವಾಗುತ್ತವೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಅರಣ್ಯ ಇಲಾಖೆ ಈ ಬಾರಿ ಸಸಿಗಳನ್ನು ನೆಡುವ ಜತೆಗೆ ಅವುಗಳ ನಿರ್ವಹಣೆಗೆ ಒತ್ತು ನೀಡಿದೆ ಶೇ.100 ರ ಗುರಿಸಾಧನೆಯೊಂದಿಗೆ ಅಭಿಯಾನ ಆರಂಭಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಈ ಬಾರಿ ಸುಮಾರು 600 ಹೆಕ್ಟೇರ್ ಪ್ರದೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಬಾರಿ 25 ಕ್ಕೂ ವಿವಿಧ ಜಾತಿಯ ಸಸಿಗಳ ಪ್ಲಾಂಟೇಷನ್ ನಡೆಯಲಿದೆ. ಇದರ ಜತೆಗೆ ನೀಲಗಿರಿ ತೆರವು ಕಾರ್ಯಕ್ಕೆ ಚಾಲನೆ ನೀಡಿದ್ದು, ತೆರವಾದ ಜಾಗದಲ್ಲಿ ಸಸಿಗಳನ್ನು ನೆಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯ ಅರಣ್ಯಗಳಿಗೆ ದಟ್ಟಾರಣ್ಯ ರೂಪ ಕೊಡಲು ನೀಲನಕ್ಷೆ ಸಿದ್ದಪಡಿಸಲಾಗಿದೆ.
ಸರೀನಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೆಂ.ಗ್ರಾಮಾಂತರ