ಅರಣ್ಯ ಪ್ರತಿಯೊಬ್ಬರ ಖಜಾನೆ ಇದ್ದಂತೆ

Sirsi aranya
Published on

ಶಿರಸಿ: ಅರಣ್ಯವು ಯಾವೊಬ್ಬ ಅಧಿಕಾರಿ ಅಥವಾ ಇಲಾಖೆಯ ಆಸ್ತಿಯಲ್ಲ. ಅರಣ್ಯ ಪ್ರತಿಯೊಬ್ಬರ ಖಜಾನೆ ಇದ್ದಂತೆ. ಅರಣ್ಯ ಸಂರಕ್ಷಣೆಯ ಲಾಭ ಪ್ರತಿಯೊಬ್ಬರಿಗೂ ಲಭಿಸುತ್ತದೆ ಎಂದು ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ವಿ. ವಸಂತರೆಡ್ಡಿ ಹೇಳಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಪ್ರಯುಕ್ತ ನಗರದಲ್ಲಿ ಸೋಮವಾರ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು. ಇತ್ತೀಚಿನ ವರ್ಷಗಳಲ್ಲಿ ಹವಾಮಾನದಲ್ಲಿ ವೈಪರೀತ್ಯ ಹೆಚ್ಚುತ್ತಿದೆ. ಅರಣ್ಯ, ಪರಿಸರದಲ್ಲಿನ ವ್ಯತ್ಯಾಸಗಳು ಇಂತಹ ವೈಪರೀತ್ಯ ಘಟನೆಗಳಿಗೆ ಕಾರಣವಾಗುತ್ತವೆ. 8.30 ಲಕ್ಷ ಹೆಕ್ಟೇರ್ ಅರಣ್ಯವನ್ನು ಉತ್ತರ ಕನ್ನಡ ಜಿಲ್ಲೆಯ ಜನ ಉಳಿಸಿಕೊಂಡಿದ್ದಾರೆ ಎಂದರು.

ಅರಣ್ಯ ಇಲಾಖೆ ಕಾರ್ಯ ಉಳಿದ ಇಲಾಖೆಗಿಂತ ವಿಭಿನ್ನ. ನಮ್ಮದು ಸಂಪನ್ಮೂಲ ಸಂರಕ್ಷಣೆಯ ಕಾರ್ಯ. ದೇಶದ ಕೃಷಿ ಮಳೆಯ ಮೇಲೆ ಅವಲಂಬಿತವಾಗಿದೆ ಎಂದರು.

ಸಿವಿಲ್ ನ್ಯಾಯಾಧೀಶ ಅಭಿಷೇಕ್ ಜೋಶಿ ಮಾತನಾಡಿ, ಅರಣ್ಯ ನಮ್ಮ ಸಂಪತ್ತು. ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಉಪ ವಿಭಾಗಾಧಿಕಾರಿ ದೇವರಾಜ ಆರ್. ಮಾತನಾಡಿ, ಕಾಡಿನ ಸಂರಕ್ಷಣೆ ಬಗ್ಗೆ ಹೆಚ್ಚಿನ ಗಮನ ಇಡಬೇಕು. ಪರಿಸರ ವ್ಯವಸ್ಥೆ ಒಮ್ಮೆ ನಾಶವಾದರೆ ಪುನಃ ಸರಿಯಾಗಲು ಹಲವು ವರ್ಷಗಳೇ ಬೇಕಾಗಲಿವೆ ಎಂದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಅಜ್ಜಯ್ಯ ಜಿ.ಆರ್., ಅರಣ್ಯ ಸಂಚಾರಿ ದಳದ ಅಬ್ದುಲ್ ಅಜೀಜ್, ರಾಜೇಶ ಮಳಗಿಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net