ಅರಣ್ಯ ವೃದ್ಧಿ ಆಮೆಗತಿ, ಅರಣ್ಯ ನಾಶ ಶರವೇಗ

5cbp1
Published on

ಎನ್.ವೆಂಕಟೇಶ್

ಚಿಕ್ಕಬಳ್ಳಾಪುರ: ಅರಣ್ಯವೃದ್ಧಿಯ ಕೆಲಸಗಳು ಆಮೆಗತಿಯಲ್ಲಿದ್ದರೆ, ನಾಶಪಡಿಸುವ ಕೆಲಸಗಳು ಶರವೇಗದಲ್ಲಿ ನಡೆಯುತ್ತಿವೆ. ಇದರಿಂದ ಅರಣ್ಯ ಪ್ರದೇಶದ ಪ್ರಮಾಣ ಇಳಿಕೆಯಾಗುತ್ತಿದ್ದು, ಮೂಕಜೀವಿಗಳು ಮತ್ತು ಅರಣ್ಯಪ್ರಿಯರ ರೋದನೆ ಯಾರಿಗೂ ಕೇಳದಾಗಿದೆ.

ಹೌದು, ಆಂಧ್ರದ ಗಡಿ ಭಾಗದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯು ಗಿರಿಧಾಮ, ಗುಡ್ಡಗಳು, ಕೆರೆ ಕುಂಟೆ ಪ್ರದೇಶಗಳ ಜತೆಗೆ ಹೆಚ್ಚಿನ ಅರಣ್ಯ ಪ್ರದೇಶ ಹೊಂದಿದೆ. ಜಿಲ್ಲೆಯ ಹನುಮಂತಪುರದ ಅರಣ್ಯ ಪ್ರದೇಶಗಳಲ್ಲಿ ವಾಹನಗಳು ಮತ್ತು ಜನದಟ್ಟಣೆ ಮತ್ತು ಹೊಸ ಕಟ್ಟಡಗಳ ನಿರ್ಮಾಣ, ಕಳವಾರ ಬೆಟ್ಟದಲ್ಲಿ ಹೆಚ್ಚಿನ ಚಾರಣಿಗರು, ವೀರದಿಮ್ಮಮ್ಮನ ಕಣಿವೆಯಲ್ಲಿ ರಸ್ತೆ ವಿಸ್ತರಣೆ, ನೀರಾವರಿ ಕಾಮಗಾರಿ ಮತ್ತು ಸರ್ಕಾರದಿಂದ ಸಂಸ್ಥೆಗಳಿಗೆ ಭೂ ಮಂಜೂರಾತಿ, ಪ್ರಭಾವಿಗಳ ಅಕ್ರಮ ಒತ್ತುವರಿ ಸೇರಿ ನಾನಾ ಹಾವಳಿಯು ಹಸಿರು ಸಂಪತ್ತಿನ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣವಾಗಿದೆ. ಇದರಿಂದ ವಸತಿ ಪ್ರದೇಶಗಳಿಗೆ ವನ್ಯಜಿವಿಗಳು ಲಗ್ಗೆಯಿಡುವ ಪ್ರಕರಣಗಳು ನಿರಂತರವಾಗಿ ಹೆಚ್ಚಾಗುತ್ತಿವೆ. ಮತ್ತೊಂದೆಡೆ ಅರಣ್ಯ ಇಲಾಖೆಯ ಅಧಿಕಾರಿಗಳು ವಾಸ್ತವ ಅಭಿವೃದ್ಧಿಗಿಂತಲೂ ಕೋಟ್ಯಂತರ ರೂ. ಅನುದಾನದ ಖರ್ಚಿನ ಅಂಕಿ&ಅಂಶ ತೋರಿಸುವ ಕಡೆಗೆ ಪ್ರಮುಖವಾಗಿ ಗಮನಹರಿಸುತ್ತಿದ್ದಾರೆ.

*ಕಾರ್ಯಾಚರಣೆ, ಪರಿಹಾರ ವಿತರಣೆ ಮಾಮೂಲು

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ನಂದಿ ಸೇರಿ ಪಂಚಗಿರಿಗಳು, ವೀರದಿಮ್ಮಮ್ಮನ ಕಣಿವೆ, ಕಣಿವೆ ನಾರಾಯಣಪುರ, ಜಕ್ಕಲಮಡ, ಆವಲಬೆಟ್ಟ, ಗೌರಿಬಿದನೂರು ದಂಡಿಗಾನಹಳ್ಳಿ ಕೆರೆ ಮತ್ತು ವಾಟದಹೊಸಹಳ್ಳಿ ಪ್ರದೇಶ, ಬಾಗೇಪಲ್ಲಿಯ ಗಡಿದಂ, ಚಿಂತಾಮಣಿಯ ಕೈವಾರ, ಮುರುಗಮಲ್ಲ, ಶಿಡ್ಲಟ್ಟದ ತಲಕಾಯಲಬೆಟ್ಟ ಸೇರಿ ಮತ್ತಿತರ ಪ್ರದೇಶಗಳು ಅರಣ್ಯ ಪ್ರದೇಶದಿಂದ ಆವೃತ್ತಗೊಂಡಿದ್ದು, ಇವುಗಳ ತಪ್ಪಲಿನಲ್ಲಿ ನೂರಾರು ಗ್ರಾಮಗಳಿವೆ. ಈ ಗ್ರಾಮಗಳಲ್ಲಿ ಜಾನುವಾರು ಮೇಲೆ ವನ್ಯಜಿವಿಗಳ ದಾಳಿ ಪ್ರಕರಣಗಳು ನಿರಂತರವಾಗಿ ವರದಿಯಾಗುತ್ತಿವೆ.

ಆಗಾಗ ಚಿರತೆಗಳು ಪ್ರತ್ಯಕ್ಷವಾಗಿ ಹಸು, ಎಮ್ಮೆ, ಕರುಗಳನ್ನು ತಿಂದು ತೇಗುತ್ತಿವೆ. ಇದರಿಂದ ರೈತರು ನಷ್ಟ ಅನುಭವಿಸುತ್ತಿದ್ದು, ದೂರುಗಳು ಬಂದಾಗ ಅರಣ್ಯ ಇಲಾಖೆ ಕಾರ್ಯಾಚರಣೆ, ಮೃತಪಟ್ಟ ರಾಸುಗಳಿಗೆ ಪರಿಹಾರ ವಿತರಿಸುವುದು ಸಾಮಾನ್ಯವಾಗಿದೆ. ಪ್ರಸಕ್ತ 2024&25ನೇ ಸಾಲಿನಲ್ಲಿ ಕಾಡುಪ್ರಾಣಿಗಳ ಬೆಳೆ ಹಾನಿ ಮತ್ತು ಬಲಿಯಾದ ಸಾಕುಪ್ರಾಣಿಗಳಿಗೆ ಪರಿಹಾರ ವಿತರಣೆ ಯೋಜನೆಯಡಿ ಜಿಲ್ಲೆಯಲ್ಲಿ 83 ಲಾನುಭವಿಗಳಿಗೆ 8,21,209 ರೂ. ನೀಡಲಾಗಿದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆ ಮಾಹಿತಿ ನೀಡಿದೆ. ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಲೂಕುವಾರು ಪೈಕಿ ಗೌರಿಬಿದನೂರಿನಲ್ಲಿ (52 ಲಾನುಭವಿಗಳು) ಹೆಚ್ಚಿನ ಜನರು ನಷ್ಟ ಹೊಂದಿದ್ದಾರೆ.

*ವನ್ಯಜಿವಿಗಳ ಹಾವಳಿ

ಜಿಲ್ಲೆಯಲ್ಲಿ ಜಿಂಕೆ, ಕರಡಿ, ನವಿಲುಗಳು, ಕಾಡುಹಂದಿಗಳು ಸೇರಿ ವನ್ಯಜಿವಿಗಳು ಕೃಷಿ ಬೆಳೆಗಳನ್ನು ನಾಶಪಡಿಸಿದ ಪ್ರಕರಣಗಳು ಬಹಳಷ್ಟಿವೆ. ಇದರ ನಡುವೆ ಚಿರತೆಗಳು ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದು ಹಸು, ಎಮ್ಮೆ, ಕರು, ಕುರಿ, ಮೇಕೆ, ಕೋಳಿಗಳನ್ನು ಬಲಿ ಪಡೆಯುತ್ತಿವೆ. ದಾಳಿಯ ಸಂದರ್ಭದಲ್ಲಿ ಒಂಟಿಯಾಗಿ ಓಡಾಡದಿರುವುದು, ರಾಸುಗಳನ್ನು ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗದಿರುವುದು ಸೇರಿ ಹಲವು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net