

ಶಿವರಾಜ.ಎಂ.
ಬೆಂಗಳೂರು ಗ್ರಾಮಾಂತರ: ಆರ್ಥಿಕ ಸ್ಥಿತಿಯನ್ನು ಬುಡಮೇಲು ಮಾಡಿದ ಕರೊನಾ ವಿವಿಧ ಇಲಾಖೆಗಳ ಅನುದಾನಕ್ಕೆ ಕತ್ತರಿ ಹಾಕಿದೆ. ಪರಿಣಾಮವಾಗಿ ಪ್ರಸಕ್ತ ವರ್ಷದ ಅನೇಕ ಕಾರ್ಯಗಳಿಗೆ ಅನುದಾನ ಕೊರತೆ ಎದುರಾಗಿದೆ. ಪ್ರಮುಖವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುವ ಕಾಡ್ಗಿಚ್ಚಿನ ಅವಾಂತರ ನಿಯಂತ್ರಿಸಲು ಅನುದಾನ ಕೊರತೆ ಎದುರಾಗಿದ್ದು, ಜಿಲ್ಲೆಯಲ್ಲಿ ವನಸಂಪತ್ತಿನ ರಕ್ಷಣೆ ಜಿಲ್ಲಾ ಅರಣ್ಯ ಇಲಾಖೆಗೆ ಸವಾಲಾಗಿದೆ.
ಹೌದು! 21.534 ಹೆಕ್ಟೇರ್ ಅರಣ್ಯ ಪ್ರದೇಶ ಹೊಂದಿರುವ ಗ್ರಾಮಾಂತರ ಜಿಲ್ಲೆಯಲ್ಲಿ ಪ್ರತಿವರ್ಷ ಅಲ್ಲಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತದೆ. ಮುಂಜಾಗ್ರತೆ ವಹಿಸುವ ಅರಣ್ಯ ಇಲಾಖೆ ತಕ್ಷಣವೇ ಕಾಡ್ಗಿಚ್ಚು ನಂದಿಸಿ ವನಸಂಪತ್ತು ರಕ್ಷಣೆ ಮಾಡುತ್ತಾ ಬಂದಿದೆ. ಇದಕ್ಕಾಗಿ ಪ್ರತಿ ವರ್ಷ ಪ್ರತ್ಯೇಕ ಅನುದಾನ ಮೀಸಲಿಡಲಾಗುತ್ತಿತ್ತು. ಆದರೆ ಈ ಬಾರಿ ಕರೊನಾ ನಿರ್ವಹಣೆ ಕಾರಣದಿಂದ ಇಲಾಖೆಗೆ ಕಳೆದ ವರ್ಷದ ಅನುದಾನಕ್ಕೆ ಹೋಲಿಸಿದರೆ ಶೇ.50 ಅನುದಾನ ಕಡಿತ ಮಾಡಲಾಗಿದೆ ಎನ್ನಲಾಗಿದೆ. ಪರಿಣಾಮವಾಗಿ ಕಾಡ್ಗಿಚ್ಚು ನಂದಿಸುವ ಕೆಲಸದಲ್ಲಿ ಮಾನವಶಕ್ತಿ ಬಳಕೆ ಪರಿಕರ ಬಳಕೆಗೆ ತೊಂದರೆ ಎದುರಾಗಲಿದೆ ಎನ್ನಲಾಗಿದೆ.
21 ವಾಚರ್ಗಳ ನೇಮಕ: ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲೂ ಅರಣ್ಯ ಪ್ರದೇಶವಿದ್ದು, ದೊಡ್ಡಬಳ್ಳಾಪುರ ತಾಲೂಕು ಮೊದಲ ಸ್ಥಾನದಲ್ಲಿದೆ, ಸಾಸಲು ಹೋಬಳಿ ವ್ಯಾಪ್ತಿಯಲ್ಲಿ ವಿಸ್ತಾರವಾದ ಅರಣ್ಯ ಪ್ರದೇಶವಿದೆ. ಈ ಮೊದಲು ಪ್ರತಿ ತಾಲೂಕಿಗೆ ಇಂತಿಷ್ಟು ವಾಚರ್ಗಳಂತೆ 36 ವಾಚರ್ಗಳ ಕಣ್ಗಾವಲು ಇರುತ್ತಿತ್ತು. ಪ್ರಸಕ್ತ ವರ್ಷದಲ್ಲಿ 21 ವಾಚರ್ಗಳ ನೇಮಕಕ್ಕೆ ಅನುಮತಿ ಸಿಕ್ಕಿದೆ ಎನ್ನಲಾಗಿದೆ. ಅಲ್ಲದೆ ಪ್ರತಿ ವರ್ಷ ಜನವರಿಯಿಂದ ಏಪ್ರಿಲ್ವರೆಗೆ ವಾಚರ್ಗಳು ಕರ್ತವ್ಯ ನಿರ್ವಹಿಸುತ್ತಿದ್ದರು, ಆದರೆ ಈ ಬಾರಿ ಫೆಬ್ರವರಿಗೆ ಕರ್ತವ್ಯದಿಂದ ವಿಮುಖಗೊಳಿಸಲಾಗುತ್ತಿದೆ ಎನ್ನಲಾಗಿದೆ. ಇದರಿಂದ ವಾಚರ್ಗಳಲ್ಲಿಲ್ಲದೆ ಬೆಂಕಿ ಅವಘಡ ನಿಯಂತ್ರಿಸುವುದು ಇಲಾಖೆಗೆ ಸವಾಲಿನ ಕೆಲಸವಾಗಲಿದೆ.
ಉದ್ಯೋಗ ಖೋತಾ: ಪ್ರತಿವರ್ಷ ಜನವರಿಯಿಂದ ಏಪ್ರಿಲ್ವರೆಗೆ ಗುತ್ತಿಗೆ ಆಧಾರದಲ್ಲಿ ವಾಚರ್ಗಳನ್ನು ನಿಯೋಜಿಸಲಾಗುತ್ತಿತ್ತು. ಆದರೆ ಈ ಬಾರಿ ಇದಕ್ಕೂ ಬ್ರೇಕ್ ಬಿದ್ದಿದ್ದು ರೈತರ ಜೇಬಿಗೂ ಕತ್ತರಿ ಬಿದ್ದಿದೆ. ಸಾಮಾನ್ಯವಾಗಿ ಸ್ಥಳೀಯ ಜನರನ್ನೇ ವಾಚರ್ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿತ್ತು. ಕೃಷಿ ಚಟುವಟಿಕೆಯಿಲ್ಲದ ಖಾಲಿ ಕುಳಿತಿದ್ದ ಆಸಕ್ತ ಯುವಕರು ಈ ಕರ್ತವ್ಯಕ್ಕೆ ಮುಂದೆ ಬರುತ್ತಿದ್ದರು ಎನ್ನಲಾಗಿದೆ. ಬೇಸಿಗೆ ಮುಗಿಯುವವರೆಗೆ ಈ ವಾಚರ್ಗಳು ಅರಣ್ಯ ಗಡಿ ಪ್ರದೇಶದಲ್ಲಿ ಪಹರೆ ತಿರುಗುತ್ತಿದ್ದು, ಬೆಂಕಿ ಕಾಣಿಸಿಕೊಂಡ ತಕ್ಷಣ ನಂದಿಸುವ ಕಾರ್ಯ ಮಾಡುತ್ತಿದ್ದರು.
ಫೈರ್ಲೈನ್: ಮುಂಜಾಗ್ರತಾ ಕ್ರಮವಾಗಿ ಈಗಾಗಲೇ ಜಿಲ್ಲಾ ಅರಣ್ಯ ಇಲಾಖೆ ಕಾಡ್ಗಿಚ್ಚು ತಡೆಗೆ ಫೈರ್ಲೈನ್ ತಂತ್ರ ಅನುಸರಿಸುತ್ತಿದ್ದು, ಅಗತ್ಯ ಕ್ರಮಕೈಗೊಂಡಿದೆ. ಅಗ್ನಿಶಾಮಕ ಇಲಾಖೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ತಕ್ಷಣ ಕಾರ್ಯಪ್ರವೃತ್ತವಾಗಲು ಸಜ್ಜಾಗಿದೆ.
ಎಲ್ಲೆಲ್ಲಿ ಆತಂಕ: ನೆಲಮಂಗಲ ತಾಲೂಕಿನ ಬಳಗೆರೆ, ಕೊರಟಗೆರೆ, ಹಾಗೂ ನೆಲಮಂಗಲ ಗಡಿ ಅಂಚಿನಲ್ಲಿರುವ ಮಾಗಡಿ, ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಅರಣ್ಯ ಪ್ರದೇಶ, ದೇವನಹಳ್ಳಿಯ ಕೊಯಿರಾ, ಕೊಡಗುರ್ಕಿ, ಕಾರಹಳ್ಳಿ, ನಾರಾಯಣಪುರಬೆಟ್ಟ, ರಾಯಸಂದ್ರಬೆಟ್ಟ, ಹುಲುಕುಂಟೆ ಮತ್ತಿತರ ಕಡೆಗಳಲ್ಲಿ ಕಾಡ್ಗಿಚ್ಚು ಸಂಭವಿಸುವ ಸಾಧ್ಯತೆ ಇದ್ದು, ಈ ಭಾಗಗಳಲ್ಲಿ ಇಲಾಖೆ ಹೆಚ್ಚಿನ ನಿಗಾವಹಿಸಿದೆ.
ಮುಖ್ಯವಾಗಿ ನೀರು ಬೇಕು: ಕಾಡ್ಗಿಚ್ಚು ನಿಯಂತ್ರಣಕ್ಕೆ ದೊಡ್ಡಪ್ರಮಾಣದಲ್ಲಿ ನೀರಿನ ಅವಶ್ಯಕತೆ ಇದೆ, ಈ ಬಗ್ಗೆ ಅಗ್ನಿಶಾಮಕ ಠಾಣೆಗಳಲ್ಲಿನ ಕೊಳವೆಬಾವಿಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲಾಗುತ್ತಿದೆ, ಅಗತ್ಯವಿರುವ ಕಡೆ ಬೋರ್ವೆಲ್ ದುರಸ್ತಿ ಸೇರಿ ನೀರಿನ ಸಂಗ್ರಹಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕರೊನಾ ಕಾರಣದಿಂದ ಅನುದಾನ ಕೊರತೆ ಇದ್ದರೂ ತುರ್ತು ವಿಪತ್ತು ಪರಿಹಾರಕ್ಕೆ ಅನುದಾನ ಲಭ್ಯವಿರಲಿದೆ. ಕಂದಾಯ ಇಲಾಖೆ ಅನುದಾನ ಬಳಕೆ ಮಾಡಲು ಅವಕಾಶವಿದೆ. ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ. ಕಾಡ್ಗಿಚ್ಚು ತಡೆಗೆ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಕೈಗೊಂಡಿದೆ. | ಕೆ. ಶ್ರೀನಿವಾಸ್, ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ದೊಡ್ಡಪ್ರಮಾಣದ ಕಾಡ್ಗಿಚ್ಚು ಕಂಡುಬಂದಿಲ್ಲ, ಆದರೂ ಮುಂಜಾಗ್ರತಾ ಕ್ರಮವಾಗಿ ಅಗತ್ಯ ಕ್ರಮಕೈಗೊಳ್ಳಲಾಗಿದೆ. ಈಗಾಗಲೇ ಅರಣ್ಯದಂಚಿನಲ್ಲಿ ಫೈರ್ಲೈನ್ಗಳನ್ನು ಮಾಡಲಾಗಿದೆ, ಕಾಡ್ಗಿಚ್ಚು ನಿಯಂತ್ರಣಕ್ಕೆ ಇಲಾಖೆ ಸನ್ನದ್ಧವಾಗಿದೆ. | ಅಂಥೋನಿ ಮರಿಯಪ್ಪ, ಉಪ ಪ್ರಾದೇಶಿಕ ಅರಣ್ಯ ಸಂರಕ್ಷಣಾಧಿಕಾರಿ