

ಮಡಿಕೇರಿ:
ಫೆಬ್ರವರಿ ತಿಂಗಳಿನಲ್ಲೇ ಬಿರು ಬೇಸಿಗೆಯ ಅನುಭವ ಆಗುತ್ತಿದ್ದು, ಬಿಸಿಲಿನ ತಾಪಕ್ಕೆ ಅರಣ್ಯಗಳು ಒಣಗಿ ಕಾಳ್ಗಿಚ್ಚು ಹರಡಲು ಸೂಕ್ತ ವಾತಾವರಣ ನಿರ್ಮಾಣ ಆದಂತಿದೆ. ಈ ತಿಂಗಳಿನಲ್ಲಿ ಮಳೆ ಬಾರದಿದ್ದರೆ ಕಾಡಿನೊಳಗೆ ಅಪಾಯಕಾರಿ ಸ್ಥಿತಿ ನಿರ್ಮಾಣ ಆಗುವ ಸಾಧ್ಯತೆಯೂ ಇದೆ. ಅರಣ್ಯದೊಳಗೆ ಈಗ ಮರಗಳ ಎಲೆ ಉದುರಿ ಒಣಗಿ ತರಗಲೆಗಳಂತಾಗಿದ್ದು ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯಲ್ಲೂ ಕಾಳ್ಗಿಚ್ಚಿನ ಆತಂಕ ಕಾಣಿಸಿಕೊಂಡಿದೆ. ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕುಶಾಲನಗರ ಸಮೀಪದಲ್ಲಿ ಸಿಗುವ ಆನೆಕಾಡು ಅರಣ್ಯ ಪ್ರದೇಶ, ನಾಗರಹೊಳೆ ವನ್ಯ ಜೀವಿ ವಲಯ ಹಾಗೂ ಪುಷ್ಪಗಿರಿ ವನ್ಯ ಜೀವಿ ವಲಯ ಕಾಳ್ಗಿಚ್ಚು ವಿಷಯದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ.
ಬಹುತೇಕ ಮಾನವ ಹಸ್ತಕ್ಷೇಪದಿಂದಲೇ ಪ್ರತಿವರ್ಷವೂ ಅರಣ್ಯಕ್ಕೆ ಬೆಂಕಿ ಬೀಳುವ ಪ್ರಕರಣಗಳು ವರದಿಯಾಗುತ್ತಿದೆ. ಕಳೆದ ವರ್ಷ ಯಡವನಾಡು ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಳ್ಳಲು ದುಷ್ಕರ್ಮಿಗಳ ಕೈವಾಡವೇ ಕಾರಣ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದರು. ಕೊಡಗಿನಲ್ಲಿ ಒಟ್ಟು ಶೇ. 79.56 ಪ್ರದೇಶದಲ್ಲಿ ಅಂದರೆ ಸುಮಾರು 3,263.38 ಚ.ಕಿ.ಮೀ. ಅರಣ್ಯ ಪ್ರದೇಶ ಇದೆ. ಪ್ರತಿ ವರ್ಷವೂ ಕಾಣಿಸಿಕೊಳ್ಳುವ ಕಾಳ್ಗಿಚ್ಚಿನಿಂದ ವನ್ಯ ಸಂಪತ್ತು ನಾಶವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ.
ಈ ಮಧ್ಯೆ ಅರಣ್ಯ ಇಲಾಖೆಯೂ ಬೇಸಿಗೆಯನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ. ಅಮೂಲ್ಯ ಅರಣ್ಯ ಸಂಪತ್ತು ರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸಂಭಾವ್ಯ ಕಾಳ್ಗಿಚ್ಚು ವಿರುದ್ಧ ಅರಣ್ಯದ ಅಂಚಿನಲ್ಲಿ ಅಗ್ನಿರೇಖೆಗಳನ್ನು (ಫೈರ್ ಲೈನ್) ನಿರ್ಮಿಸಲಾಗಿದೆ. ಹಾಲಿ ಇರುವ ಅಗ್ನಿರೇಖೆಗಳನ್ನು ದುರಸ್ತಿಪಡಿಸಲಾಗಿದೆ. ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಿ ಸಂಭಾವ್ಯ ಅಗ್ನಿ ಆಕಸ್ಮಿಕ ಸಂಭವಿಸುವ ಸ್ಥಳಗಳಲ್ಲಿ ನಿಯೋಜಿಸಲಾಗಿದೆ. ಅಗತ್ಯ ಉಪಕರಣಗಳನ್ನೂ ಸಿದ್ಧ ಮಾಡಿ ಇಟ್ಟುಕೊಳ್ಳಲಾಗಿದೆ. ಒಂದಿಷ್ಟು ಆಧುನಿಕ ಉಪಕರಣಗಳನ್ನೂ ಅರಣ್ಯ ಇಲಾಖೆ ತಮ್ಮ ಸಿಬ್ಬಂದಿಗೆ ಕೊಟ್ಟಿದೆ.
ಕಾಳ್ಗಿಚ್ಚು ತಡೆಯುವುದು ಕೇವಲ ಅರಣ್ಯ ಇಲಾಖೆಯ ಜವಾಬ್ದಾರಿ ಮಾತ್ರ ಅಲ್ಲ. ಜನ ಸಾಮಾನ್ಯರೂ ಹೊಣೆಯರಿತು ನಡೆಯಬೇಕಾಗುತ್ತದೆ. ಈ ಮೂಲಕ ಅಮೂಲ್ಯ ವನ್ಯ ಸಂಪತ್ತು ರಕ್ಷಣೆಗೆ ನಮ್ಮದೇ ಆದ ಕೊಡುಗೆ ನೀಡಬಹುದಾಗಿದೆ. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಶಾಲಾ - ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಕಾಳ್ಗಿಚ್ಚು ತಡೆಯುವ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದೆ. ಪ್ರಮುಖವಾಗಿ ಪ್ರವಾಸಕ್ಕೆ ತೆರಳುವವರು ತಾವು ತಿನ್ನುವ ಪದಾರ್ಥಗಳ ಮೇಲ್ಭಾಗದ ಪ್ಲಾಸ್ಟಿಕ್, ಗಾಜು ಮುಂತಾದ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು, ಧೂಮಪಾನ ಮಾಡಿ ಕಾಡಿನ ಬದಿ ಹಾಕಬಾರದು. ಈ ಬಗ್ಗೆ ಪ್ರವಾಸಿಗರಿಗೂ ಮನವರಿಕೆ ಮಾಡಬೇಕಿದೆ. ಬೆಂಕಿ ಬಿದ್ದಿರುವುದು ಕಂಡರೆ ತಕ್ಷಣ ಅರಣ್ಯ ಇಲಾಖೆಗೆ ಅಥವಾ ಅಗ್ನಿಶಾಮಕ ಇಲಾಖೆಯ ಗಮನಕ್ಕೆ ತರಬೇಕು. ಪರಿಸರ ರಕ್ಷಣೆ ನಮ್ಮಲ್ಲರ ಜವಾಬ್ದಾರಿ.
ಅಕ್ಷತಾ, ವಿದ್ಯಾರ್ಥಿ, ಮುಳ್ಳೂರು
ಕಾಳ್ಗಿಚ್ಚ್ಚು ತಡೆಯುವುದು ಸರ್ಕಾರದ ಜವಾಬ್ದಾರಿ ಮಾತ್ರ ಅಲ್ಲ. ನಾವು ಎಲ್ಲರೂ ಜಾಗರೂಕರಾಗಿದ್ದರೆ, ಅರಣ್ಯ ಭದ್ರತೆಯಲ್ಲಿ ಭಾಗವಹಿಸಿದರೆ ಅನೇಕ ಪ್ರಾಣಿಗಳನ್ನು ಮತ್ತು ನೈಸರ್ಗಿಕ ಸಂಪತ್ತನ್ನು ರಕ್ಷಿಸಬಹುದು. "ಕಾಡು ಉಳಿಸಿ, ಪ್ರಾಣಿಗಳನ್ನು ರಕ್ಷಿಸಿ" ಎಂಬ ಧ್ಯೇಯ ನಮ್ಮದಾಗಬೇಕು. ಕಾಳ್ಗಿಚ್ಚು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮೊದಲು ಆಗಬೇಕು. ಶಾಲಾ - ಕಾಲೇಜುಗಳಲ್ಲಿ, ಗ್ರಾಮಸ್ಥರ ಸಭೆಗಳಲ್ಲಿ ಜಾಗೃತಿ ಆಂದೋಲನ ನಡೆಯಬೇಕು. ಪ್ರವಾಸದ ಸಂದರ್ಭ ಫೈರ್ ಕ್ಯಾಂಪ್ ನಡೆಸುವುದನ್ನು ನಿರ್ಬಂಧಿಸಬೇಕು.
ಸತೀಶ್, ಶಿಕ್ಷಕ, ಸರ್ಕಾರಿ ಪ್ರಾಥಮಿಕ ಶಾಲೆ, ಮುಳ್ಳೂರು
ಬೇಸಿಗೆಯಲ್ಲಿ ಕಾಳ್ಗಿಚ್ಚು ಸಾಮಾನ್ಯವಾಗಿದ್ದು, ಇದಕ್ಕೆ ಮೂಲ ಕಾರಣ ಮನುಷ್ಯರು. ಸಿಗರೇಟು, ಬೀಡಿ, ಬೆಂಕಿಪೊಟ್ಟಣ ಕಡ್ಡಿಗಳು ಹಾಗೂ ಅರ್ಧ ಉರಿದ ಸೌದೆಗಳನ್ನು ಒಣಗಿದ ಮರ, ಪೊದೆ, ಗಿಡಗಳ ಮೇಲೆ ಎಸೆಯುವುದರಿಂದ ಕಾಳ್ಗಿಚ್ಚು ಉಂಟಾಗುತ್ತದೆ. ಇಂಥ ತಪ್ಪುಗಳು ಆಗದಂತೆ ಜನತೆ ಜಾಗೃತರಾಗಬೇಕು. ಲೇಖನ, ಬೀದಿನಾಟಕ, ಮೆರವಣಿಗೆ ಇತ್ಯಾದಿಗಳಿಂದ ಸಾರ್ವಜನಿಕವಾಗಿ ಜಾಗೃತಿ ಮೂಡಿಸಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿ ದೆಸೆಯಲ್ಲೇ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು.
ಶ.ಗ. ನಯನತಾರ, ಸಾಹಿತಿ, ಶನಿವಾರಸಂತೆ
ಕಾಳ್ಗಿಚ್ಚಿಗೆ ಮೂಲ ಮನುಷ್ಯರ ಬೇಜವಾಬ್ದಾರಿತನ. ಆದಷ್ಟು ಜನ ಸಾಮಾನ್ಯರು ಕಾಡಿನಂಚಿನಲ್ಲಿ ಹಾಗೂ ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ಅಗ್ನಿ ಸಂಭವಿಸುವ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಒಂದು ಬೇಜವಾಬ್ದಾರಿ ಹಾಗೂ ತಪ್ಪು ನಿರ್ದಾರದಿಂದ ಬೆಂಕಿ ಹತ್ತಿಕೊಂಡು ಉರಿಯುವುದರಿಂದ ಅರಣ್ಯ ನಾಶವಾಗುತ್ತದೆ. ಹಲವಾರು ಶತಮಾನಗಳಿಂದ ಬಂದ ಅರಣ್ಯ ಆಹುತಿ ಆಗಿ ಬಿಡುತ್ತದೆ. ಆದರಿಂದ ಅರಣ್ಯ ಪ್ರದೇಶದಲ್ಲಿ ಸಂಚರಿಸುವಾಗ ಎಚ್ಚರಿಕೆ ಅಗತ್ಯ.
ಎಂ.ಜಿ. ರಕ್ಷಿತಾ, ವಿದ್ಯಾರ್ಥಿನಿ, ವಿರಾಜಪೇಟೆ
ಅರಣ್ಯ ಪ್ರದೇಶಗಳಲ್ಲಿ ಕಾಳ್ಗಿಚ್ಚು ಸಂಭವಿಸಲು ಮುಖ್ಯ ಪಾತ್ರ ಮನುಷ್ಯನದ್ದೇ ಆಗಿರುತ್ತದೆ. ಅರಣ್ಯ ಪ್ರದೇಶ ಹಾಗೂ ಅರಣ್ಯ ಪ್ರದೇಶದ ಸಮೀಪ ಕಳ್ಳ ಬೇಟೆಗೆ ಹೋಗುವುದನ್ನು ಮೊದಲು ನಿಯಂತ್ರಿಸಬೇಕು. ಅರಣ್ಯ ಪ್ರದೇಶದ ಸಮೀಪವಿರುವ ಪ್ರವಾಸಿ ತಾಣ ಹಾಗೂ ಖಾಸಗಿ ಕಟ್ಟಡಗಳಲ್ಲಿ ಫೈಯರ್ ಕ್ಯಾಂಪ್ ಹಾಗೂ ಇನ್ನಿತರ ಅಗ್ನಿಪೂರಿತ ಚಟುವಟಿಕೆಗಳನ್ನು ನಿಷೇಧಿಸಬೇಕು. ಪ್ರವಾಸೋದ್ಯಮದ ಹೆಸರಿನಲ್ಲಿ ಪ್ರವಾಸಿಗರು ಅರಣ್ಯ ಪ್ರದೇಶಕ್ಕೆ ಹೋಗಿ ಮೋಜು ಮಸ್ತಿ ಮಾಡುವುದನ್ನು ನಿರ್ಬಂಧಿಸಬೇಕು. ಹೆಚ್ಚು ಜನ ಸಂಪರ್ಕ ಹಾಗೂ ಕಾಡ್ಗಿಚ್ಚು ಸಂಭವಿಸಬಹುದಾದ ಸೂಕ್ಷ್ಮ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಗಸ್ತು ತಿರುಗಿಸುವ ವ್ಯವಸ್ಥೆ ಮಾಡಿಸಬೇಕು.
ಶಶಿ ಅಚ್ಚಪ್ಪ, ಸಂಚಾಲಕ, ಕೊಡಗು ಪರಿಸರ ಸಂರಕ್ಷಣಾ ಹೋರಾಟ ಸಮಿತಿ, ವಿರಾಜಪೇಟೆ
ಕಾಳ್ಗಿಚ್ಚಿನಿಂದ ಅರಣ್ಯ ರಕ್ಷಣೆ ಮಾಡಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಳ್ಳಬೇಕು. ಮೀಸಲು ಅರಣ್ಯ ರಕ್ಷಣೆಗೆ ಹೆಚ್ಚಿನ ಸಿಬ್ಬಂದಿ ನೇಮಿಸಿ, ಸೌಲಭ್ಯ ಗಳನ್ನು ಒದಗಿಸಬೇಕು. ವೈಜ್ಞಾನಿಕ ಸಲಕರಣೆಗಳಿಲ್ಲದೆ ಅರಣ್ಯ ರಕ್ಷಣೆ ಅಸಾಧ್ಯ.
ಬಿ. ಆರ್. ಯಮುನಾ, ಗೃಹಿಣಿ, ಐಗೂರು ಗ್ರಾಮ
ಬೇಸಿಗೆಯಲ್ಲಿ ಅರಣ್ಯಕ್ಕೆ ಬೆಂಕಿ ಬಿದ್ದರೆ ಅಪರೂಪದ ವನ್ಯ ಪ್ರಾಣಿಗಳು, ಬೆಲೆಬಾಳುವ ಮರಗಳು ಬೆಂಕಿಗಾಹುತಿ ಆಗುತ್ತದೆ. ಆ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಅರಣ್ಯ ಇಲಾಖೆಗೆ ದೊಡ್ಡ ಮಟ್ಟದ ಜವಾಬ್ದಾರಿ ಇದೆ. ಅಲ್ಲದೆ ಸಾರ್ವಜನಿಕರು ಅರಣ್ಯ ರಕ್ಷಣೆಗೆ ತಮ್ಮ ಸೇವೆ ಸಲ್ಲಿಸಬೇಕು.
ಕೆ. ಎ. ಆದಂ, ಅಧ್ಯಕ್ಷ, ಸೂಡ, ಸೋಮವಾರಪೇಟೆ
ಅರಣ್ಯವನ್ನು ಬೆಂಕಿಯಿAದ ರಕ್ಷಿಸಲು ತಿತಿಮತಿ ಅರಣ್ಯ ವ್ಯಾಪ್ತಿಯ ಗ್ರಾಮಗಳಲ್ಲಿ ಸಂಘ ಸಂಸ್ಥೆಗಳು, ಶಾಲಾ ವಿದ್ಯಾರ್ಥಿಗಳ ಮೂಲಕ ಜನರಿಗೆ ಅರಣ್ಯಗಳ ಬಗ್ಗೆ ಕಾಳಜಿ ಮೂಡುವಂತೆ ಬೀದಿ ನಾಟಕಗಳ ಮೂಲಕ ಜಾಗೃತಿ ಮೂಡಿಸಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಇಲಾಖೆ ಸಿಬ್ಬಂದಿಯಿAದ ನಿರಂತರ ಗಸ್ತು, ಫೈರ್ ಲೈನ್ ನಿರ್ಮಾಣ ಮಾಡಲಾಗಿದೆ.
ಗಂಗಾಧರ್, ವಲಯ ಅರಣ್ಯಾಧಿಕಾರಿ, ತಿತಿಮತಿ ವಲಯ
ಕಾಳ್ಗಿಚ್ಚು ವಿರುದ್ಧ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಕಿ ನಂದಿಸುವ ಬಗ್ಗೆ ಅಗ್ನಿಶಾಮಕ ಇಲಾಖೆ ಜತೆ ಸೇರಿಕೊಂಡು ನಮ್ಮ ಸಿಬ್ಬಂದಿಗೆ ತರಬೇತಿ ಕೊಡಿಸಲಾಗಿದೆ. ಅಗ್ನಿ ಶಾಮಕ ಉಪಕರಣಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲಾಗಿದೆ. ಫೈರ್ ಬ್ಲೋಯರ್ಸ್, ಮಿಸ್ಟ್ ಬ್ಲೋಯರ್ಸ್, ಅಗ್ನಿ ನಿರೋಧಕ ಜಾಕೆಟ್, ಪ್ರಥಮ ಚಿಕಿತ್ಸೆ ಕಿಟ್ ನಮ್ಮ ಸಿಬ್ಬಂದಿಗೆ ಒದಗಿಸಲಾಗಿದೆ. ಅಗ್ನಿ ಶಾಮಕ ದಳದ ಜತೆಗೂ ಸಮನ್ವಯತೆ ಇಟ್ಟುಕೊಳ್ಳಲಾಗಿದೆ. ಫೈರ್ ವಾಚರ್ಸ್ ಮಾತ್ರವಲ್ಲದೇ ಸಂದರ್ಭಕ್ಕೆ ಅನುಗುಣವಾಗಿ ಆರ್‌ಆರ್‌ಟಿ ಮತ್ತು ಇಟಿಎಫ್ ಸಿಬ್ಬಂದಿ ಬಳಸಿಕೊಳ್ಳಲಾಗುವುದು.
ಭಾಸ್ಕರ್, ಡಿಸಿಎಫ್, ಮಡಿಕೇರಿ ಅರಣ್ಯ ವಿಭಾಗ