ಕಾಳ್ಗಿಚ್ಚು ತಡೆಗೆ ಸಾರ್ವಜನಿಕರ ಪಾತ್ರವೇನು ?

mdk14sun01
Published on

ಮಡಿಕೇರಿ: ಬೇಸಿಗೆಯ ಬಿಸಿಲಿನ ಝಳ ಹೆಚ್ಚಾಗುತ್ತಿದ್ದಂತೆಯೇ ಕಾಡ್ಗಿಚ್ಚಿನ ಅಪಾಯವೂ ಕಾಣಿಸಿಕೊಂಡಿದೆ. ಜಿಲ್ಲೆಯ ಹಲವೆಡೆ ಈಗಾಗಲೇ ಕಾಡಿನ ಬೆಂಕಿ ಸಾಕಷ್ಟು ಅನಾಹುತಕ್ಕೆ ಕಾರಣವಾಗಿದೆ. ಸದ್ಯದಲ್ಲಿ ಉತ್ತಮ ಮಳೆ ಬಾರದಿದ್ದರೆ ಆತಂಕ ಮತ್ತಷ್ಟು ಹೆಚ್ಚಲಿದೆ. ಮನುಷ್ಯನ ಹಸ್ತಕ್ಷೇಪದಿಂದಲೇ ಕಾಡ್ಗಿಚ್ಚು ಹರಡುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿ ಆಗುತ್ತಿದೆ. ಕಾಡ್ಗಿಚ್ಚಿನ ವಿಷಯದಲ್ಲಿ ಕುಶಾಲನಗರ ಅರಣ್ಯ ವಲಯ ತುಂಬಾ ಸೂಕ್ಷ್ಮ ಪ್ರದೇಶವಾಗಿದೆ. ಆನೆಕಾಡು, ದುಬಾರೆ, ಕಾವೇರಿ ನಿಸರ್ಗಧಾಮ, ಕಲ್ಲೂರು, ಅತ್ತೂರು ಸೇರಿದಂತೆ ಸಾಕಷ್ಟು ವನ್ಯ ಪ್ರದೇಶಗಳು ಬೇಸಿಗೆ ಕಾಲದಲ್ಲಿ ಅರಣ್ಯ ಇಲಾಖೆ ಪಾಲಿಗೆ ಸವಾಲಾಗಿ ಪರಿಣಮಿಸುತ್ತದೆ. ಇದನ್ನು ಹೊರತುಪಡಿಸಿದರೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ, ಬ್ರಹ್ಮಗಿರಿ ರಕ್ಷಿತಾರಣ್ಯ, ತಲಕಾವೇರಿ ವನ್ಯಜೀವಿಧಾಮ ಹೀಗೆ ಹಲವು ಪ್ರದೇಶಗಳು ಕಾಡ್ಗಿಚ್ಚಿನ ನೆರಳಿನಲ್ಲೇ ಇದೆ.
ಈ ಹಿಂದಿನ ಅನುಭವಗಳಿಂದ ಅರಣ್ಯ ಇಲಾಖೆ ಸೂಕ್ತ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದೆ. ಈಗಾಗಲೇ ಅರಣ್ಯದಂಚಿನಲ್ಲಿ ಅಗ್ನಿರೇಖೆ ಎಳೆಯಲಾಗಿದೆ. ವಿಶೇಷ ಸಿಬ್ಬಂದಿ ಅರಣ್ಯದೊಳಗೆ ಮತ್ತು ವಿಶೇಷವಾಗಿ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಗಸ್ತು ತಿರುಗುತ್ತಿದ್ದಾರೆ. ನೀರು ತುಂಬಿಸಿಕೊಂಡು ಟ್ಯಾಂಕರ್‌ಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳಲಾಗಿದೆ. ಇಲಾಖೆ ಜೊತೆ ಸಾರ್ವಜನಿಕರ ಸಹಕಾರವೂ ಇದ್ದರೆ ಅಮೂಲ್ಯ ವನ್ಯ ಸಂಪತ್ತನ್ನು ಕಾಪಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಜವಾಬ್ದಾರಿ ಏನು ಎನ್ನುವುದರ ಬಗ್ಗೆ ಸಂಗ್ರಹಿಸಲಾದ ಅಭಿಪ್ರಾಯಗಳು ಇಲ್ಲಿದೆ.

ಕಾಡಿನ ಬೆಂಕಿಗೆ ಕಡಿವಾಣ ಹಾಕುವಲ್ಲಿ ಜನಸಾಮಾನ್ಯರ ಜವಾಬ್ದಾರಿ ಹೆಚ್ಚಿದೆ. ಪ್ರವಾಸಿಗರು ಸೇರಿದಂತೆ ಇತರರು ರಸ್ತೆ ಬದಿಯಲ್ಲಿ ತಿಂಡಿ ತಿನಿಸುಗಳನ್ನು ತಿಂದು ಬಿಸಾಡುವ ಪ್ಲಾಸ್ಟಿಕ್ ಪೇಪರ್ ಇವುಗಳನ್ನು ಬೆಂಕಿ ಹಾಕಿ ರಸ್ತೆ ಬದಿಯಲ್ಲಿ ಸುಡುವ ಕೆಲಸ ಮಾಡುತ್ತಾರೆ. ಆದುದರಿಂದ ರಸ್ತೆ ಬದಿಗೆ ಯಾವುದೆ ರೀತಿಯ ಪೇಪರ್, ಪ್ಲಾಸ್ಟಿಕ್ ಬಿಸಾಡದೆ ಅದನ್ನು ಮನೆಗೆ ಕೊಂಡೊಯ್ದು ಸುಟ್ಟರೆ ಈ ರೀತಿಯಲ್ಲಿ ಕಾಡ್ಗಿಚ್ಚು ಬರುವುದಿಲ್ಲ.
ಕುಮಾರಿ, ಚೈಲ್ಡ್ ಲೈನ್ ಕಾರ್ಯಕರ್ತೆ, ಆಲೂರು ಸಿದ್ದಾಪುರ

ಕಾಡ್ಗಿಚ್ಚನ್ನು ತಡೆಯುವ ಜವಾಬ್ದಾರಿ ಸಂಬಂಧಪಟ್ಟ ಇಲಾಖೆಗೆ ಮಾತ್ರವಲ್ಲ ಪ್ರತಿಯೊಬ್ಬ ನಾಗರಿಕರ ಮೇಲೂ ಇದೆ. ಇತ್ತಿಚಿನ ದಿನಗಳಲ್ಲಿ ಪ್ರತಿ ವರ್ಷವೂ ಕಾಡಿಗೆ ಬೆಂಕಿ ತಗುಲಿ ಕಾಡು ಬರಡಾಗುತಿದೆ. ಕಾಡು ಬರಡಾಗುವುದರ ಜೊತೆಗೆ ಕಾಡಿನ ಪ್ರಾಣಿಗಳು ನಶಿಸುತಿದೆ. ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಸಾರ್ವಜನಿಕರು ನಂದಿಸಲು ಮುಂದಾಗಬೇಕಾಗಿದೆ. ಇಲಾಖೆ ಸಿಬ್ಬಂದಿ ಬರುವವರೆಗೆ ಕಾಯಬಾರದು.
ಎಂ.ಎ. ರುಬೀನಾ, ಅಧ್ಯಕ್ಷೆ, ಪುಷ್ಪಗಿರಿ ಜೆಸಿಐ, ಸೊಮವಾರಪೇಟೆ

ಕೊಡಗು ಈಗಾಗಲೇ ಮಹಾ ಮಳೆಗೆ ತತ್ತರಿಸಿ ಹೋಗಿದೆ. ಕಾಡಿನ ಅನೇಕ ಮರಗಿಡಗಳು ಕಾಣದಾಗಿದೆ. ಈವಾಗಲಾದಾರೂ ಜನ ಸಾಮಾನ್ಯರು ಇರುವ ಪರಿಸರ ಉಳಿಸಿಕೊಳ್ಳಲು ಪ್ರಯತ್ನ ಮಾಡಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಒಮ್ಮೆ ಕಾಡಿಗೆ ಬೆಂಕಿ ತಗುಲಿದರೆ ಲಕ್ಷಾಂತರ ಮರಗಿಡಗಳು ನಶಿಸುತ್ತದೆ. ಅದನ್ನು ಮತ್ತೆ ಬೆಳೆಸಲು ಅನೇಕ ವರ್ಷಗಳೇ ಬೇಕು. ಕಾಡು ರಕ್ಷಣೆ ಪ್ರತಿಯೊಬ್ಬ ನಾಗರಿಕರ ಹೊಣೆಯಾಗಿದೆ.
ಅಶ್ವಿನಿ, ಸಮಾಜ ಸೇವಕಿ, ಸೊಮವಾರಪೇಟೆ

ಕಾಡಂಚಿನಲ್ಲಿ ಇರುವ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾಡುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಬೇಕು. ಕಾಡ್ಗಿಚ್ಚು ತಡೆಗಟ್ಟಲು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಅಗತ್ಯ ಉಪಕರಣಗಳನ್ನು ನೀಡಬೇಕು. ಸಾರ್ವಜನಿಕರು ಕೂಡ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು.
ಹೇಮಂತ್ ಕುಮಾರ್, ಯಲಕನೂರು ಗ್ರಾಮಸ್ಥ

ಕೊಡಗಿಗೆ ಬರುವ ಪ್ರವಾಸಿಗರಿಗೆ ಕಾಡ್ಗಿಚ್ಚು ವಿಚಾರದಲ್ಲಿ ಜಾಗೃತಿ ಮೂಡಿಸಬೇಕು. ಕಾಡು ಪ್ರದೇಶಗಳಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಬೇಕು. ಕಾಡುಗಳ ಸಮೀಪದಲ್ಲಿ ಇರುವವರಿಗೆ ಮುನ್ನೆಚ್ಚರಿಕೆ ವಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ಮುಂದಾಗಬೇಕು.
ಜಯಪ್ರಕಾಶ ಕಾಶಿ, ಕುಶಾಲನಗರ.

ಕಾಡ್ಗಿಚ್ಚು ನಂದಿಸಲು ಸಾರ್ವಜನಿಕರು ಯಾರಾದರೂ ಸ್ವಯಂ ಸೇವಕರಾಗಿ ಮುಂದೆ ಬಂದರೆ ಖಂಡಿತ ಬಳಸಿಕೊಳ್ಳಲಾಗುತ್ತದೆ. ಅರಣ್ಯ ಇಲಾಖೆಯ ತರಬೇತಿ ಕೇಂದ್ರದಲ್ಲಿ ಇಲಾಖೆಯ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದೆ. ಗಿರಿಜನರು, ಅದಿವಾಸಿಗಳು ಇಲಾಖೆಯೊಂದಿಗೆ ಇದ್ದಾರೆ. ಸಾರ್ವಜನಿಕರು ಕೂಡ ಜಾಗರೂಕರಾಗಿ ನಡೆದುಕೊಳ್ಳುವುದು ಒಳ್ಳೆಯದು. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು.
ಶಿವರಾಮ್, ಆರ್‌ಎಫ್‌ಓ, ಕುಶಾಲನಗರ.

ಅರಣ್ಯ ಮತ್ತು ಅರಣ್ಯದಂಚಿನ ನಿವಾಸಿಗಳಲ್ಲಿ ಬೆಂಕಿಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ. ಜನರು ಕೂಡ ಅರಣ್ಯ ಭಾಗಕ್ಕೆ ತೆರಳುವ ಮುನ್ನ ಸಾಕಷ್ಟು ಮುಂಜಾಗೃತೆ ವಹಿಸಬೇಕಿದೆ. ಸ್ವಾಭಾವಿಕವಾಗಿ ಬೆಂಕಿ ಹೊತ್ತಿಕೊಳ್ಳುವುದು ತೀರ ವಿರಳ. ಮಾನವನ ಮುಂಜಾಗೃತೆ ಅವಶ್ಯ. ಧೂಮಪಾನ ಮಾಡುವವರು ಎಚ್ಚರಿಕೆ ವಹಿಸಬೇಕು
ಕುಂಞಂಗಡ ಬೋಸ್ ಮಾದಪ್ಪ, ಉಪಾಧ್ಯಕ್ಷರು, ವನ್ಯಜೀವಿ ಸೊಸೈಟಿ, ಶ್ರೀಮಂಗಲ

ನಿಸರ್ಗದ ಸಂಪತ್ತು ಕಾಡು. ಇದರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಬೇಸಿಗೆಯಲ್ಲಿ ಅರಣ್ಯ ಪ್ರದೇಶದತ್ತ ತೆರಳುವಾಗ ಬೆಂಕಿ ಉತ್ಪಾದಿಸುವ ವಸ್ತುಗಳಿಂದ ದೂರವಿರುವುದು ಸೂಕ್ತ. ಜನ ಓಡಾಡುವ ಸ್ಥಳಗಳಲ್ಲಿ ಆದಷ್ಟು ಒಣಗಿದ ಎಲೆಗಳನ್ನು ತೆರವು ಮಾಡುವುದು, ಕಾಡಿನ ರಕ್ಷಣೆ ಬಗ್ಗೆ ಸಾಮಾಜಿಕ ತಾಲತಾಣದ ಮೂಲಕ ಜಾಗೃತಿ ಮೂಡಿಸುವುದು, ಬೆಂಕಿ ನಂದಿಸುವ ಮಾರ್ಗವನ್ನು ಅರಿತುಕೊಳ್ಳುವುದು ಒಳ್ಳೆಯದು.
ಪುತ್ತಾಮನೆ ವಿದ್ಯಾ ಜಗದೀಶ್, ಪರಿಸರ ಪ್ರೇಮಿ, ಕಿರುಗೂರು

ತ್ಯಾಜ್ಯದಿಂದ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಬಗ್ಗೆ ಸಾಮಾನ್ಯ ಜನರು ಅರಿತುಕೊಳ್ಳಬೇಕಿದೆ. ಅರಣ್ಯ, ತೋಟ ಸಮೀಪದ ಬೆಂಕಿಯಿಂದ ಸುಡುವ ಪ್ರಯತ್ನ ಮಾಡಬಾರದು. ಕಾನೂನು ಕೂಡ ಜನ ಸಾಮಾನ್ಯರಿಗೆ ಅರಿಯಬೇಕಿದೆ.
ಮಲ್ಲಮಾಡ ಶಾಮಲಾ ಸುನಿಲ್, ಕಲಾವಿದೆ, ಬೆಕ್ಕೆಸೊಡ್ಲೂರು

ಕಾಳ್ಗಿಚ್ಚು ಅನಾಹುತ ತಡೆಯುವಲ್ಲಿ ಗ್ರಾಮೀಣ ಜನರ ಪಾತ್ರ ಬಹಳಷ್ಟು ಇದೆ. ಅರಣ್ಯದಲ್ಲಿ ಬೆಂಕಿ ಕಾಣಿಸಿಕೊಂಡಾಗ ಪ್ರಾರಂಭದಲ್ಲಿ ನಂದಿಸುವ ಪ್ರಯತ್ನ ಮಾಡಬೇಕು. ಬೆಂಕಿ ತೀವ್ರತೆ ಜಾಸ್ತಿಯಾದರೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು. ಈಗಾಗಲೇ ಕೆಲವು ಕಡೆ ಗ್ರಾಮಸ್ಥರೇ ಬೆಂಕಿ ನಂದಿಸಿದ ಪ್ರಕರಣಗಳಿವೆ. ಅರಣ್ಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಕೂಡ.
ಪ್ರದೀಪ್ ಕುಮಾರ್, ಕೃಷಿಕ. ಕೂತಿ ಗ್ರಾಮ.

ಬಿಸಿಲು ಹೆಚ್ಚಾಗಿದೆ. ಒಂದು ಕಿಡಿಯಲ್ಲೇ ಬೆಂಕಿ ಹತ್ತಿಕೊಳ್ಳುತ್ತದೆ. ಅರಣ್ಯದ ಪಕ್ಕದಲ್ಲಿ ಯಾರು ಬೆಂಕಿ ಹಾಕುವ ಪ್ರಯತ್ನ ಮಾಡಬಾರದು. ಅರಣ್ಯದ ಪಕ್ಕದಲ್ಲಿ ಬೀಡಿ, ಸಿಗರೇಟು ಸೇದಿ ಎಸೆಯಬಾರದು. ಮಳೆ ಬೀಳುವ ತನಕ ಕಾಫಿ ತೋಟದ ಸನಿಹದಲ್ಲಿ ಬೆಂಕಿ ಹಾಕಬಾರದು. ಬೆಂಕಿ ಕಿಡಿ ದೂರಕ್ಕೂ ಹಾರಬಹುದು. ಅರಣ್ಯದಲ್ಲಿ ಅಪೂರ್ವ ಜೀವಸಂಕುಲಗಳು, ಮರಗಿಡಗಳು ಇರುತ್ತವೆ. ಅವುಗಳ ರಕ್ಷಣೆ ಮಾಡಬೇಕು.
ಲಕ್ಷ್ಮಣ, ಕಾಫಿ ಬೆಳೆಗಾರ, ಗರಗಂದೂರು, ಗ್ರಾಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net