2.5 ಸಾವಿರ ಹೆಕ್ಟೇರ್ ಅರಣ್ಯ ಒತ್ತುವರಿ!

cage
Published on

ಶಿವರಾಜ ಎಂ.ಬೆಂಗಳೂರು ಗ್ರಾಮಾಂತರ

ನಾಲ್ಕೂ ತಾಲೂಕು ವ್ಯಾಪ್ತಿ ಹೊಂದಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸುಮಾರು 2.5 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದ್ದು, ಕಾಡುಮೃಗಗಳ ವಾಸಸ್ಥಾನಕ್ಕೆ ಇದು ಕುತ್ತು ತಂದಿದೆ. ಇದರ ಪರಿಣಾಮ ಕಾಡುಮೃಗಗಳು ಬೇಟೆಗಾಗಿ ಕಾಡಂಚಿನ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿವೆ ಎಂಬ ವಿಶ್ಲೇಷಣೆ ಕೇಳಿಬರುತ್ತಿದೆ.

ನೆಲಮಂಗಲ ತಾಲೂಕು ಶಿವಗಂಗೆ ಬೆಟ್ಟದ ತಪ್ಪಲಿನ ಕಂಬಾಳು ಗೊಲ್ಲರಹಟ್ಟಿಯಲ್ಲಿ ಕಾಡುಮೃಗ ಮಹಿಳೆಯೊಬ್ಬರ ಬಲಿ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಒತ್ತುವರಿ ವಿಷಯ ಮುನ್ನೆಲೆಗೆ ಬಂದಿದ್ದು, ಕಾಡುಪ್ರಾಣಿಗಳು ಹಾಗೂ ಮಾನವರ ನಡುವಿನ ಸಂಘರ್ಷಕ್ಕೆ ಕಾಡಿನ ವಿಸ್ತೀರ್ಣ ಗರಿಷ್ಟ ಪ್ರಮಾಣದಲ್ಲಿ ಕುಗ್ಗುತ್ತಿದೆ ಎಂಬ ವಾದ ಕೇಳಿಬರುತ್ತಿದೆ. ವರ್ಷದಿಂದ ವರ್ಷಕ್ಕೆ ಅರಣ್ಯದಂಚಿನ ಪ್ರದೇಶಗಳು ಕೃಷಿ ಭೂಮಿಗಳಾಗಿ ಮಾರ್ಪಾಡಾಗುತ್ತಿದ್ದು, ವನ್ಯಜೀವಿಗಳಿಗೆ ತಾಣವಿಲ್ಲದಂತಾಗಿದೆ. ಇದರಿಂದ ಕಾಡುಪ್ರಾಣಿಗಳ ಆಹಾರಕ್ಕೆ ಹಾಹಾಕಾರ ಎದುರಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಅತಂಕ ವ್ಯಕ್ತಪಡಿಸಿದ್ದಾರೆ.

ಜನರೇ ತೋರಿಸಿದ ದಾರಿ!ನೆಲಮಂಗಲ ತಾಲೂಕು ದಾಬಸ್‌ಪೇಟೆ, ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ, ಹುಲುಕುಡಿ ಬೆಟ್ಟ ಸೇರಿ ಇನ್ನಿತರ ಕಡೆಗಳಲ್ಲಿ ಅರಣ್ಯದಂಚಿನ ಗ್ರಾಮಸ್ಥರಿಂದ ಸಾಕಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ದನಕರು, ಕುರಿಮೇಕೆಗಳನ್ನು ಮೇಯಿಸಲು ಕಾಡಿನ ದಾರಿ ಹಿಡಿದಿರುವುದರಿಂದ ಕಾಡುಪ್ರಾಣಿಗಳಿಗೆ ಜನರೆ ದಾರಿ ತೋರಿಸಿದಂತಾಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಅರಣ್ಯದಲ್ಲಿ ಮೇಯಲು ಬರಲು ಜಾನುವಾರುಗಳು ಸುಲಭವಾಗಿ ಕಾಡುಮೃಗಗಳ ಬೇಟೆಗೆ ಸಿಗುತ್ತಿವೆ. ರುಚಿ ಕಂಡ ಮೃಗಗಳು ಅವುಗಳನ್ನು ಹಿಂಬಾಲಿಸಿ ಗ್ರಾಮಗಳತ್ತ ಲಗ್ಗೆ ಹಾಕುತ್ತಿವೆ ಎಂಬುದು ಅರಣ್ಯ ಇಲಾಖೆಯ ವಾದವಾಗಿದೆ.

ಚಿರತೆಗಳ ಸಂತತಿ ಹೆಚ್ಚು:ಸಾಮಾನ್ಯವಾಗಿ ಗ್ರಾಮಾಂತರ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಿದೆ, ಬನ್ನೇರುಘಟ್ಟ ಅರಣ್ಯ ಪ್ರದೇಶದಿಂದ ಹಿಡಿದು ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಅರಣ್ಯ ಪ್ರದೇಶದವರೆಗೆ ಸಂಪರ್ಕ ಹೊಂದಿರುವ ಅರಣ್ಯ ಪ್ರದೇಶಗಳಲ್ಲಿ ಚಿರತೆಗಳ ಸಂಚಾರ ಸಾಮಾನ್ಯವಾಗಿದೆ. ಚಿರತೆಯೊಂದು ಒಂದು ರಾತ್ರಿಯಲ್ಲಿ ಕನಿಷ್ಟ 20 ಕಿ.ಮೀ ಸಂಚಾರ ನಡೆಸುತ್ತದೆ ಎನ್ನಲಾಗಿದ್ದು, ಒಂದು ಜಾಗದಿಂದ ಮತ್ತೊಂದು ಕಡೆ ಸಂಚಾರ ಬದಲಿಸುತ್ತಿರುತ್ತದೆ, ಆದರೆ ಬೇಟೆ ಎಲ್ಲಿ ಹೆಚ್ಚು ದೊರೆಯುತ್ತದೆ ಎಂಬುದನ್ನು ಗುರುತು ಮಾಡಿಕೊಳ್ಳುವ ಚಿರತೆಗಳು ಆ ವ್ಯಾಪ್ತಿಯಲ್ಲಿ ಹೆಚ್ಚು ಸಂಚಾರ ನಡೆಸುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನರಿಂದ ಕಾಡುಪ್ರಾಣಿಗಳ ಬೇಟೆ:ಅರಣ್ಯ ಪ್ರದೇಶದಲ್ಲಿನ ಕಾಡುಹಂದಿ, ಮೊಲ, ಜಿಂಕೆ, ಅಳಿಲು, ಉಡದಂಥ ಪ್ರಾಣಿಗಳನ್ನು ಬೇಟೆಯಾಡುವವರ ಸಂಖ್ಯೆಯೂ ಹೆಚ್ಚಿದೆ. ಇಂದಿಗೂ ಹಲವು ಗ್ರಾಮಗಳಲ್ಲಿ ಇಂಥ ಕಾಡುಪ್ರಾಣಿಗಳನ್ನು ಬೇಟೆಯಾಡಿ ಮಾಂಸಕ್ಕೆ ಬಳಸುವವರಿದ್ದಾರೆ, ಇದರ ಜತೆಗೆ ಪ್ರಾಣಿಗಳ ಚರ್ಮವನ್ನು ಮಾರಾಟ ಮಾಡುವಂತ ದಂಧೆಯೂ ಸದ್ದಿಲ್ಲದೆ ಕೆಲಸ ಮಾಡುತ್ತಿದೆ, ಇದರಿಂದಾಗಿ ಕಾಡುಪ್ರಾಣಿಗಳ ಆಹಾರ ಸರಪಳಿ ಏರುಪೇರಾಗುತ್ತಿದೆ ಇದರಿಂದಾಗಿ ಕಾಡುಮೃಗಗಳು ಆಹಾರ ಅರಸುತ್ತಾ ಸಿಕ್ಕ ಕಡೆಗೆ ಲಗ್ಗೆ ಹಾಕುತ್ತಿವೆ, ಕಾಡುಪ್ರಾಣಿಗಳ ಬೇಟೆ ಶಿಕ್ಷಾರ್ಹ ಅಪರಾಧ ಎನ್ನುವುದು ಗೊತ್ತಿದ್ದರೂ ಪ್ರಾಣಿಗಳ ಹತ್ಯೆ ಅವ್ಯಾಹತವಾಗಿದೆ.

ಸಿಗದ ಚಿರತೆ ಜಾಡು:ಕಳೆದೆರಡು ದಿನಗಳಿಂದ ಕಂಬಾಳು ಗೊಲ್ಲರಹಟ್ಟಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಅರಣ್ಯ ಇಲಾಖೆ ಸಿಬ್ಬಂದಿ ನರಭಕ್ಷಕ ಚಿರತೆ ಸೆರೆಗೆ ಹರಸಾಹಸ ನಡೆಸುತ್ತಿದ್ದಾರೆ, ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಿ ಚಿರತೆ ಜಾಡು ಹಿಡಿಯಲು ಪ್ರಯತ್ನ ನಡೆಸುತ್ತಿದ್ದಾರೆ ಆದರೆ ಇದುವರೆಗೆ ಚಿರತೆ ಹೆಜ್ಜೆ ಪತ್ತೆಯಾಗಿಲ್ಲ. ಚಿರತೆ ಕಾರ್ಯಾಪಡೆ ಸಿಬ್ಬಂದಿ ಹಗಲಿರುಳು ಕಾರ್ಯಾಚರಣೆಯಲ್ಲಿ ಮಗ್ನವಾಗಿದ್ದಾರೆ ಇದರ ನಡುವೆ ಗ್ರಾಮಸ್ಥರು ಚಿರತೆ ಭೀತಿಯಲ್ಲಿಯೇ ದಿನದೂಡುವಂತಾಗಿದೆ. ಏನನ್ಮಧ್ಯೆ ಕರಡಿಯೊಂದರ ಸಂಚಾರದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿರುವುದು ಮತ್ತಷ್ಟು ಆತಂಕ್ಕೆ ಕಾರಣವಾಗಿದೆ.

---------

ಗ್ರಾಮಾಂತರ ಜಿಲ್ಲೆಯಲ್ಲಿ ಅರಣ್ಯ ಪ್ರದೇಶಗಳು ಕೃಷಿಭೂಮಿಗಳಾಗಿ ಪರಿವರ್ತನೆಯಾಗುತ್ತಿವೆ, ಇಲಾಖೆ ವತಿಯಿಂದ ಈಗಾಗಲೇ ಒತ್ತುವರಿ ತೆರವುಗೊಳಿಸಲಾಗಿದ್ದು, ತೆರವು ಕಾರ್ಯಾಚರಣೆ ಮುಂದುವರೆದಿದೆ. ಕಾಡಂಚಿನ ಗ್ರಾಮಸ್ಥರು ಅರಣ್ಯ ಪ್ರದೇಶಕ್ಕೆ ಜಾನುವಾರುಗಳನ್ನು ಕರೆದೊಯ್ಯುವುದನ್ನು ನಿಲ್ಲಿಸಬೇಕು, ಸಂಜೆ ವೇಳೆ ಒಂಟಯಾಗಿ ಕಾಡಂಚಿನಲ್ಲಿ ಸಂಚರಿಸುವುದು ಅಪಾಯಕಾರಿ. ಸಾಮಾನ್ಯವಾಗಿ ಚಿರತೆಗಳು ಮನುಷ್ಯರನ್ನು ಕಂಡರೆ ಹೆದರುತ್ತವೆ, ಆದರೆ ವಯಸ್ಸಾದ ಅಥವಾ ತೀವ್ರ ಹಸಿದ ವೇಳೆ ದಾಳಿ ಮಾಡುವ ಅಪಾಯವಿರುತ್ತದೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.

ಸರಿನಾ ಸಿಕ್ಕಲಿಗಾರ್, ಉಪ ಅರಣ್ಯಾಧಿಕಾರಿ ಬೆಂಗಳೂರು ಗ್ರಾಮಾಂತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net