ಅರಣ್ಯ ಅತಿಕ್ರಮಣದಾರರಿಗೆ ಆತಂಕ

forest
Published on

ಶಿರಸಿ: ಸರ್ವೋಚ್ಚ ನ್ಯಾಯಾಲಯವು ಮಹಾರಾಷ್ಟ್ರದ ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪರವಾನಗಿ ಪಡೆಯದೇ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ಹಸ್ತಾಂತರಿಸಿದ ಕ್ರಮವನ್ನ ಅಸಿಂಧು ಎಂದು ಘೋಷಿಸಿದೆ. ಇದರಿಂದಾಗಿ ರಾಜ್ಯದಲ್ಲಿ 1978ರ ಪೂರ್ವದ ಅರಣ್ಯ ಅತಿಕ್ರಮಣದಾರು ಆತಂಕಕ್ಕೆ ಒಳಗಾಗಿದ್ದಾರೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ರವೀಂದ್ರನಾಥ ನಾಯ್ಕ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಸುಪ್ರೀಂ ಕೊರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ, ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ ಮಸಿಹ್ ಮತ್ತು ಮೂರ್ತಿ ಕೆ. ವಿನೋದ ಚಂದ್ರನ್ ಅವರನ್ನೊಳಗೊಂಡ ಸುಪ್ರೀಂ ಕೊರ್ಟ್‌ನ ತ್ರೀ ಸದಸ್ಯ ಪೀಠವು ಮೇ 15 ರಂದು ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿ ಮತ್ತು ಸಂಸ್ಥೆಗೆ ಹಂಚಿಕೆ ಮಾಡಲಾದ ಮಹಾರಾಷ್ಟ್ರ ಮತ್ತು ಕೇಂದ್ರ ಸರ್ಕಾರದ ಮೇಲೆ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗೆ ಸಂಬಂಧಿಸಿ ನೀಡಿದ ಆದೇಶದಲ್ಲಿ ಮುಂದಿನ ಒಂದು ವರ್ಷದಲ್ಲಿ ಅರಣ್ಯ ಇಲಾಖೆಗೆ ಅರಣ್ಯ ಭೂಮಿಯನ್ನು ವಹಿಸಿಕೊಡುವಂತೆ ಆದೇಶಿಸಿದ್ದಾರೆ. ಅಲ್ಲದೆ, ಹಸ್ತಾಂತರಿಸಿದ ಉದ್ದೇಶಕ್ಕೆ ವರ್ಗಾಯಿಸಿದ ಭೂಮಿ ಹಂಚಿಕೆ ಪರಿಶೀಲಿಸಲು ವಿಶೇಷ ತನಿಖಾ ತಂಡ ರಚಿಸಿದೆ. ರಾಜ್ಯದಲ್ಲಿ 1978ರ ಪೂರ್ವದಲ್ಲಿ ಅತಿಕ್ರಮಣ ಮಾಡಿದ 19,348 ಪ್ರಕರಣಗಳಿಗೆ ಸಂಬಂಧಿಸಿ 14,848.83 ಹೆಕ್ಟೇರ್ ಪ್ರದೇಶವನ್ನು ಅರಣ್ಯ ಹಕ್ಕು ಕಾಯ್ದೆ ಜಾರಿಯ ವೇಳೆ ರೈತರಿಗೆ ಮಂಜೂರಾತಿಗಾಗಿ ಗುರುತಿಸಲಾಗಿದೆ. ಅದೇ ರೀತಿ, ಸುಮಾರು 3 ಸಾವಿರಕ್ಕೂ ಅಧಿಕ ಹಂಗಾಮಿ ಲಾಗಣಿದಾರರು ವಾರ್ಷಿಕ ಗುತ್ತಿಗೆ ಹಣ ನೀಡಿ ನವೀಕರಣಗೊಳಿಸದೇ ಇರುವುದು ಮತ್ತು ಕೇಂದ್ರ ಸರ್ಕಾರದ ಪರವಾನಗಿ ಪಡೆಯದೇ 8 ಸಾವಿರ ಕುಟುಂಬಗಳಿಗೆ ವಸತಿಗಾಗಿ ಆಶ್ರಯ ಪಟ್ಟವನ್ನು ಕಂದಾಯ ಇಲಾಖೆ ಅರಣ್ಯ ಭೂಮಿಯನ್ನು ವರ್ಗೀಕರಣ ಮಾಡಿರುವುದನ್ನೂ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ. ಅರಣ್ಯೇತರ ಚಟುವಟಿಕೆಗೆ ಪರಿವರ್ತಿಸಲಾದ ಭೂಮಿಯನ್ನು ಮರಳಿ ಪಡೆಯಲು ಸಾರ್ವಜನಿಕ ಹಿತಾಸಕ್ತಿಯಿಂದ ಅಂತಹ ವ್ಯಕ್ತಿ ಮತ್ತು ಸಂಸ್ಥೆಗಳಿಂದ ಭೂಮಿಯ ಮೌಲ್ಯವನ್ನ ಸಂಗ್ರಹಿಸಿ ಅಂತಹ ಮೊತ್ತವನ್ನ ಅರಣ್ಯೀಕರಣ, ಪುನರ್ ಸ್ಥಾಪನೆ ಮತ್ತು ಸಂರಕ್ಷಣೆಯ ಉದ್ದೇಶಕ್ಕಾಗಿ ಬಳಸುವಂತೆ ಸುಪ್ರೀಂ ಕೋರ್ಟ್‌ನ ಆದೇಶದಲ್ಲಿ ಉಲ್ಲೇಖಿಸಲ್ಪಟ್ಟಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net