ಅರಣ್ಯವಾಸಿಗಳ ಸಮಸ್ಯೆ ಸ್ಪಂದನಾ ಕಾರ್ಯಕ್ರಮ 21ರಂದು

14sirsi3- Forest
Published on

ಶಿರಸಿ: ಅರಣ್ಯ ವಾಸಿಗಳ ಮತ್ತು ಅರಣ್ಯ ಸಿಬ್ಬಂದಿ ನಡುವೆ ಉಂಟಾಗುತ್ತಿರುವ ಕಾನೂನು ಅಂಶಗಳ ಗೊಂದಲಕ್ಕೆ ಪರಿಹಾರ ಮತ್ತು ಇಲಾಖೆಯೊಂದಿಗೆ ಸಾಮರಸ್ಯ ವೃದ್ಧಿಸುವ ಉದ್ದೇಶದಿಂದ ಡಿ. 21ರಂದು ಹೊನ್ನಾವರದಲ್ಲಿ ಜಿಲ್ಲಾಮಟ್ಟದ ಅರಣ್ಯವಾಸಿಗಳೊಂದಿಗೆ ಹಿರಿಯ ಅರಣ್ಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅರಣ್ಯವಾಸಿಗಳ ಸಮಸ್ಯೆಗಳ ಸ್ಪಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲು ಹೋರಾಟಗಾರರ ವೇದಿಕೆ ನಿರ್ಧರಿಸಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಹೋರಾಟಗಾರರ ಕಾರ್ಯಾಲಯದಲ್ಲಿ ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳ ಪರಿಹಾರಕ್ಕೆ ಸ್ಪಂದಿಸುವ ಕುರಿತು ಶಿರಸಿ ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ ಅವರಿಗೆ ಬರೆದ ಪತ್ರವನ್ನು ಶನಿವಾರ ಪ್ರದರ್ಶಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಅರಣ್ಯ ಸಿಬ್ಬಂದಿಯಿಂದ ಅರಣ್ಯವಾಸಿಗಳ ವಿರುದ್ಧ ಕಾನೂನುಬಾಹಿರ ಕೃತ್ಯಗಳ ಜರುಗುತ್ತಿವೆ ಎಂಬ ಭಾವನೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಈ ಹಿಂದೆ ಇಂತಹ ಘಟನೆಗಳನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಾಗಲೂ ಸಮಸ್ಯೆಗಳು ಬಗೆಹರಿದಿಲ್ಲ. ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿ ಪದೇ ಪದೆ ಅರಣ್ಯವಾಸಿಗಳು ಮತ್ತು ಅರಣ್ಯ ಇಲಾಖೆಯೊಂದಿಗೆ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಈ ಹಿನ್ನಲೆಯಲ್ಲಿ ಅರಣ್ಯವಾಸಿಗಳೊಂದಿಗೆ ಮುಕ್ತವಾಗಿ ರ್ಚಚಿಸುವುದು ಅವಶ್ಯವಿದೆ. ಅರಣ್ಯ ಇಲಾಖೆ ಅಧಿಕಾರಿಯೊಂದಿಗೆ, ಕಾನೂನು ಸ್ಪಷ್ಪಿಕರಣ ಮತ್ತು ಇಲಾಖೆಯೊಂದಿಗೆ ಸಮನ್ವಯ ವೃದ್ಧಿಸುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಶ್ರೀಧರ ಗೊಂಡ, ಗಣಪತಿ ಕೋಣಾರ, ರಾಮ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net