

ಶಿರಸಿ: ಅರಣ್ಯವಾಸಿಗಳ ಕಾನೂನಾತ್ಮಕ ಹಕ್ಕಿಗೆ ಚ್ಯುತಿ ತರುವ ದೃಷ್ಠಿಯಲ್ಲಿ ಕಾರ್ಯನಿರ್ವಹಿಸಿದ ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಅರಣ್ಯವಾಸಿಗಳ ವಿರುದ್ಧ ಮನ ಬಂದಂತೆ ವರ್ತಿಸಲು ಅರಣ್ಯವಾಸಿಗಳು ಎರಡನೇ ದರ್ಜೆ ನಾಗರಿಕರಲ್ಲ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಆಕ್ರೋಶ ವ್ಯಕ್ತಪಡಿಸಿದರು.
ಹೊನ್ನಾವರ ತಾಲೂಕಿನ ಚಿಕ್ಕನಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಗಾರ ಗ್ರಾಮದ ಅರಣ್ಯವಾಸಿ ರಾಜು ತಿಪ್ಪಯ್ಯ ನಾಯ್ಕ ಅವರ ಸಾಗುವಳಿ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿ ದೌರ್ಜನ್ಯ ಎಸಗಿದ ಹಿನ್ನೆಲೆಯಲ್ಲಿ ಸೋಮವಾರ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಗೆ ಭೇಟಿ ನೀಡಿ ಅವರು ಮಾತನಾಡಿದರು.
ಅರಣ್ಯ ಹಕ್ಕು ಕಾಯ್ದೆಯಲ್ಲಿ ಅರ್ಜಿ ಸಲ್ಲಿಸಿ ಅರ್ಜಿ ವಿಚಾರಣೆ ನಡೆಯುತ್ತಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಮೇಲೆ ದೈಹಿಕ, ಮಾನಸಿಕ, ನಷ್ಟ ಹಾಗೂ ಕಾನೂನಿಗೆ ಚ್ಯುತಿ ತಂದಿರುವ ಅರಣ್ಯ ಸಿಬ್ಬಂದಿ ವಿರುದ್ಧ ಶೀಘ್ರ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಸಂಚಾಲಕರಾದ ಇಬ್ರಾಹಿಂ ಗೌಡಳ್ಳಿ, ಗಣೇಶ ನಾಯ್ಕ, ಶ್ರೀಕಾಂತ ದೇಶಭಂಡಾರಿ ಹೊನ್ನಾವರ, ಭಾಸ್ಕರ ದೇಶಭಂಡಾರಿ ಹೊದ್ಕೆ, ವಾಸುದೇವ ದೇಶಭಂಡಾರಿ, ರಿತೇಶ ನಾಯ್ಕ, ಸುಧಾಕರ ದೇಶಭಂಡಾರಿ, ಗಣಪತಿ ನಾಯ್ಕ, ನಾರಾಯಣ ನಾಯ್ಕ, ಪರಶುರಾಮ ನಾಯ್ಕ ಉಪಸ್ಥಿತರಿದ್ದರು.
ಮನವಿಯಲ್ಲಿ ರಾಜು ನಾಯ್ಕ ಅವರ ಸಾಗುವಳಿ ಕ್ಷೇತ್ರಕ್ಕೆ ಇತ್ತೀಚೆಗೆ ಏಕಾ ಏಕಿಯಾಗಿ 30ಕ್ಕಿಂತ ಹೆಚ್ಚು ಅರಣ್ಯ ಸಿಬ್ಬಂದಿ ಪೊಲೀಸ್ ರಕ್ಷಣೆಯೊಂದಿಗೆ ಪ್ರವೇಶಿಸಿದ್ದಾರೆ. ಚಿತ್ರೀಕರಣ ಮಾಡುತ್ತಿರುವ ಮೊಬೈಲ್ ಕಸಿದುಕೊಂಡು, ಮಹಿಳಾ ಅಧಿಕಾರಿ ದರ್ಪದಿಂದ ವರ್ತಿಸಿದ್ದಾರೆ. ರಾಜು ಅವರು ನೆಟ್ಟಿದ್ದ ಗೇರು ಮರ ಗಿಡಗಳನ್ನು ಬುಡ ಸಹಿತ ಕಿತ್ತು ನಾಶಪಡಿಸಿದ್ದಾರೆ ಅಲ್ಲದೆ, ಸುಮಾರು 50 ಸಾವಿರ ರೂ. ಹಾನಿ ಪಡಿಸಿದ್ದಾರೆ ಎಂದು ಸಿಸಿಎಫ್ಗೆ ಸಲ್ಲಿಸಲಾದ ಮನವಿಯಲ್ಲಿ ತಿಳಿಸಲಾಗಿದೆ. ಸಿಸಿಎಫ್ ವಸಂತರೆಡ್ಡಿ ಅವರ ಅನುಪಸ್ಥಿತಿಯಲ್ಲಿ ಕಚೇರಿಯ ಸಿಬ್ಬಂದಿ ಈ ಮನವಿ ಸ್ವೀಕರಿಸಿದರು.