

ಮಂಡ್ಯ: ರಾಜ್ಯ ಸರ್ಕಾರಕ್ಕೆ ಸಾರ್ವಜನಿಕ ಹಿತಾಸಕ್ತಿ ಹಾಗೂ ಅರಣ್ಯ ಸಂರಕ್ಷಣೆ ಎರಡೂ ಮುಖ್ಯ. ಈ ಹಿನ್ನೆಲೆಯಲ್ಲಿ ಸಮತೋಲನ ಕಾಯ್ದುಕೊಂಡು ಪರಸ್ಪರ ಸಮನ್ವಯದಿಂದ ಯೋಜನೆಗಳನ್ನು ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಉಪಸ್ಥಿತಿಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕಂದಾಯ, ಅರಣ್ಯ ಮತ್ತು ವಿವಿಧ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಅರಣ್ಯದ ವಿಚಾರವಾಗಿ ವಿಶೇಷ ಗಮನ ಹರಿಸಬೇಕು. ಅರಣ್ಯ ನಿಯಮಾವಳಿಗಳ ಬಗ್ಗೆ ಸರ್ವೊಚ್ಚ ನ್ಯಾಯಾಲಯ ಬಿಗಿ ನಿಲುವು ಹೊಂದಿರುವುದು ಗಮನಾರ್ಹ. ಆದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕದಂತಹ ಮೂಲ ಸೌಕರ್ಯಗಳಿಗೆ ಮಾನವೀಯ ದೃಷ್ಟಿ ಅಗತ್ಯ ಎಂದು ಹೇಳಿದರು.
ಕುಡಿಯುವ ನೀರು, ವಿದ್ಯುತ್ ಸರಬರಾಜಿನಂತಹ ಸೌಕರ್ಯ ಪೂರೈಕೆಗೆ ಅಡ್ಡಿ ಮಾಡದೇ ಅರಣ್ಯ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳಬೇಕು. ಶ್ರೀರಂಗಪಟ್ಟಣ ತಾಲೂಕಿನ ಹಂಗರಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಪರಿಭಾವಿತ ಅರಣ್ಯ ಪ್ರದೇಶಗಳ ನಕಾಶೆ ಸರಿಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯೊಂದಿಗೆ ಜಂಟಿ ಸರ್ವೇ ನಡೆಸಿ ಗೊಂದಲಗಳನ್ನು ಇತ್ಯರ್ಥ ಪಡಿಸುವಂತೆ ಸೂಚಿಸಲಾಯಿತು.
ಬೆಂಗಳೂರು-ಸೋಮವಾರಪೇಟೆ ರಾಜ್ಯ ಹೆದ್ದಾರಿ ಕಾಮಗಾರಿ, ವಿವಿಧ ರಸ್ತೆ ಕಾಮಗಾರಿಗಳು ನೀರು ಸರಬರಾಜು ಯೋಜನೆಗಳ ಅನುಷ್ಠಾನಕ್ಕೆ ಉಂಟಾಗಿರುವ ಅಡ್ಡಿಯ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಅಂತೆಯೇ ನನೆಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಕುರಿತು ಸಲಹೆ, ಸೂಚನೆ ನೀಡಲಾಯಿತು. ಅಧಿಕಾರಿಗಳು ನಿಯಮಾವಳಿಗಳ ವ್ಯಾಪ್ತಿಯೊಳಗೆ ಇರುವ ಪರಿಹಾರ ಮಾರ್ಗ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಿ. ಮಾನವ ವನ್ಯಜೀವಿ ಸಂಘರ್ಷ ತಡೆಗೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಿ. ನಿಯಮಾವಳಿಗಳ ಒಳಗೆ ರಾಜ್ಯ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಪರಿಹಾರದ ಕ್ರಮಗಳು, ಬದಲಿ ಜಾಗ ಪಡೆದು ಮಾಡಬಹುದಾದ ಮಾರ್ಪಾಡುಗಳ ಬಗ್ಗೆ ಪರಿಶೀಲಿಸಿ ಕ್ರಮ ವಹಿಸುವಂತೆ ಎಂದು ಇಬ್ಬರು ಸಚಿವರು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಜಿಲ್ಲೆಯ ವ್ಯಾಪ್ತಿ ಅರಣ್ಯ ಇಲಾಖೆಯಿಂದ ಅನುಮತಿ ಬೇಕಿರುವ ಕಾಮಗಾರಿಗಳ ವಿವರ ಮಂಡಿಸಿದರು.
ಸಭೆಯಲ್ಲಿ ಶಾಸಕರಾದ ರಮೇಶ ಬಂಡಿಸಿದ್ದೇಗೌಡ, ಕೆ.ಎಂ.ಉದಯ್, ದರ್ಶನ್ ಪುಟ್ಟಣಯ್ಯ, ಎಚ್.ಟಿ.ಮಂಜು, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಇತರರಿದ್ದರು.