

ಮೈಸೂರು: ರೈತರ ಕೃಷಿ ಬೆಳೆ ಹಾನಿ ಮಾಡುತ್ತಿದ್ದ ಕಾಡಾನೆಯನ್ನು ಶುಕ್ರವಾರ ಅರಣ್ಯಕ್ಕೆ ಹಿಮ್ಮೆಟ್ಟಿಸಲಾಯಿತು. ಏ.16ರಂದು ಬೆಳಗ್ಗೆ ಬಂಡೀಪುರ ಅರಣ್ಯ ಕಡೆಯಿಂದ ಒಂದು ಕಾಡಾನೆ ಹೊಮ್ಮರಗಳ್ಳಿ ಮಾರ್ಗವಾಗಿ ಮೈಸೂರು ವಲಯದ ಚಿಕ್ಕನಹಳ್ಳಿ ಮೀಸಲು ಅರಣ್ಯಕ್ಕೆ ಬಂದು ಬೀಡುಬಿಟ್ಟಿತ್ತು. ರಾತ್ರಿ ವೇಳೆ ರೈತರ ಜಮೀನುಗಳಿಗೆ ಹೋಗಿ ಬೆಳೆ ಹಾನಿ ಮಾಡುತ್ತಿತ್ತು.
ಈ ಕಾಡಾನೆಯನ್ನು ಮರಳಿ ಕಾಡಿಗೆ ಹಿಮ್ಮೆಟ್ಟಿಸುವ ಸಲುವಾಗಿ ಏ.16 ರಿಂದ 24ರವರೆಗೂ ನಿರಂತರ ನಡೆದ ಕಾರ್ಯಚರಣೆ ಫಲಪ್ರದವಾಗಿರಲಿಲ್ಲ. ಈ ಕಾರಣಕ್ಕೆ ಬಂಡೀಪುರದ ಆನೆ ಶಿಬಿರದಿಂದ ಸಾಕಾನೆ ಜಯಪ್ರಕಾಶ್ ಮತ್ತು ಪಾರ್ಥ ಸಾರಥಿ ಆನೆಗಳನ್ನು ಬಳಸಿಕೊಂಡು ಶುಕ್ರವಾರ ಬೆಳಗ್ಗೆ ಕಾಡಾನೆಯನ್ನು ಸುರಕ್ಷಿತವಾಗಿ ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲಾಯಿತು.
ಲೋಕಸಭಾ ಚುನಾವಣೆಯ ಮತದಾನ ಪ್ರಕ್ರಿಯೆಗೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತ ಕ್ರಮ ವಹಿಸಿ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲಾಯಿತು. ಚಿಕ್ಕನಹಳ್ಳಿ ಮೀಸಲು ಅರಣ್ಯದ ಸುತ್ತಲಿನ ಗ್ರಾಮಗಳಲ್ಲಿ ಹಾಗೂ ಕಾಡಾನೆ ನಡೆದು ಹೋಗುವ ಗ್ರಾಮಗಳಲ್ಲಿ ಜನರು ಹೊರಬರದಂತೆ ಮುಂಚಿತವಾಗಿ ಪ್ರಚಾರ ಮಾಡಿ ತಿಳಿಸುವ ಮೂಲಕ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿತ್ತು.
ಅಲ್ಲದೇ ಮೈಸೂರು-ಮಾನಂದವಾಡಿ ಮುಖ್ಯ ರಸ್ತೆಯನ್ನು ಮಧ್ಯರಾತ್ರಿ ಬ್ಲಾಕ್ ಮಾಡಿ ಕಾಡಾನೆ ಸುರಕ್ಷಿತವಾಗಿ ರಸ್ತೆ ದಾಟಲು ಅನುವು ಮಾಡಿಕೊಡಲಾಯಿತು.
ಕಾರ್ಯಾಚರಣೆಗೆ 55 ಸಿಬ್ಬಂದಿ, ಎರಡು ಸಾಕಾನೆಗಳು, 2 ಸಂಖ್ಯೆ ಥರ್ಮಲ್ ಡ್ರೋನ್ ಕ್ಯಾಮರಾಗಳನ್ನು ಬಳಸಿಕೊಳ್ಳಲಾಯಿತು. ಆನೆ ಕಾರ್ಯಪಡೆ, ಚಿರತೆ ಕಾರ್ಯಾಪಡೆ, ಮೈಸೂರು, ಸರಗೂರು ಮತ್ತು ನಂಜನಗೂಡು ವಲಯದ ಸಿಬ್ಬಂದಿಯೊಂದಿಗೆ ಯಶಸ್ವಿ ಕಾರ್ಯಾಚರಣೆ ನಡೆಸಲಾಯಿತು ಎಂದು ಡಿಸಿಎಫ್ ಕೆ.ಎನ್.ಬಸವರಾಜು ತಿಳಿಸಿದ್ದಾರೆ.