

ವಿಕ್ರಮ ನಾಡಿಗೇರ ಧಾರವಾಡ ಬೇಸಿಗೆ ಸಮಯದಲ್ಲಿ ವನ್ಯ ಜೀವಿಗಳು ನೀರು ಅರಸಿ ನಾಡಿಗೆ ಬರುವ ಸಾಧ್ಯತೆ ಹೆಚ್ಚು. ಹೀಗೆ ನೀರಿಗಾಗಿ ನಾಡಿಗೆ ಬರುವ ಪ್ರಾಣಿಗಳನ್ನು ಕಂಡು ಜನ ಭಯ ಬೀಳುವುದಲ್ಲದೆ, ಪ್ರಾಣಿಗಳು ಸಹ ಬಲಿಯಾಗುವುದನ್ನು ತಪ್ಪಿಸಲು ಅರಣ್ಯ ಇಲಾಖೆ ವನ್ಯಜಿವಿಗಳ ದಾಹ ತಣಿಸಲು ಅರಣ್ಯದೊಳಗೆ ನೀರಿನ ಹೊಂಡ ನಿರ್ಮಿಸಿದೆ. ಈಗಾಗಲೇ ಬಿಸಿಲಿನ ಪ್ರಮಾಣ ದಿನೇ ದಿನೇ ಏರುತ್ತಿದ್ದು, ಮುಂದಿನ ದಿನಗಳಲ್ಲಿ ತಾಪ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಇದರಿಂದ ಉಂಟಾಗುವ ಜಲಕ್ಷಾಮ ಜನರು ಮಾತ್ರವಲ್ಲದೆ, ವನ್ಯಜಿವಿಗಳ ಮೇಲೆ ಸಹ ಪರಿಣಾಮ ಬೀರಿದೆ. ಹೀಗಾಗಿ ಕುಡಿಯುವ ನೀರಿಗಾಗಿ ಕಾಡು ಪ್ರಾಣಿಗಳು ಜನ ವಸತಿ ಪ್ರದೇಶಕ್ಕೆ ನುಗ್ಗುವ ಸಾಧ್ಯತೆ ಹೆಚ್ಚಿದೆ. ಇದೇ ಕಾರಣಕ್ಕೆ 2024-25ನೇ ಸಾಲಿನಲ್ಲಿ 6 ಹೊಂಡಗಳು ಸೇರಿ ಜಿಲ್ಲೆಯಲ್ಲಿ 16 ಹೊಂಡಗಳು ಪ್ರಾಣಿಗಳ ದಾಹ ತೀರಿಸಲು ಸಿದ್ಧವಾಗಿವೆ. ಬೇಸಿಗೆಯಲ್ಲಿ ಕರೆಗಳು ಬತ್ತುವುದು ಸಹಜ. ಇದರಿಂದ ಪ್ರತಿ ಬೇಸಿಗೆಯಲ್ಲಿ ಜಿಂಕೆ, ಮಂಗ, ಕರಡಿ, ತೋಳ, ನರಿ, ಚಿರತೆ ಸೇರಿ ಇತರ ವನ್ಯ ಜೀವಿಗಳು ನಗರಕ್ಕೆ ನುಗ್ಗುತ್ತವೆ. ನೀರು ಅರಸಿ ನಾಡಿಗೆ ಬರುವ ಪ್ರಾಣಿಗಳನ್ನು ಕಂಡು ಜನರು ಭಯಗೊಳ್ಳುತ್ತಾರೆ. ಜತೆಗೆ ತಮ್ಮ ಹೊಲ ಹಾಳು ಮಾಡಿ ಸಾಕು ಪ್ರಾಣಿಗಳ ಮೇಲೆ ದಾಳಿ ಮಾಡುತ್ತವೆ ಎಂದು ವನ್ಯಜಿವಿಗಳ ಮೇಲೆ ಹಲ್ಲೆ ನಡೆಸಿದ ಘಟನೆಗಳೂ ಸಾಕಷ್ಟಿವೆ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲೇ ಹಲವು ವರ್ಷಗಳಿಂದ ಅರಣ್ಯ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ. ಬಂಡೀಪುರ ಅಭಯಾರಣ್ಯದಲ್ಲಿ ಇಂತಹ ಪ್ರಯೋಗ ಮಾಡಲಾಗಿತ್ತು. ಅದೇ ಮಾದರಿಯಲ್ಲಿ ಕೆಲ ವರ್ಷಗಳ ಹಿಂದೆ ಜಿಲ್ಲೆಯಲ್ಲೂ ಆರಂಭಿಸಿ ಪ್ರಾಣಿಗಳ ನೀರಿನ ದಾಹ ತೀರಿಸಲಾಗುತ್ತಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಹೊಸ ಹೊಂಡಗಳ ನಿರ್ಮಾಣದ ಜತೆಗೆ ಹಳೇ ಹೊಂಡಗಳನ್ನೂ ಸುಸ್ಥಿತಿಗೆ ತರಲಾಗುತ್ತದೆ. ಜಿಲ್ಲೆಯಲ್ಲಿ 1000ದಿಂದ 4000 ಲೀಟರ್ ಸಾಮರ್ಥ್ಯದ ಹೊಂಡಗಳಿವೆ. ಸದ್ಯ ಹುಬ್ಬಳ್ಳಿ ವಲಯದಲ್ಲಿ 4, ಧಾರವಾಡ ವಲಯದಲ್ಲಿ 5 ಹಾಗೂ ಕಲಘಟಗಿ ವಲಯದಲ್ಲಿ 7 ಸೇರಿ 16 ಹೊಂಡಗಳು ಪ್ರಾಣಿಗಳ ದಾಹ ತೀರಿಸುತ್ತಿವೆ. ಇದರಿಂದ ಜಿಂಕೆ, ನವಿಲು, ನರಿ, ಕಾಡು ಹಂದಿ ಸೇರಿ ಎಲ್ಲ ಬಗೆಯ ಪ್ರಾಣಿಗಳಿಗೆ ಅನುಕೂಲವಾಗಿದೆ. ಇದಲ್ಲದೆ ಮಂಗಗಳಿಗೆ ಹೆಚ್ಚು ಅನುಕೂಲ. ಬರೀ ಹೊಂಡಗಳನ್ನು ನಿಮಿರ್ಸಿ ಸುಮ್ಮನಾಗದ ಇಲಾಖೆ, ಆಯಾ ವಲಯ ವ್ಯಾಪ್ತಿಯ ಅಧಿಕಾರಿಗಳು ಹೊಂಡದಲ್ಲಿನ ನೀರಿನ ಮಟ್ಟ ಸಹ ಪರಿಶೀಲಿಸುತ್ತಾರೆ. ನೀರಿನ ಪ್ರಮಾಣದ ಕಡಿಮೆ ಆಗುತ್ತಿದ್ದಂತೆ ಟ್ಯಾಂಕರ್ಗಳ ಮೂಲಕ ತುಂಬಿಸುತ್ತಾರೆ. ಪ್ರಾಣಿಗಳು ಸುರಕ್ಷಿತವಾಗಿ ನೀರು ಕುಡಿದು ಕಾಡಿಗೆ ಮರಳುವಂತೆ ಅನುಕೂಲವಾಗುವಂತೆ ಹೊಂಡಗಳನ್ನು ನಿರ್ಮಿಸಿರುವುದು ವಿಶೇಷ.
* ಪರಿಮಳಾ ವಿ.ಎಚ್., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಜಿಲ್ಲೆಯಲ್ಲಿ ಈ ಹಿಂದೆ ನಿಮಿರ್ಸಿದ್ದ ಹೊಂಡಗಳ ಜತೆಗೆ 2024-25ನೇ ಸಾಲಿನಲ್ಲಿ ನಿರ್ಮಿಸಿದ 6 ಸೇರಿ ಒಟ್ಟು 16 ಹೊಂಡಗಳಲ್ಲಿ ಪ್ರಾಣಿಗಳಿಗೆ ನೀರಿನ ವ್ಯವಸ್ಥೆ ಮಾಡಲಾಗಿದೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಅವುಗಳನ್ನು ಸುಸ್ಥಿತಿಗೆ ತಂದು ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತದೆ. ಈ ಕಾರ್ಯದಿಂದ ಪ್ರಾಣಿಗಳು ನಾಡಿಗೆ ಬರುವುದು ತಪ್ಪಿದ್ದಲ್ಲದೆ, ಅವುಗಳಿಗೆ ದಾಹ ತಣಿಸಲು ಅನುಕೂಲವಾಗಿದೆ.