

ಸಂತೋಷ ಮುರಡಿ ಮುಂಡರಗಿ
ಈಗಾಗಲೇ ಮುಂಗಾರು ಮಳೆ ಆರಂಭಗೊಂಡಿದ್ದು ಭೂ ಮಾತೆಯು ಹಸಿರು ಮುಡಿಯಲು ಉತ್ಸುಕಳಾಗಿದ್ದಾಳೆ. ಧರಣಿಯ ಹಸಿರೀಕರಣಕ್ಕೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಅರಣ್ಯ ಇಲಾಖೆಯ ಸಸ್ಯ ಪಾಲನ ಕ್ಷೇತ್ರದಲ್ಲಿ ವಿವಿಧ ಬಗೆಯ ಸಸಿಗಳನ್ನು ತಯಾರಿಸಲಾಗುತ್ತಿದೆ. ಈ ಸಸಿಗಳನ್ನು ಕಪ್ಪತಗುಡ್ಡ ಅರಣ್ಯ ಪ್ರದೇಶದ ಜತೆಗೆ ರೈತರ ಹೊಲದಲ್ಲಿ ನೆಡಲು ಸಜ್ಜುಗೊಳಿಸಲಾಗಿದೆ.
ತಾಲೂಕಿನ ಬಾಗೇವಾಡಿ ಬಳಿಯ ಅರಣ್ಯ ಇಲಾಖೆಯ ಕಪ್ಪತ್‌ಹಿಲ್ಸ್ ಸಸ್ಯ ಪಾಲನ ಕ್ಷೇತ್ರದಲ್ಲಿ 1.50 ಲಕ್ಷ ಸಸಿಗಳನ್ನು ತಯಾರಿಸಲಾಗಿದೆ. ಈ ಪೈಕಿ ಆರ್‌ಎಸ್‌ಪಿಡಿ ಯೋಜನೆಯಡಿ ರೈತರಿಗೆ ವಿತರಿಸಲು 30 ಸಾವಿರ ಸಸಿಗಳಿದ್ದು, ಅವುಗಳಲ್ಲಿ ಮುಖ್ಯವಾಗಿ ಮಹಾಗನಿ, ಸೀತಾಫಲ, ಸಾಗವಾನಿ, ಕರಬೇವು, ನುಗ್ಗೆ, ಬಿದಿರು, ನೇರಳೆ, ಮಾವು, ನೆಲ್ಲಿ ಇನ್ನಿತರ ಸಸಿಗಳು ಸಿದ್ಧವಾಗಿವೆ. ರೈತರಿಗೆ ಕಡಿಮೆ ದರದಲ್ಲಿ ಸಸಿಗಳನ್ನು ವಿತರಿಸಲಾಗುತ್ತದೆ. 6/9 ಸೈಜ್‌ನ ಒಂದು ಸಸಿಗೆ 3 ರೂ. ಮತ್ತು 8.12 ಸೈಜ್‌ನ ಒಂದು ಸಸಿಗೆ 6 ರೂ. ನಿಗದಿ ಪಡಿಸಲಾಗಿದೆ.
ಇನ್ನೂ ಸಾರ್ವಜನಿಕವಾಗಿ ಕಪ್ಪತಗುಡ್ಡ ಪ್ರದೇಶಕ್ಕಾಗಿ 1.20 ಲಕ್ಷ ಸಸಿಗಳು ತಯಾರಾಗಿದ್ದು, ಪ್ರಮುಖವಾಗಿ ಅರಳಿ, ಆಲ, ಬಿಲ್ವ, ನೇರಳೆ, ಹೊಂಗೆ, ತಪಸಿ, ಬಿಳಿಮತ್ತಿ, ಶಿವನಿ ಮೊದಲಾದ ಸಸಿ ತಯಾರಿಸಲಾಗಿದೆ. ಇದೇ ಜೂನ್‌ನಲ್ಲಿ ಮುಂಗಾರು ಮಳೆಯ ಸಂದರ್ಭದಲ್ಲಿ ಈಎಲ್ಲ ಸಸಿಗಳನ್ನು ನೆಡುವ ಕೆಲಸವನ್ನು ಆರಂಭಿಸಲು ಎಲ್ಲ ರೀತಿ ತಯಾರಿ ಮಾಡಿಕೊಳ್ಳಲಾಗಿದೆ.
ನಿರ್ವಹಣೆಗೆ ಆದ್ಯತೆ ನೀಡಲಿ... ಅರಣ್ಯ ಇಲಾಖೆಯಿಂದ ನೆಡಲಾಗುವ ಸಸಿಗಳನ್ನು ನಿರ್ವಹಣೆ ಮಾಡುವಲ್ಲಿ ಕಾಳಜಿ ವಹಿಸುವ ಅಗತ್ಯವಿದೆ. ಮಳೆಗಾಲ ನಂತರದಲ್ಲಿ ನೆಟ್ಟಂತಹ ಸಸಿಗಳಿಗೆ ಸರಿಯಾಗಿ ನೀರು ಇಲ್ಲದೆ ಒಣಗಿ ನಾಶವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಸಿಗಳಿಗೆ ನೀರುಣಿಸುವುದು, ಸಸಿಯನ್ನು ಜಾನುವಾರುಗಳು ತಿನ್ನದಂತೆ ಜಾಗೃತಿ ವಹಿಸಿ ರಕ್ಷಣೆ ಮಾಡುವ ಕಾರ್ಯಕ್ಕೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಬಾಗೇವಾಡಿ ಅರಣ್ಯ ಇಲಾಖೆಯ ಸಸ್ಯ ಪಾಲನ ಕ್ಷೇತ್ರದಲ್ಲಿ ಪ್ರಸಕ್ತ 1.50 ಲಕ್ಷ ಸಸಿಗಳನ್ನು ತಯಾರಿಸಲಾಗಿದೆ. ಇದರೊಳಗೆ 1.20 ಲಕ್ಷ ಸಸಿಗಳನ್ನು ಕಪ್ಪತಗುಡ್ಡದಲ್ಲಿ ನೆಡಲು ವ್ಯವಸ್ಥೆ ಮಾಡಲಾಗಿದೆ. ಇನ್ನುಳಿದ 30 ಸಾವಿರ ಸಸಿಗಳನ್ನು ರೈತರಿಗೆ ಕಡಿಮೆ ದರದಲ್ಲಿ ವಿತರಿಸಲಾಗುವುದು. ಪ್ರತಿಯೊಬ್ಬರು ಸಸಿಗಳನ್ನು, ಗಿಡ ಮರಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲೆಡೆ ಹಸೀರಿಕರಣಕ್ಕೆ ಮುಂದಾಗಬೇಕು. ಮಂಜುನಾಥ ಮೇಗಲಮನಿ, ಆರ್‌ಎಫ್‌ಒ ಕಪ್ಪತ್‌ಹಿಲ್ಸ್ ಮುಂಡರಗಿ