ಹುಲಿ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ

28 tiger
Published on

ಮೈಸೂರು: ಮೈಸೂರು ತಾಲೂಕು ಮೂಡಲಹುಂಡಿ-ವರಕೋಡು ಸಮೀಪ ಕಾಣಿಸಿಕೊಂಡಿರುವ ಹುಲಿ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ತಂಡ ಕಾರ್ಯಾಚರಣೆ ಮುಂದುವರಿಸಿದೆ. ಕ್ಯಾಮರಾ ಟ್ರ್ಯಾಪ್ ಮತ್ತು ಡ್ರೋನ್ ಕ್ಯಾಮರಾ ಕಣ್ಣಿಗೆ ಹುಲಿ ಸಿಗದಿರುವುದು ಆತಂಕ ಸೃಷ್ಟಿಸಿದೆ.


ಮೂಡಲಹುಂಡಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ದೊಣ್ಣೆಕಲ್ಲು ಗುಡ್ಡದ ರಸ್ತೆಯಲ್ಲಿ ಜೂ.29ರಂದು ಬೆಳಗ್ಗೆ 9.30ರಲ್ಲಿ ಬೈಕ್ ಸವಾರರಿಗೆ ಹುಲಿ ಕಾಣಿಸಿಕೊಂಡಿತ್ತು. ಮೂವರು ಯುವಕರು ಹುಲಿ ರಸ್ತೆಯಲ್ಲಿ ಹೋಗುತ್ತಿರುವ ವಿಡಿಯೋವನ್ನು ಚಿತ್ರೀಕರಿಸಿ ಸ್ಥಳೀಯರಿಗೆ ಹುಲಿ ಇರುವ ಬಗ್ಗೆ ಎಚ್ಚರಿಸಿದ್ದರು. ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದರು.

ಶನಿವಾರದಿಂದಲೇ ಹುಲಿ ಶೋಧ ಕಾರ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ತಂಡ ಕಾರ್ಯೋನ್ಮುಖವಾಗಿದೆ. ಹುಲಿ ಸಂಚರಿಸಿದ ರಸ್ತೆ, ಮುರಾರ್ಜಿ ದೇಸಾಯಿ ಶಾಲೆಯ ಹಿಂಭಾಗದ ಅರಣ್ಯ ಪ್ರದೇಶ, ಸಮೀಪದ ಹೊಲಗಳಲ್ಲಿ ಸುಮಾರು 25 ಕ್ಯಾಮರಾ ಟ್ರ್ಯಾಪ್ ಅಳವಡಿಸಿ ನೈಟ್ ವಿಷನ್ ಐಆರ್-ಜಿಎಸ್‌ಎಂ ಕ್ಯಾಮರಾ ಹಾಗೂ ಡ್ರೋನ್ ಕ್ಯಾಮರಾ ಬಳಸಿ ಕಾರ್ಯಾಚರಣೆ ಕೈಗೊಳ್ಳಲಾಗಿದೆ.


ಹುಲಿ ಕಾಣಿಸಿಕೊಂಡು 48 ಗಂಟೆಯಾದರೂ ಸುಳಿವು ಸಿಕ್ಕಿಲ್ಲ. ಹುಲಿಯೂ ಕ್ಯಾಮರಾ ಇರುವ ಸ್ಥಳಗಳಲ್ಲಿ ಸಂಚಾರ ಮಾಡಿಲ್ಲ. ಇದು ಕಾರ್ಯಪಡೆ ಸಿಬ್ಬಂದಿಯನ್ನು ಚಿಂತೆಗೀಡು ಮಾಡಿದೆ. ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಿಸಿದೆ. ಹುಲಿ ಕಾಣಿಸಿಕೊಂಡ ಸ್ಥಳ ಹಾಗೂ ದೊಣ್ಣೆಕಲ್ಲು ಬೆಟ್ಟದಲ್ಲಿ ನವಿಲು ಮತ್ತು ಜಿಂಕೆ ಹೆಚ್ಚಾಗಿದ್ದು, ರಾತ್ರಿ ಹಲವು ಬಾರಿ ನವಿಲುಗಳು ಆತಂಕದಿಂದ ಚೀರಾಡುತ್ತಿದ್ದ ಶಬ್ದ ಸ್ಥಳೀಯರಿಗೆ ಕೇಳಿಸಿದೆ. ಇದರಿಂದ ಹುಲಿ ಅಲ್ಲಿಯೇ ಇರಬಹುದೆಂಬ ಅನುಮಾನವಿದೆ.


ಮುರಾರ್ಜಿ ದೇಸಾಯಿ ವಸತಿ ಶಾಲೆ ವಿದ್ಯಾರ್ಥಿಗಳಿಗೆ ಭದ್ರತೆ:


ಹುಲಿ ಪ್ರತ್ಯಕ್ಷವಾದ ಸ್ಥಳದ ಸಮೀಪ ಮುರಾರ್ಜಿ ದೇಸಾಯಿ ವಸತಿ ಶಾಲೆ ಇದೆ. ಇಲ್ಲಿಯ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅರಣ್ಯ ಸಿಬ್ಬಂದಿ ತಂಡವೊಂದು ಶಾಲಾ ಆವರಣದಲ್ಲಿ ಠಿಕಾಣಿ ಹೂಡಿದೆ. ರಾತ್ರಿಯಿಡೀ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಟ್ಟಡದ ಹಿಂಭಾಗ 4-5 ಕಡೆ ಬೆಂಕಿಯನ್ನು ಹಾಕುವ ಮೂಲಕ ಕಾವಲು ಕಾಯಲಾಗುತ್ತಿದೆ. ವಿದ್ಯಾರ್ಥಿಗಳು ವಸತಿ ಶಾಲೆಯಿಂದ ಅನಗತ್ಯವಾಗಿ ಹೊರಗೆ ಬಾರದಂತೆ ಸೂಚನೆ ನೀಡಿ ಕಣ್ಗಾವಲು ಇಡಲಾಗಿದೆ.


ಭಕ್ತರಿಗೆ ಭಯ:


ಹುಲಿ ಸಂಚರಿಸಿದ ರಸ್ತೆಯಲ್ಲಿ ಉದ್ಭವ ಮಹದೇಶ್ವರ ದೇವಾಲಯವಿದ್ದು, ಜುಲೈ 5ರಂದು ಅಮವಾಸ್ಯೆ ಅಂಗವಾಗಿ ವಿಶೇಷ ಪೂಜಾ ಮಹೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ವಿವಿಧೆಡೆಯಿಂದ ಭಕ್ತರು ಕಾಲ್ನಡಿಗೆಯಲ್ಲಿ ಇಲ್ಲಿಗೆ ಬರುವ ವಾಡಿಕೆ ಇದ್ದು, ಹುಲಿ ಇರುವಿಕೆಯಿಂದ ಭಯಭೀತರಾಗಿದ್ದಾರೆ.


ಕೃಷಿ ಚಟುವಟಿಕೆಗೂ ಹಿನ್ನಡೆ:


ಹುಲಿ ಕಾಣಿಸಿಕೊಂಡ ಪ್ರದೇಶದಲ್ಲಿ ವರಕೋಡು, ಮೂಡಲಹುಂಡಿ ಹಾಗೂ ಕೆಂಪೇಗೌಡನ ಹುಂಡಿಯ ಗ್ರಾಮಸ್ಥರಿಗೆ ಸೇರಿದ ಕೃಷಿ ಭೂಮಿ ಇದೆ. ಕೃಷಿ ಚಟುವಟಿಕೆ ನಡೆಸುವುದಕ್ಕೂ ಹಾಗೂ ಜಾನುವಾರುಗಳನ್ನು ಮೇಯಿಸಲು ಭಯಗೊಂಡಿದ್ದಾರೆ. ಇದರಿಂದ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ.


ಸೆರೆಗೆ ಕ್ರಮ:

ಹುಲಿ ಚಲನವಲನ ಪತ್ತೆಗೆ ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದ್ದು ಮತ್ತೊಂದೆಡೆ ಬೋನು ಇಡಲಾಗಿದೆ. ಆದರೆ, ಹುಲಿ ಎಲ್ಲಿಯೂ ಪತ್ತೆಯಾಗದ ಕಾರಣ ಮೂಡಲಹುಂಡಿ ಗ್ರಾಮದಿಂದ ಮಹದೇಶ್ವರ ದೇವಾಲಯದ ಮುಂಭಾಗದ ರಸ್ತೆಯಲ್ಲಿ ತಿ.ನರಸೀಪುರ ರಸ್ತೆ ಕಡೆಗೆ ಓಡಾಡದಂತೆ ಅರಣ್ಯ ಇಲಾಖೆ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net