ಆಶ್ರಯ ಮನೆ ನಿರ್ಮಾಣಕ್ಕೆ ಅರಣ್ಯ ಇಲಾಖೆ ಅಡ್ಡಿ

22sirsi1
Published on

ಶಿರಸಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಹಳ್ಳಿಗಳಲ್ಲಿ ಆಶ್ರಯ ಮನೆ ನಿರ್ಮಿಸಿಕೊಳ್ಳಲು ಅರಣ್ಯ ಇಲಾಖೆ ತೊಂದರೆ ನೀಡುತ್ತಿದೆ. ಅಡಿಪಾಯ ಕೆಲಸ ಮುಗಿದು ಮೊದಲ ಬಿಲ್ ಆದ ಬಳಿಕ ಇಲಾಖೆ ತೊಂದರೆ ನೀಡಲಾರಂಭಿಸಿದೆ. ಅರಣ್ಯ ಇಲಾಖೆ ಮಾನವೀಯತೆಯ ಮೇಲೆ ಕೆಲಸ ಮಾಡಬೇಕು ಎಂಬ ಆಗ್ರಹ ಮಂಗಳವಾರ ಕರೆದಿದ್ದ ನೆಗ್ಗು ಗ್ರಾಮ ಸಭೆಯಲ್ಲಿ ವ್ಯಕ್ತವಾಯಿತು.

ಸಭೆ ಆರಂಭಗೊಳ್ಳುತ್ತಿದ್ದಂತೆಯೇ ವಕೀಲ ಶ್ರೀಪಾದ ನಾಯ್ಕ ಮತ್ತು ಕೆಡಿಪಿ ಸಲಹಾಸಮಿತಿ ಸದಸ್ಯ ದಿವಾಕರ ಹೆಗಡೆ ಟೊಣ್ಣೆಮನೆ ಈ ವಿಷಯ ಪ್ರಸ್ತಾಪಿಸಿದರು. ನೆಗ್ಗು ಗ್ರಾಮ ಪಂಚಾಯಿತಿಗೆ ಕಳೆದ ವರ್ಷ 141 ಆಶ್ರಯ ಮನೆ ಮಂಜೂರಾಗಿದ್ದವು. 23ಕ್ಕೂ ಅಧಿಕ ಫಲಾನುಭವಿಗಳ ಮನೆಗಳು ಇನ್ನೂ ಆರಂಭಿಕ ಹಂತದಲ್ಲಿವೆ. ಅರಣ್ಯ ಇಲಾಖೆ ತೊಂದರೆ ನೀಡಿದ್ದರಿಂದ ಕೆಲ ಮನೆ ನಿರ್ಮಾಣಕ್ಕೆ ಸಮಸ್ಯೆ ಆಗಿದೆ ಎಂದರು.

ಸ್ಪಷ್ಟನೆ ನೀಡಿದ ಪಿಡಿಒ ಮಮತಾ ಗುಡ್ಡದಮನೆ, ತುಡುಗುಣಿ ಮತ್ತು ತಟಗುಣಿಯಲ್ಲಿ 5, ಹೊಸ್ತೋಟ ಗ್ರಾಮದಲ್ಲಿ 2,ನೆಗ್ಗುದಲ್ಲಿ 7, ಮತ್ತಿಗಾರಿನಲ್ಲಿ 1, ಬೊಪ್ನಳ್ಳಿಯಲ್ಲಿ 2 ಮತ್ತು ಕೊಡಗಿಬೈಲ್‌ನಲ್ಲಿ 6 ಮನೆ ನಿರ್ಮಾಣಕ್ಕೆ ತೊಂದರೆ ಆಗಿದೆ. ಕೆಲವರು ವೈಯಕ್ತಿಕ ತಕರಾರಿನ ಹಿನ್ನೆಲೆಯಲ್ಲಿ ಮನೆ ನಿರ್ಮಿಸಿಕೊಳ್ಳಲು ಸಾಧ್ಯವಾಗಿದ್ದರೆ ಕೆಲವರು ಆರ್ಥಿಕ ತೊಂದರೆಯಿಂದ ಮನೆ ಕೆಲಸ ಪೂರ್ಣಗೊಳಿಸಿಲ್ಲ. ಕೆಲವೆಡೆ ಜಿಪಿಎಸ್ ವೇಳೆ ಫೋಟೋ ಹೊಂದಾಣಿಕೆ ಆಗದೇ ಹಣ ಬಿಡುಗಡೆ ಆಗಿಲ್ಲ. ಇಂತಹ ಸಂಧರ್ಭದಲ್ಲಿ ನೋಡಲ್ ಆಫೀಸರನ್ನು ಸ್ಥಳಕ್ಕೇ ಕರೆದೊಯ್ದು ಬಿಲ್ ಮಂಜೂರಿಗೆ ಯತ್ನಿಸಿದ್ದೇವೆ ಎಂದರು.

ಅರಣ್ಯ ಇಲಾಖೆ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿ, ಕಾಡುಪ್ರಾಣಿಗಳಿಂದ ಬೆಳೆ ಹಾನಿ ಆಗಿದ್ದರೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡಲಾಗುತ್ತದೆ. ಆದರೆ, ನೆಗ್ಗು ಗ್ರಾಮ ಪಂಚಾಯಿತಿಯಿಂದ ಕೇವಲ 5 ಅರ್ಜಿಗಳು ಪರಿಹಾರ ಕೋರಿ ಬಂದಿವೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರಾದ ಎಚ್.ವಿ. ಗಣೇಶ ಮತ್ತು ಚಂದ್ರಕಾಂತ ಹೆಗಡೆ ನೇರ್ಲದ್ದ, ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲ ಹಳ್ಳಿಗಳಲ್ಲಿಯೂ ಮಂಗಗಳ ಕಾಟ ತೀವ್ರವಾಗಿದೆ. ಪ್ರತಿ ದಿನವೂ ಅವು ಅಡಕೆ ತೋಟಗಳ ಮೇಲೆ ದಾಳಿ ನಡೆಸುತ್ತಿದ್ದು ರೈತರಿಗೆ ತೋಟಕಾಯುವುದೇ ಹರಸಾಹಸವಾಗಿದೆ. ಪ್ರತಿ ದಿನವೂ ಅರಣ್ಯ ಇಲಾಖೆಗೆ ಅರ್ಜಿ ಕೊಡಲು ಸಾಧ್ಯವಿಲ್ಲ. ಇಲಾಖೆ ರೈತರಿಂದ ದೂರು ಸ್ವೀಕರಿಸುತ್ತಿರುವುದನ್ನು ಬಿಟ್ಟು, ಪಂಚಾಯಿತಿಯ ಪ್ರತಿ ರೈತರಿಗೂ ಸಾಮೂಹಿಕ ಪರಿಹಾರ ವಿತರಣೆಗೆ ಮುಂದಾಗಬೇಕು ಎಂದರು. ದಿವಾಕರ ಹೆಗಡೆ ಮಾತನಾಡಿ, ಪ್ರವಾಸಿ ತಾಣಗಳಲ್ಲಿ ಬಂಧಿಸಿದ ಮಂಗಗಳನ್ನು ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ತಂದು ಬಿಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಒಂದು ಲಾರಿ ಮಂಗಗಳನ್ನು ಇಲ್ಲಿ ಬಿಡಲು ಯತ್ನಿಸಿದ ಘಟನೆ ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.

ಪಶು ಸಂಗೋಪನಾ ಇಲಾಖೆಯ ಡಾ. ದಿನೇಶ ಸಭೆಯ ನೇತೃತ್ವ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಲಾಝರ್ ಸಿಲ್ವೆಸ್ಟರ್ ರೆಬೆಲ್ಲೋ, ಉಪಾಧ್ಯಕ್ಷೆ ಸಾವಿತ್ರಿ ಮಡಿವಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net