

ಲಿಂಗಸುಗೂರು: ದೇವರಭೂಪುರ ಗ್ರಾಮದ ಬಳಿ ಜಮೀನಿನಲ್ಲಿ ಬೆಳೆದಿದ್ದ ಪಪ್ಪಾಯಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಇತ್ತೀಚಿಗೆ ನಾಶ ಮಾಡಿ ಸಸಿಗಳನ್ನು ನೆಡಲು ಗುಂಡಿ ಅಗೆದಿದ್ದರು. ರೈತರು ಎತ್ತುಗಳು, ಟ್ರಾೃಕ್ಟರ್ ಮತ್ತು ಜೆಸಿಬಿ ಮೂಲಕ ಶುಕ್ರವಾರ ಗುಂಡಿಗಳನ್ನು ಮುಚ್ಚಿ ಜಮೀನು ಹರಗಿದರು.
ಅಮರೇಶ್ವರ ಕ್ರಾಸ್ ಬಳಿ ಕೆಲಕಾಲ ಸಂಚಾರ ತಡೆದು ಪ್ರತಿಭಟನೆ ನಡೆಸಿದ ರೈತರು, ಕರ್ನಾಟಕ ರಾಜ್ಯ ರೈತಸಂಘದ ಹಾಗೂ ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಮೆರವಣಿಗೆ ನಡೆಸಿ ಜಮೀನಿಗೆ ತೆರಳಿದರು. ಬೆಳೆ ನಾಶ ಮಾಡಿರುವ ಜಮೀನು ಅರಣ್ಯ ಇಲಾಖೆಗೆ ಸೇರಿರುವ ಬಗ್ಗೆ ದಾಖಲೆ ತೋರಿಸಿ ಎಂದು ಅರಣ್ಯಾಧಿಕಾರಿಗಳಾದ ಪ್ರವೀಣ ಮತ್ತು ಗೋವಿಂದರಾಜು ಅವರಿಗೆ ಕೋಡಿಹಳ್ಳಿ ಚಂದ್ರಶೇಖರ್ ಸೂಚಿಸಿದರು.
ಸಾಗುವಳಿ ಮಾಡುವ ರೈತರನ್ನು ಒಕ್ಕಲೆಬ್ಬಿಸಬಾರದೆಂದು ಸರ್ಕಾರದ ಆದೇಶವಿದೆ. ಏಕಾಏಕಿ ಜಮೀನಿಗೆ ನುಗ್ಗಿ ಸಾವಿರಾರು ಪಪ್ಪಾಯಿ ಗಿಡಗಳನ್ನು ನಾಶ ಮಾಡಿ ಸಸಿಗಳನ್ನು ನೆಡಲು ಗುಂಡಿ ಅಗೆದು ರೈತನಿಗೆ ನಷ್ಟ ಉಂಟು ಮಾಡಿದ್ದೀರಿ. ಬೆಳೆ ನಷ್ಟ ಪರಿಹಾರ ನೀಡುವಂತೆ ಕೋಡಿಹಳ್ಳಿ ಚಂದ್ರಶೇಖರ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಧಿಕಾರಿಗಳೊಂದಿಗೆ ಕೋಡಿಹಳ್ಳಿ ಚಂದ್ರಶೇಖರ ಚರ್ಚಿಸುತ್ತಿರುವಾಗ ರೈತರು ಜಮೀನಿನಲ್ಲಿ ಅರಣ್ಯ ಇಲಾಖೆ ಅಗೆದಿದ್ದ ಗುಂಡಿಗಳನ್ನು ಮುಚ್ಚಲು ಮುಂದಾದರು. ಅರಣ್ಯ ಇಲಾಖೆ ಸಿಬ್ಬಂದಿ ತಡೆಯಲು ಮುಂದಾದರೂ ರೈತರು ಗುಂಡಿಗಳನ್ನು ಮುಚ್ಚಿದರು.