ಹಸಿರೀಕರಣದತ್ತ ಅರಣ್ಯ ಇಲಾಖೆ ಚಿತ್ತ

FOREST LAXMESHWAR
Published on

ಲಕ್ಷ್ಮೇಶ್ವರ: ತಾಲೂಕು ವ್ಯಾಪ್ತಿಯ ಶೆಟ್ಟಿಕೆರಿ ಸಸ್ಯಪಾಲನಾ ಕೇಂದ್ರದಲ್ಲಿ ಅರಣ್ಯ ಇಲಾಖೆಯಿಂದ ಅರಣ್ಯೀಕರಣಕ್ಕೆ ಲಕ್ಷಾಂತರ ಸಸಿಗಳು ಸಿದ್ಧಗೊಂಡಿವೆ. ರೈತರು, ಸಾರ್ವಜನಿಕರು, ಸರ್ಕಾರಿ ಇಲಾಖೆಯವರು, ಗ್ರಾಪಂ, ತಾಪಂ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳವರು ಜೂನ್ 5 ಪರಿಸರ ದಿನಾಚರಣೆಯಂದು ನೆಡಲು ಬೇಕಾಗುವ ಸಸಿಗಳು ಸಜ್ಜುಗೊಂಡಿವೆ.
ಈ ನಡುವೆ ಸರ್ಕಾರ ಸಸಿಗಳ ದರವನ್ನು ಏಕಾಏಕಿ ಹೆಚ್ಚಿಸಿದ್ದರಿಂದ ಸಿದ್ಧಗೊಂಡ ಸಸಿಗಳು ಮಾರಾಟವಾಗುತ್ತವೆಯೋ ಇಲ್ಲವೋ ಎಂಬ ಆತಂಕ ಅರಣ್ಯ ಇಲಾಖೆಯದ್ದಾಗಿದೆ. ಸುಮಾರು 30 ಎಕರೆ ವಿಸ್ತೀರ್ಣದ ಶೆಟ್ಟಿಕೇರಿಯ ಕೆರೆಯಂಚಿನ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ 2 ಪ್ರತ್ಯೇಕ ಸಸ್ಯಪಾಲನಾ ಕೇಂದ್ರಗಳಿವೆ. ಅಧಿಕಾರಿಗಳು, ಸಿಬ್ಬಂದಿ ಹಸಿರೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಇದರ ಫಲವಾಗಿ ಸದ್ಯ ಮಳೆಗಾಲಕ್ಕೆ ಭೂಮಿಗೆ ಬಂಧಿಯಾಗಲು ಸಿದ್ಧಗೊಂಡಿರುವ ಸಸಿಗಳು ಕೈ ಬೀಸಿ ಕರೆಯುತ್ತಿವೆ.

ತರಹೇವಾರಿ ಸಸಿಗಳು

ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದಲ್ಲಿ ರೈತರಿಗೆ ವಿತರಿಸಲು, ರಸ್ತೆ ಬದಿ, ಶಾಲಾ ಕಾಲೇಜು ಮೈದಾನಗಳಲ್ಲಿ ನೆಡಲು ಬೇವು, ತಪಸಿ, ಹಲಗಲ, ಗುಲ್‌ಮೋಹರ್, ಅಶೋಕ, ಹುಣಸಿ, ಮಹಾಗನಿ, ಶ್ರೀಗಂಧ, ಕಾಡು ಬಾದಾಮಿ, ಬಂಗಾಳಿ, ಕರಿಬೇವು, ನೆಲ್ಲಿ, ಸಾಗವಾನಿ, ನುಗ್ಗಿ, ರೆಂಟ್ರಿ, ಇಲಾತಿ, ಹುಣಸಿ, ಬನ್ನಿ, ಪೇರಲ, ಮಾವು ಇತರೆ ಸಸಿಗಳಿವೆ. ಪ್ರಾದೇಶಿಕ ಅರಣ್ಯ ವಲಯದಿಂದ 2,13,350 ಸಸಿಗಳನ್ನು ಬೆಳೆಸಲಾಗಿದೆ. ಅದರಲ್ಲಿ ನೆಡುತೋಪುಗಳಿಗಾಗಿ 58350 ಸಸಿಗಳನ್ನು ಮೀಸಲಿಟ್ಟಿದ್ದು ಆರ್‌ಎಸ್‌ಪಿಡಿ ಯೋಜನೆಯಡಿ ರೈತರಿಗಾಗಿ 1,55,000 ಸಸಿಗಳನ್ನು ಬೆಳೆಸಲಾಗಿದೆ.
ಭೂತಾಯಿಗೆ ಹಸಿರು ಸೀರೆ ಉಡಿಸಲು ಸಾಮಾಜಿಕ ಅರಣ್ಯ ವಲಯದಿಂದ ಸಾರ್ವಜನಿಕರಿಗಾಗಿ 54000 ಮತ್ತು ರಸ್ತೆ ಬದಿ, ಶಾಲೆಗಳಲ್ಲಿ ನೆಡಲು 16000 ಸಸಿಗಳನ್ನು ವಿವಿಧ ಸೈಜ್‌ನ ಚೀಲದಲ್ಲಿ ಬೆಳೆಸಲಾಗಿದೆ. ಪ್ರತಿವರ್ಷ ಮೂಢನಂಬಿಕೆ, ಅಜ್ಞಾನ, ಸ್ವಹಿತಾಸಕ್ತಿ ಮತ್ತು ಪರಿಸರ ಮಹತ್ವದ ಅರಿವು ಇಲ್ಲದ್ದರಿಂದ ಕಿಡಿಗೇಡಿಗಳು ಅರಣ್ಯಕ್ಕೆ ಕಿಡಿ ಹೊತ್ತಿಸುತ್ತಿದ್ದಾರೆ. ಇನ್ನು ಬರಗಾಲ, ಆಕಸ್ಮಿಕ ಬೆಂಕಿ, ನಗರೀಕರಣ, ಗಣಿಗಾರಿಕೆ, ಅಕ್ರಮ-ಸಕ್ರಮ ನೀತಿ, ಅಭಿವೃದ್ಧಿ ಕಾರ್ಯಗಳು ಸೇರಿ ಅನೇಕ ಕಾರಣಗಳಿಂದ ನಾಶವಾಗುವ ಅರಣ್ಯ ಸಂಪತ್ತನ್ನು ಮತ್ತೆ ಬೆಳೆಸುವ ನಿಟ್ಟಿನಲ್ಲಿ ಈ ಸಸ್ಯಪಾಲನಾ ಕೇಂದ್ರ ವರ್ಷವಿಡೀ ಅರಣ್ಯೀಕರಣಕ್ಕೆ ಶ್ರಮಿಸುತ್ತಿದೆ.

ಸಫಲವಾಗಲಿ ಸರ್ಕಾರದ ಉದ್ದೇಶ

ಪರಿಸರ ದಿನಾಚರಣೆ ಹಾಗೂ ವನಮಹೋತ್ಸವಗಳು ಕಾಡು ಬೆಳೆಸಿ ನಾಡು ಉಳಿಸಿ ಹಸಿರೇ ಉಸಿರು ಎನ್ನುವ ಘೋಷವಾಕ್ಯಗಳು ಪ್ರಚಾರಕ್ಕೆ ಸೀಮಿತವಾಗಬಾರದು. ಬದಲಾಗಿ ಗಿಡ ಬೆಳೆಸುವ ಕಾರ್ಯ ನಿತ್ಯನೂತನವಾಗಲು ಸರ್ಕಾರ ಸಸಿಗಳನ್ನು ಉಚಿತವಾಗಿ ಇಲ್ಲವೇ ಕಡಿಮೆ ದರದಲ್ಲಿ ಕೊಡಬೇಕು ಅಂದಾಗ ಸರ್ಕಾರದ ಉದ್ದೇಶವೂ ಸಫಲವಾಗಿ ಅರಣ್ಯ ಸಂಪತ್ತು ಹೆಚ್ಚುತ್ತದೆ. ಇದರಿಂದ ಉತ್ತಮ ಮಳೆ-ಬೆಳೆ-ಹವಾಮಾನ ಸೃಷ್ಟಿಯಾಗುತ್ತದೆ. ಸರ್ಕಾರ ಉಚಿತ ಗ್ಯಾರಂಟಿಗಳನ್ನು ನೀಡುವುದಕ್ಕಿಂತ ಮುಖ್ಯವಾಗಿ ಉಚಿತ ಸಸಿಗಳನ್ನು ನೀಡುವುದು ಅತ್ಯಂತ ಉಪಯುಕ್ತ. ಆದರೆ, ಏಕಾಏಕಿ 1 ರೂ, ಇದ್ದ ಸಸಿಗಳನ್ನು 6 ರೂ.ಗೆ, 3 ರೂ. ಇದ್ದ ಸಸಿಗಳನ್ನು 23 ರೂ.ಗೆ ಹೆಚ್ಚಿಸಿರುವುದು ಸರಿಯಾದ ಕ್ರಮವಲ್ಲ. ಹೆಚ್ಚಿಸಿರುವ ದರವನ್ನು ಕಡಿಮೆಗೊಳಿಸಿ ಅರಣ್ಯ ಸಂಪತ್ತು ವೃದ್ಧಿಗೆ ಗಮನ ಹರಿಸಬೇಕು ಎನ್ನುತ್ತಾರೆ ಪರಿಸರ ಪ್ರೇಮಿಗಳಾದ ಬಿ.ಎಸ್ ಬಾಳೇಶ್ವರ, ರಮೇಶ ನವಲೆ, ವಿಜಯಕುಮಾರ ಮಹಾಂತಶೆಟ್ಟರ ಮತ್ತಿತರರು.

ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯ ಅರಣ್ಯ ಪ್ರದೇಶ ಹಾಗೂ ಸರ್ಕಾರಿ ಕಚೇರಿ, ಶಾಲಾ-ಕಾಲೇಜುಗಳಲ್ಲಿ ನೆಡಲು ಶೆಟ್ಟಿಕೇರಿ ನರ್ಸರಿಯಲ್ಲಿ ಲಕ್ಷಾಂತರ ಸಸಿಗಳು ಸಿದ್ಧಗೊಂಡಿವೆ. ಸರ್ಕಾರದ ಸುತ್ತೋಲೆಯಂತೆ ಸಸಿಗಳ ದರವನ್ನು ಹೆಚ್ಚಿಸಲಾಗಿದೆ ಮತ್ತು ಇಲಾಖೆಯ ಸಬಲೀಕರಣದ ದೃಷ್ಟಿಯಿಂದ ಅದು ಅನಿವಾರ್ಯವೂ ಆಗಿದೆ. ಸಾರ್ವಜನಿಕರು ನರ್ಸರಿಯಲ್ಲಿ ಸಿಗುವ ಸಸಿಗಳನ್ನು ಖರೀದಿಸಿ ನೆಡಬೇಕು ಮತ್ತು ಅರಣ್ಯ ಇಲಾಖೆ ನೆಟ್ಟ ಸಸಿಗಳ ಸಂರಕ್ಷಣೆಗೆ ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು.ಸುಮಾ ಎಚ್ ಹಳೆಹೊಳಿ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿಕೌಶಿಕ ದಳವಾಯಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net