ಕಂಡದ್ದೆಲ್ಲಾ ತನ್ನದೇನ್ನುತ್ತಿದೆ ಅರಣ್ಯ ಇಲಾಖೆ

oplus_2
ತಿಪಟೂರಿನಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಶಾಸಕ ಕೆ.ಷಡಕ್ಷರಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಯಮುನಾ, ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್​.ಯೋಗೀಶ್​, ಗ್ಯಾರಂಟಿ ಸಮಿತಿ ಅಧ್ಯಕ್ಷ ಮಡೇನೂರು ಕಾಂತರಾಜು, ಇಒ ಸುದರ್ಶನ್​, ತಹಸೀಲ್ದಾರ್​ ಮಂಜುನಾಥ್​, ನಗರಾಯುಕ್ತ ವಿಶ್ವೇಶ್ವರ ಬದರಗಡೆ ಇದ್ದರು.
Published on

ಎಚ್ಚರ ವಹಿಸುವಂತೆ ಕಂದಾಯ ಅಧಿಕಾರಿಗಳಿಗೆ ಶಾಸಕ ಕೆ.ಷಡಕ್ಷರಿ ಸೂಚನೆ

ತಿಪಟೂರು: ಕಂಡದ್ದೆಲ್ಲಾ ತನ್ನದೇ ಎನ್ನುವ ಅರಣ್ಯ ಇಲಾಖೆ ಬಗ್ಗೆ ಕಂದಾಯ ಇಲಾಖೆ ಜಾಗೃತವಾಗಿರಬೇಕು ಎಂದು ಶಾಸಕ ಕೆ.ಷಡಕ್ಷರಿ ಎಚ್ಚರಿಸಿದರು.

ಇಲ್ಲಿನ ತಾಪಂ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಸಚಿವರನ್ನು ಒಪ್ಪಿಸಿ, ತಾಲೂಕಿನ ಹೆಡಗರಹಳ್ಳಿ ಬಳಿ ನರ್ಸರಿಯಿಂದ ಪಿಯುಸಿವರೆಗೂ ವ್ಯಾಸಂಗಕ್ಕೆ ಅನುಕೂಲವಾಗಲಿ ಎಂದು ಕೇಂದ್ರೀಯ ವಿದ್ಯಾಲಯ ಸ್ಥಾಪಿಸುವ ಉದ್ದೇಶದಿಂದ ಕಂದಾಯ ಇಲಾಖೆ ವ್ಯಾಪ್ತಿಯ 9 ಎಕರೆ ಪ್ರದೇಶ ಗುರುತಿಸಲಾಗಿತ್ತು. ಈ ಭೂಮಿಗೆ ಪರ್ಯಾಯವಾಗಿ ಹಾಲ್ಕುರಿಕೆ ಬಳಿ ಅರಣ್ಯ ಇಲಾಖೆಗೆ 9 ಎಕರೆ ಭೂಮಿ ಬಿಟ್ಟುಕೊಡಲಾಗಿತ್ತು. ಆದರೆ ಈಗ ಹಾಲ್ಕುರಿಕೆ ಬಳಿ ಇರುವ 9 ಎಕರೆ ಮತ್ತು ಹೆಡಗರಹಳ್ಳಿ ಬಳಿ ಕೇಂದ್ರೀಯ ವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಲಾಗಿದ್ದ 9 ಎಕರೆ ಭೂಮಿ ಎರಡೂ ನಮ್ಮದೇ ಎಂದು ವಾದಿಸುತ್ತಿರುವ ಅರಣ್ಯ ಇಲಾಖೆ ಧೋರಣೆ ಸಲ್ಲ. ಕಂಡದ್ದೆಲ್ಲಾ ತನ್ನದೇ ಎನ್ನುವ ಅರಣ್ಯ ಇಲಾಖೆ ಬಗ್ಗೆ ಕಂದಾಯ ಇಲಾಖೆಯವರು ಎಚ್ಚರದಿಂದ ಇರಬೇಕು. ಈ ಬಗ್ಗೆ ಕ್ರಮ ವಹಿಸುವಂತೆ ತಹಸೀಲ್ದಾರ್​ ಮಂಜುನಾಥ್​ಗೆ ಸಭೆಯಲ್ಲಿ ಸೂಚಿಸಿದರಲ್ಲದೇ ಸ್ಥಳದಲ್ಲಿ ಹಾಜರಿದ್ದ ಅರಣ್ಯ ಸಂರಕ್ಷಣಾಧಿಕಾರಿಗೆ ಹೆಡಗರಹಳ್ಳಿ ಬಳಿ ಅರಣ್ಯ ಇಲಾಖೆಯದ್ದು ಎಂದು ಹೇಳಲಾಗುತ್ತಿರುವ ಭೂಮಿಯ ಮೂಲ ದಾಖಲೆಗಳನ್ನು ಹಾಜರುಪಡಿಸುವಂತೆ ಆದೇಶಿಸಿದರು.

ತಾಲೂಕಿನ ಚೌಡ್ಲಾಪುರ ಸರ್ವೇ ನಂ.12ರಲ್ಲಿ 25 ವರ್ಷಗಳಿಂದ ಕೃಷಿ ಚಟುವಟಿಕೆ ಮಾಡಿಕೊಂಡು ಜೀವನ ಕಟ್ಟಿಕೊಂಡಿರುವ 22 ಕುಟುಂಬಗಳನ್ನು ಒಕ್ಕಲೆಬ್ಬಿಸಬೇಡಿ ಎಂದು ಅರಣ್ಯ ಅಧಿಕಾರಿಗೆ ಸೂಚಿಸಿದ ಶಾಸಕರು, ನಾನೆಂದೂ ಕಾನೂನು ಮೀರಿ ಹೋಗಿ ಎನ್ನಲ್ಲ. ಆದರೆ ನಿಮ್ಮ ಭೂಮಿಯ ಸರಹದ್ದು ಗುರುತಿಸಿ, ನ್ಯಾಯಸಮ್ಮತವಾಗಿ ಅವರಿಗೆ ಸೇರಬೇಕಾದ ಭೂಮಿ ಬಿಟ್ಟುಕೊಡಿ ಎಂದರು. ತಾಲೂಕಿನ ಕೊಡಿಗೇಹಳ್ಳಿ ಬಳಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆಂದು ಕಾಯ್ದಿರಿಸಕಾಗಿದ್ದ 90 ಎಕರೆ ಭೂಮಿಯ ಅಸಲಿ ಒಡೆತನದ ಬಗ್ಗೆ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ಒಮ್ಮತ ಕಂಡುಬಾರದ್ದನ್ನು ಗಮನಿಸಿದ ಶಾಸಕರು ಕೂಡಲೇ ಭೂಮಿಯ ಒಡೆತನದ ಬಗ್ಗೆ ಖಾತ್ರಿ ಪಡಿಸಿಕೊಳ್ಳುವಂತೆ ತಹಸೀಲ್ದಾರ್​ಗೆ ಸೂಚಿಸಿದರು.

ಸಾಂತ್ವನ ಹೇಳುವುದು ತಾಯಿ ಪ್ರೀತಿಗೆ ಸಮ

ಸರ್ಕಾರದ್ದೇ ಇಲಾಖೆ, ಸರ್ಕಾರದ್ದೇ ಹಣ, ಆದರೂ ತಾಲೂಕಿನ ಕೆಲ ಕಡೆ ನಿರ್ಮಿಸಲಾಗುತ್ತಿರುವ ಅಂಗನವಾಡಿ ಕಟ್ಟಡ, ಪಶು ವೈದ್ಯ ಇಲಾಖೆಯ ಆಸ್ಪತ್ರೆ ನಿಮಾರ್ಣಕ್ಕೆ ಶೇ.25ರಿಂದ 30 ಮುಂಗಡ ಹಣ ಪಾವತಿಸುವಂತೆ ಒತ್ತಾಯಿಸುತ್ತಿರುವ ನಿರ್ಮಿತಿ ಕೇಂದ್ರದ ಅಧಿಕಾರಿಯನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡರು. ಸಾಂತ್ವನ ಕೇಂದ್ರಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸಿಡಿಪಿಒ ದೀಪಾ ಹೆಬ್ಬಳ್ಳಿಗೆ ಸೂಚಿಸಿದ ಶಾಸಕರು, ಇದೊಂದು ಜವಾಬ್ದಾರಿಯುತ ಕೆಲಸವಾಗಿದೆ. ಮಕ್ಕಳಿಗೆ ಬೇಡವಾದವರು, ಮಕ್ಕಳಿಂದ ದೂರವಾದವರು ಆಸರೆ ಬಯಸಿ ಬಂದಾಗ ಅವರನ್ನು ಸಂತೈಸಿ, ಸಾಂತ್ವನ ಹೇಳುವುದು ತಾಯಿ ಪ್ರೀತಿಗೆ ಸಮಾನ ಇಂತಹ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಬಹುಬೆಳೆ ಲಾಭ

ನೆಪಮಾತ್ರಕ್ಕೆ ಸೌಲಭ್ಯ. ಸಲಕರಣೆ ನೀಡುವ ದೇವರಾಜ ಅರಸು ನಿಗಮ ಮುಚ್ಚುವುದೇ ಲೇಸು ಎಂದ ಶಾಸಕರು, ಅಸ್ತಿತ್ವ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಕೃಷಿ ಇಲಾಖೆ ಮತ್ತು ಒಂದೇ ಬೆಳೆಗೆ ಜೋತುಕೊಂಡಿರುವ ರೈತರು ಬಹುಬೆಳೆ ಯೋಜನೆ ಅನುಸರಿಸುವುದು ಮತ್ತು ಕೃಷಿ ಪಂಪ್​ಸೆಟ್​ಗಳಿಗೆ ಬೆಸ್ಕಾಂ ಇಲಾಖೆ ಮೇಲೆ ಸಂಪೂರ್ಣ ಅವಲಂಬಿತರಾಗದೇ, ಸೋಲಾರ್​ ಚಾಲಿತ ಪಂಪ್​ಸೆಟ್​ ಬಳಸುವ ಬಗ್ಗೆ ರೈತರಿಗೆ ವ್ಯಾಪಕ/ ತಿಳಿವಳಿಕೆ ಮೂಡಿಸಬೇಕೆಂದು ಬೆಸ್ಕಾಂನ ಸಹಾಯಕ ಕಾರ್ಯಪಾಲಕ ಅಭಿಯಂತ ಮನೋಹರ್​ಗೆ ಸೂಚಿಸಿದರು.

ಬಿಳಿ ಆನೆ ಸಾಕಿದ ರೇಷ್ಮೆ!

ಬಿಳಿ ಆನೆ ಸಾಕಿದಂತಾಗಿರುವ ರೇಷ್ಮೆ ಇಲಾಖೆಯ ಪ್ರಗತಿ ಕಂಡು ಹೌಹಾರಿದ ಶಾಸಕರು. ಕೆಜಿ ರೇಷ್ಮೆಗೆ 1200ಕ್ಕೂ ಹೆಚ್ಚು ದರವಿದೆ. ಇದೊಂದು ಲಾಭದಾಯಕ ಬೆಳೆ. ಆದರೂ ತಾಲೂಕಿನಲ್ಲಿ 209 ರೈತರು ಮಾತ್ರ ರೇಷ್ಮೆ ಬೆಳೆಯುತ್ತಾರೆ ಎನ್ನುತ್ತೀರಿ ಎಂದು ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ರಾಗಿ ಪೈರು ಗಿಡದಲ್ಲಿ ಬೆಳೆಯುತ್ತಾ ಅಥವಾ ಮರದಲ್ಲಿ ಬೆಳೆಯುತ್ತಾ ಎಂದು ಪ್ರಶ್ನಿಸುವ ಕೆಲ ಐಎಎಸ್​ ಅಧಿಕಾರಿಗಳು ಎಂ.ಎಸ್​ ಬಿಲ್ಡಿಂಗ್​ನಲ್ಲಿ ಇರುವವರೆಗೂ ರೇಷ್ಮೆ ಬೆಳೆಗೆ ಉಳಿಗಾಲವಿಲ್ಲ ಎಂದಾಗ, ಇಲಾಖೆಯ ಎಂ.ಡಿ.ಪ್ರೇಮಾ ಅವರನ್ನು ಈಗಾಗಲೇ ಎತ್ತಂಗಡಿ ಮಾಡಲಾಗಿದೆ ಎಂದು ತಾಲೂಕು ರೇಷ್ಮೆ ಬೆಳೆ ವಿಸ್ತರಣಾ ಅಧಿಕಾರಿ ಕೃಷ್ಣಮೂರ್ತಿ ಶಾಸಕರ ಗಮನಕ್ಕೆ ತಂದರು.

ಹಿಂದಿನವರು 11 ಕೆರೆಗಳನ್ನು 23ಕ್ಕೆ ಹೆಚ್ಚಿಸಿ ಯಾವ ಕೆರೆಗೂ ಸಮರ್ಪಕ ನೀರಿಲ್ಲದಂತೆ ಮಾಡಿದರು. ಹೊನ್ನವಳ್ಳಿ ಹೋಬಳಿಗೆ ನೀರು ಕೊಡದಿದ್ದರೆ ಸುಧಾರಣೆ ಆಗಲ್ಲ. ತಾಲೂಕಿನ ಒಟ್ಟು 105 ಕೆರೆಗಳ ಪೈಕಿ 91 ಕೆರೆಗಳಿಗೆ ಎತ್ತಿನಹೊಳೆ ನೀರು ಮತ್ತು ಉಳಿದ 14 ಕೆರೆಗಳಿಗೆ ಹೇಮಾವತಿ ನೀರು ಹರಿಯಲಿದೆ. ಹೆಡಗರಹಳ್ಳಿ ಬಳಿ ಕಂದಾಯ ಇಲಾಖೆಯ 9 ಎಕೆರೆ ಭೂಮಿ ಒಡೆತನದ ಬಗ್ಗೆ ಯಾರದ್ದೋ ದುರುದ್ದೇಶ ಇರುವಂತಿದೆ. - ಕೆ.ಷಡಕ್ಷರಿ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net