ಅರಣ್ಯ ಇಲಾಖೆ ಜಿಪಿಎಸ್ ಸರ್ವೆ ನಕಾಶೆಗಿಲ್ಲ ಕಾನೂನು ಮಾನ್ಯತೆ

SIRSI RAVINDRA NAIK
Published on

ಶಿರಸಿ: ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿಗೆ ಸಂಬಂಧಿಸಿ ಅರಣ್ಯ ಇಲಾಖೆ ನೀಡಿರುವ ಜಿಪಿಎಸ್ ಸರ್ವೆಯ ನಕಾಶೆಗೆ ಯಾವುದೇ ಕಾನೂನು ಮಾನ್ಯತೆ ಇಲ್ಲ. ಜಿಲ್ಲಾದ್ಯಂತ ಅರಣ್ಯವಾಸಿಯ ಸುಮಾರು 50 ಸಾವಿರಕ್ಕೂ ಅಧಿಕ ಜಿಪಿಎಸ್ ದಾಖಲೆಗಳು ಅತಂತ್ರವಾಗಲಿದೆ ಎಂಬ ಆತಂಕದ ಅಂಶ ಬೆಳಕಿಗೆ ಬಂದಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದರು.

ಶಿರಸಿ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ ಅರಣ್ಯ ಇಲಾಖೆಯವರ ಕಾನೂನು ಮಾನ್ಯತೆ ಇಲ್ಲದ ಸಾವಿರಾರು ಜಿಪಿಎಸ್ ನಕಾಶೆಯನ್ನು ಸೋಮವಾರ ಪ್ರದರ್ಶಿಸಿ ಅವರು ಮಾತನಾಡಿದರು.

ಅರಣ್ಯ ಇಲಾಖೆ ಅರಣ್ಯ ಹಕ್ಕು ಕಾಯ್ದೆ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶ, ಸುತ್ತೋಲೆ ಮತ್ತು ಕಾನೂನಿನ ಮಾನ ದಂಡದ ಹೊರತಾಗಿ ಜಿಪಿಎಸ್ ನಕಾಶೆ ತಯಾರಿಸಿ ಅರಣ್ಯವಾಸಿಯ ಪ್ರಕರಣದ ಕಡತದಲ್ಲಿ ಸೇರಿಸಿದೆ. ಜಿಲ್ಲೆಯಲ್ಲಿನ ಅರಣ್ಯವಾಸಿಗಳ ಜಿಪಿಎಸ್ ಸರ್ವೆಯ ಮಾನ್ಯತೆಯಲ್ಲಿ ಕಾನೂನು ತೊಡಕು ಸಾಮೂಹಿಕವಾಗಿ ಉಂಟಾಗಲೂ ಅರಣ್ಯ ಇಲಾಖೆ ಕಾರಣವಾಗಿದೆ. ಮಂಜೂರಿ ಪ್ರಕ್ರಿಯೆಯಲ್ಲಿ ಅಪೂರ್ಣ ಜಿಪಿಎಸ್ ನಕಾಶೆ ಅರಣ್ಯ ಹಕ್ಕು ಸಮಿತಿಗಳ ಸ್ವೀಕಾರ ಅರ್ಹ ದಾಖಲೆ ಆಗುವುದಿಲ್ಲ. ಈ ಹಿನ್ನಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಾಣಾಧಿಕಾರಿ ಮೇ 2010ರಂದು ನೀಡಿದ ಆದೇಶವನ್ನ ಮತ್ತು ಕರ್ನಾಟಕ ಅರಣ್ಯ ಕಾಯ್ದೆಯಲ್ಲಿನ ಅಂಶ ಉಲ್ಲಂಘಿಸಿರುವುದು ಸ್ಪಷ್ಟವಾಗುತ್ತದೆ ಎಂದರು.

ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ, ಪ್ರಮುಖರಾದ ರಮೇಶ ಮರಾಠಿ, ಗಂಗೂಬಾಯಿ ರಜಪೂತ್, ನಾಗರಾಜ ದೇವಸ್ಥಲ್, ರಾಘವೇಂದ್ರ ಶೆಟ್ಟಿ, ನವೀನ್ ಜೈನ್, ಶಿವು ಮರಾಠಿ, ಗಣಪ ಗೌಡ, ಯಶೋಧಾ, ಕಲ್ಪನಾ ಪಾವಸ್ಕರ, ಅಬ್ದುಲ್ ರಪೀಕ್ ಗಫಾರ್, ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net