ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘ ಪ್ರತಿಭಟನೆ

4
Published on

ಮೈಸೂರು: ದಿನಗೂಲಿ ನೌಕರನನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದಿಂದ ಗುರುವಾರ ಅರಣ್ಯ ಭವನದ ಬಳಿ ಪ್ರತಿಭಟನೆ ನಡೆಸಲಾಯಿತು.

ಅರಣ್ಯ ಭವನದ ನಗರ ಹಸಿರೀಕರಣ ವಲಯ ಕಚೇರಿಯಲ್ಲಿ ದಿನಗೂಲಿ ನೌಕರನಾಗಿ 2011-12ನೇ ಸಾಲಿನಿಂದ ಕೆಲಸ ನಿರ್ವಹಿಸುತ್ತಿರುವ ನಿಂಗರಾಜು ಅವರನ್ನು ಯಾವುದೇ ಸೂಚನೆ ನೀಡದೆ ಕಳೆದ 2023ರ ಏಪ್ರಿಲ್ರಿಂದ ಕೆಲಸದಿಂದ ತೆಗೆಯಲಾಗಿದೆ. ಈ ಸಂಬಂಧ ನೌಕರರು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಏಕಾಏಕಿ ಕೆಲಸದಿಂದ ತೆಗೆದಿದ್ದರಿಂದ ದಿನಗೂಲಿ ಕೆಲಸವನ್ನೇ ನಂಬಿ ಬದುಕು ಕಟ್ಟಿಕೊಂಡಿರುವ ನೌಕರನ ಕುಟುಂಬ ಬೀದಿಗೆ ಬಿದ್ದಿದೆ. ನಗರದ ಮಧ್ಯೆ ಇರುವ ಮಳಲವಾಡಿ ಕೆರೆಯಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ ಕಾಮಗಾರಿ 2011-12ರಲ್ಲಿ ಪ್ರಾರಂಭವಾಗಿದ್ದು, ಈಗ ಈ ಜಾಗದಲ್ಲಿ ಸುಂದರವಾದ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಸರ್ಕಾರ ಪ್ರತಿ ವರ್ಷ ಹತ್ತಾರು ಲಕ್ಷ ರೂ. ವೆಚ್ಚ ಮಾಡುತ್ತಿದೆ. ಹೀಗಿರುವಾಗ ಒಬ್ಬ ನೌಕರನಿಗೆ ಕೆಲಸವಿಲ್ಲ ಎಂದು ಹೇಳುವ ಇಲಾಖೆ ಕ್ರಮ ಖಂಡನೀಯ. ಕೂಡಲೇ ನಿಂಗರಾಜು ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಎ.ಎಂ.ನಾಗರಾಜು, ನೌಕರರ ಸಂಘ ಮತ್ತು ನಿಂಗರಾಜು ಕುಟುಂಬದವರು ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net