ಕೆಲಗೇರಿ ಕೆರೆಯಲ್ಲಿ ಪಕ್ಷಿಗಳ ಪರಿವೀಕ್ಷಣೆ ಕಾರ್ಯಕ್ರಮ; ಅರಣ್ಯ ಇಲಾಖೆಯಿಂದ ವಿಶ್ವ ಗುಬ್ಬಚ್ಚಿ ದಿನಾಚರಣೆ

21 Dwd 2
Published on

ಪರಿಸರದ ಪುಟ್ಟ ಸಂದೇಶವಾಹಕರಿಗೆ ಗೌರವ

ವಿಜಯವಾಣಿ ಸುದ್ದಿಜಾಲ ಧಾರವಾಡ

ಅರಣ್ಯ ಇಲಾಖೆ ಧಾರವಾಡ ಪ್ರಾದೇಶಿಕ ವಿಭಾಗವು ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಹಯೋಗದೊಂದಿಗೆ ವಿಶ್ವ ಗುಬ್ಬಚ್ಚಿ ದಿನವನ್ನು ಗುರುವಾರ ವಿಶಿಷ್ಟವಾಗಿ ಆಚರಿಸಿತು.

ಗುಬ್ಬಚ್ಚಿನ ದಿನ ಕೇವಲ ವೇದಿಕೆ ಕಾರ್ಯಕ್ರಮ, ಭಾಷಣಕ್ಕೆ ಸೀಮಿತವಾಗದೆ ಪಕ್ಷಿ ಪ್ರಭೇದಗಳ ಬಗ್ಗೆ ತಿಳಿದುಕೊಳ್ಳಲು ಕ್ಷೇತ್ರ ಭೇಟಿ ಆಯೋಜಿಸಲಾಗಿತ್ತು. ಪಕ್ಷಿಗಳ ಪರಿವೀಕ್ಷಣೆಗೆ ಆಯ್ದುಕೊಂಡಿದ್ದ ನಗರದ ಪ್ರಸಿದ್ಧ ಕೆಲಗೇರಿ ಕೆರೆಯನ್ನು. ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ 60 ವಿದ್ಯಾರ್ಥಿಗಳಿಗೆ ಪಕ್ಷಿಗಳನ್ನು ಪರಿಚಯಿಸಿಕೊಡಲು ಅರಣ್ಯ ಇಲಾಖೆಯ ನುರಿತ ಹಾಗೂ ವೃತ್ತಿಪರ ಪಕ್ಷಿ ತಜ್ಞರ ತಂಡ ಜತೆಗಿತ್ತು. ಬೆಳಗ್ಗೆ 6.30ರಿಂದ 8.30ರವರೆಗೆ ಪಕ್ಷಿ ಪರಿವೀಕ್ಷಣೆ ಮಾಡಲಾಯಿತು.

ಧಾರವಾಡ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಟಿ. ಕವರಿ ಅವರು ಪಕ್ಷಿ ಪರಿವೀಕ್ಷಣೆಯ ಸ್ಥಳದಲ್ಲಿದ್ದು, 2025ನೇ ಸಾಲಿನ ವಿಶ್ವ ಗುಬ್ಬಚ್ಚಿ ದಿನಾಚರಣೆಯ ಮಹತ್ವ ವಿವರಿಸಿದರು. `ಪರಿಸರದ ಪುಟ್ಟ ಸಂದೇಶವಾಹಕರಿಗೆ ಗೌರವ' ಎಂಬ ಘೋಷವಾಕ್ಯದೊಂದಿಗೆ ಈ ವರ್ಷ ಗುಬ್ಬಚ್ಚಿ ದಿನ ಆಚರಿಸಲಾಗುತ್ತಿದೆ. ವಿದ್ಯಾರ್ಥಿಗಳು ಪಕ್ಷಿ ಸಂಕುಲ ಸಂರಕ್ಷಣೆಗೆ ಇಲಾಖೆಯೊಂದಿಗೆ ಕೈ ಜೋಡಿಸಬೇಕು ಎಂದರು.

ಅರಣ್ಯ ಇಲಾಖೆಯ ನುರಿತ ಹಾಗೂ ವೃತ್ತಿಪರ ಪಕ್ಷಿ ತಜ್ಞರು ವಿದ್ಯಾರ್ಥಿಗಳಿಗೆ ಪಕ್ಷಿ ಪ್ರಭೇದಗಳನ್ನು ಪರಿಚಯಿಸಿದರು. ಪಕ್ಷಿಗಳ ಚಲನವಲನ, ವಾಸಸ್ಥಾನ, ಅವುಗಳ ಆಹಾರ ಪದ್ಧತಿಯ ಬಗ್ಗೆ ತಿಳಿಸಿಕೊಟ್ಟರು. ವಿದ್ಯಾರ್ಥಿಗಳು ಅತ್ಯಂತ ಉತ್ಸುಕತೆಯಿಂದ ತಜ್ಞರಿಂದ ಮಾಹಿತಿ ಪಡೆದುಕೊಂಡರು.

185 ಪ್ರಭೇದಗಳು ಪತ್ತೆ

ಈ ವರ್ಷ ವಿಶ್ವ ಗುಬ್ಬಚ್ಚಿ ದಿನ ಆಚರಣೆಯ ಜವಾಬ್ದಾರಿಯನ್ನು ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ವಹಿಸಲಾಗಿತ್ತು. ವಿಶಿಷ್ಟವಾಗಿ ಆಚರಿಸುವ ಉದ್ದೇಶಿಸಿದ ಹಿರಿಯ ಅಽಕಾರಿಗಳು ವಿದ್ಯಾರ್ಥಿಗಳನ್ನು ಕ್ಷೇತ್ರ ಭೇಟಿಗೆ ಕರೆದೊಯ್ದಿದ್ದರು. ಅರಣ್ಯ ಇಲಾಖೆ ಆಯೋಜಿಸಿದ್ದ ಪಕ್ಷಿ ಪರಿವೀಕ್ಷಣೆ ಕಾರ್ಯಕ್ರಮದಲ್ಲಿ ಕೆಲಗೇರಿ ಕೆರೆ ಸುತ್ತಮುತ್ತ 185 ಪ್ರಭೇದಗಳ ಪಕ್ಷಿಗಳು ಪತ್ತೆಯಾದವು. ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ 60 ವಿದ್ಯಾರ್ಥಿಗಳು ತಲಾ 30 ಪಕ್ಷಿ ಪ್ರಭೇದಗಳನ್ನು ಗುರುತಿಸಿದ್ದು ವಿಶೇಷವಾಗಿತ್ತು. ಈ ರೀತಿ ಪಕ್ಷಿಗಳ ಪ್ರಭೇದ ಗುರುತಿಸುವುದರಿಂದ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಅನುಕೂಲವಾಗಲಿದೆ. ಅಲ್ಲದೆ, ಒಬ್ಬರಿಂದ ಅನೇಕರಿಗೆ ಪಕ್ಷಿ ಪ್ರಭೇದದ ಪರಿಚಯವಾಗುತ್ತದೆ ಎಂಬುದು ಅಽಕಾರಿಗಳ ಅನಿಸಿಕೆ. ಪಕ್ಷಿ ಪರಿವೀಕ್ಷಣೆಯಲ್ಲಿ ಉತ್ಸುಕತೆಯಿಂದ ಭಾಗವಹಿಸಿದ್ದ ಎಲ್ಲ ವಿದ್ಯಾರ್ಥಿಗಳಿಗೆ ಬರ್ಡ್ ಫೀಡರ್‌ಗಳನ್ನು ಉಚಿತವಾಗಿ ವಿತರಿಸಲಾಯಿತು.

ವನಭವನದಲ್ಲಿ ಸಭಾ ಕಾರ್ಯಕ್ರಮ

ಪಕ್ಷಿ ಪರಿವೀಕ್ಷಣೆಯ ನಂತರ ಧಾರವಾಡ ಅರಣ್ಯ ಸಂಕೀರ್ಣದ ಮೂರ್ತಿ ಟ್ರಸ್ಟ್ ವನಭವನದಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಧಾರವಾಡ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಿ. ಯತೀಶಕುಮಾರ ಕಾರ್ಯಕ್ರಮ ಉದ್ಘಾಟಿಸಿದರು. ಧಾರವಾಡ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿವೇಕ ಟಿ. ಕವರಿ ಅಧ್ಯಕ್ಷತೆ ವಹಿಸಿದ್ದರು. ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪಿ.ಎಸ್. ವರೂರ, ಅಶೋಕ ಗೋಂಡೆ, ಡಾ. ಶಿವಕುಮಾರ, ಎಸ್. ತೋಡಕರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪರಿಮಳಾ ವಿ.ಎಚ್., ವಲಯ ಅರಣ್ಯ ಅಽಕಾರಿ ಕಿರಣಕುಮಾರ ಕರತಂಗಿ, ಕರ್ನಾಟಕ ಕಾಲೇಜಿನ ಡಾ. ಕಿರಣ ಪಿ. ಕೋಲ್ಕಾರ್ ಉಪಸ್ಥಿತರಿದ್ದರು. ಪಕ್ಷಿ ತಜ್ಞ ಆರ್.ಜಿ. ತಿಮ್ಮಾಪುರ, ಹ್ಯುಮನ್ ಸೊಸೈಟಿ ಇಂಟರ್‌ನ್ಯಾಷನಲ್ ಇಂಡಿಯಾದ ಹಿರಿಯ ವ್ಯವಸ್ಥಾಪಕ ಹೇಮಂತ ಬೇಟ್ರಾಯ್ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

ಪರಿಸರ ಸಮತೋಲನಕ್ಕೆ ಪಕ್ಷಿ ಸಂಕುಲದ ಸಂರಕ್ಷಣೆ ಅಗತ್ಯ. `ಪರಿಸರದ ಪುಟ್ಟ ಸಂದೇಶವಾಹಕರಿಗೆ ಗೌರವ' ಘೋಷವಾಕ್ಯದೊಂದಿಗೆ 2025ರ ವರ್ಷವನ್ನು ವಿಶ್ವ ಗುಬ್ಬಚ್ಚಿ ದಿನವಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳನ್ನು ಕೆಲಗೇರಿ ಕೆರೆಗೆ ಕರೆದೊಯ್ದು ಪಕ್ಷಿಗಳನ್ನು ಪರಿಚಯಿಸಲಾಯಿತು. 60 ವಿದ್ಯಾರ್ಥಿಗಳು ಸುಮಾರು ಒಂದೂವರೆ ಗಂಟೆಯಲ್ಲಿ ಸುಮಾರು 30ರಿಂದ 35 ಪ್ರಭೇದಗಳನ್ನು ಗುರುತಿಸಿದ್ದು ವಿಶೇಷವಾಗಿತ್ತು. ಪಕ್ಷಿ ಸಂಕುಲದ ಸಂರಕ್ಷಣೆಯ ದೃಷ್ಟಿಯಿಂದ ಇಲಾಖೆಯಿಂದ ಜಾಗೃತಿ ಮೂಡಿಸಲಾಯಿತು.

- ವಿವೇಕ ಟಿ. ಕವರಿ, ಧಾರವಾಡ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net