ಹುಲಿ ಕಳೆಬರ ದಹಿಸಿದ ಅರಣ್ಯ ಇಲಾಖೆ

16-GPT-1
Published on

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಅರಣ್ಯದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ 4 ವರ್ಷ ವಯಸ್ಸಿನ ಹುಲಿಯ ಕಳೇಬರವನ್ನು ಅರಣ್ಯ ಇಲಾಖೆ ಮರಣೋತ್ತರ ಪರೀಕ್ಷೆ ನಂತರ ಗುರುವಾರ ಸುಟ್ಟುಹಾಕಿದೆ.


ಹುಲಿ ಸಂರಕ್ಷಿತ ಪ್ರದೇಶದ ಹೆಡಿಯಾಲ ಉಪವಿಭಾಗಕ್ಕೆ ಸೇರಿದ ಎನ್.ಬೇಗೂರು ವಲಯದ ಟೈಗರ್ ರಸ್ತೆಯ ಪೊದೆಯ ಬಳಿ ಬುಧವಾರ ಹುಲಿಯ ಕಳೇಬರ ಪತ್ತೆಯಾಗಿದೆ. ಗಸ್ತು ಸಿಬ್ಬಂದಿ ಕೂಡಲೇ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ತಂದರು.


ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಉಪವಿಭಾಗದ ಪ್ರಭಾರ ಎಸಿಎಫ್ ರವೀಂದ್ರ, ಎನ್.ಬೇಗೂರು ವಲಯದ ಆರ್‌ಎಫ್‌ಒ ಮಂಜುನಾಥ್ ಬಾಗೇವಾಡಿ, ಗುಂಡ್ರೆ ವಲಯದ ಆರ್‌ಎಫ್‌ಒ ಅಮೃತೇಶ್ ಗುರುವಾರ ಬೆಳಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.


ಅರಣ್ಯ ಇಲಾಖೆಯ ಪಶುವೈದ್ಯ ಡಾ. ವಾಸಿಂ ಮಿರ್ಜಾ ಮರಣೋತ್ತರ ಪರೀಕ್ಷೆ ನಡೆಸಿದರು. 12-15 ದಿನಗಳ ಹಿಂದೆ ಸತ್ತಿರುವ 4 ವರ್ಷ ವಯಸ್ಸಿನ ಹುಲಿಯ ಕಲೇಬರ ಕೊಳೆತ ಸ್ಥಿತಿಯಲ್ಲಿರುವುದರಿಂದ ಗಂಡೋ, ಹೆಣ್ಣೋ ಎಂಬುದು ತಿಳಿಯುತ್ತಿಲ್ಲ ಎಂದು ತಿಳಿಸಿದರು. ಹೆಚ್ಚಿನ ವಿವರಗಳಿಗೆ ಇದರ ಮಾದರಿಯನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಯಿತು. ನಂತರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ವನ್ಯಜೀವಿ ಪರಿಪಾಲಕಿ ಕೃತ್ತಿಕಾ, ಎನ್‌ಟಿಸಿಎ ಸದಸ್ಯ ರಘುರಾಂ ಸಮ್ಮುಖದಲ್ಲಿ ಸುಟ್ಟುಹಾಕಲಾಯಿತು ಎಂದು ಅರಣ್ಯ ಇಲಾಖೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net