

ಚನ್ನಗಿರಿ: ತಾಲೂಕಿನ ದೇವರಹಳ್ಳಿ ಹಾಗೂ ಹೊನ್ನನಾಯಕನಹಳ್ಳಿ ಗ್ರಾಮದ ಸುತ್ತಮುತ್ತಲಿನ ಅಡಕೆ ತೋಟಗಳಲ್ಲಿ ಕಾಣಿಸಿಕೊಂಡು, ಜನರಿಗೆ ತೊಂದರೆ ನೀಡುತ್ತಿದ್ದ ಚಿರತೆ ಭಾನುವಾರ ರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ.
6 ತಿಂಗಳಿಂದ ದೇವರಹಳ್ಳಿ ಗ್ರಾಮದ ಹೊರವಲಯದಲ್ಲಿ ಚಿರತೆ ಕಂಡು ಹೆದರಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಅನೇಕ ಬಾರಿ ಬೋನು ಇಟ್ಟಿದ್ದರೂ ಸೆರೆಯಾಗಲಿಲ್ಲ. ಆದರೂ ಪ್ರಯತ್ನ ಬಿಡದ ಇಲಾಖೆಯವರು ಒಂದು ವಾರದ ಹಿಂದೆ ಹೊನ್ನನಾಯಕನಹಳ್ಳಿ ಮತ್ತು ಹೊದಿಗೆರೆಗೆ ಹೋಗುವ ಮಾರ್ಗ ಮಧ್ಯದಲ್ಲಿ ಬೋನು ಇಟ್ಟು ಅದರಲ್ಲಿ ನಾಯಿಯನ್ನು ಕಟ್ಟಿದ್ದರು. ಆಹಾರ ಹುಡುಕಿ ಬಂದ ಚಿರತೆ ಬೋನಿಗೆ ಬಿದ್ದಿದೆ.
ತಾಲೂಕಿನ ದೇವರಹಹಳ್ಳಿ, ವಿ. ರಾಮೆನಹಳ್ಳಿ, ಹೊನ್ನನಾಯಕನಹಳ್ಳಿ, ಹೊದಿಗೆರೆ, ವಡ್ನಾಳ್, ಗೊಪ್ಪೇನಹಳ್ಳಿ, ಗೊಲ್ಲರಹಳ್ಳಿ, ಕಂಚಿಗನಾಳು, ಮಲಹಾಳು, ಕಲ್ಕೆರೆ, ತಾವರೆಕೆರೆ ಗ್ರಾಮಗಳಲ್ಲಿ ಪ್ರತಿದಿನ ಚಿರತೆ ಕಾಣಿಸಿಕೊಳ್ಳುತ್ತಿತ್ತು ಮತ್ತು ಗ್ರಾಮದಲ್ಲಿನ ನಾಯಿಗಳನ್ನು ಹಿಡಿದುಕೊಂಡು ಹೋಗುತ್ತಿತ್ತು.
ಚಿರತೆ ಕಾಣಿಸಿಕೊಂಡ ಗ್ರಾಮಗಳಿಗೆ ರಕ್ಷಣೆಗೆ ಪಟಾಕಿಗಳನ್ನು ನೀಡಲಾಗಿದ್ದು, ಗ್ರಾಮಕ್ಕೆ ಬರುವ ಎಲ್ಲ ಚಿರತೆಗಳನ್ನು ಹಿಡಿಯಲು ಕ್ರಮ ಕೈಗೊಳ್ಳಲಾಗಿದೆ. ಅಲ್ಲಿಯವರೆಗೆ ಸಾರ್ವಜನಿಕರು ರಾತ್ರಿ ವೇಳೆ ಮನೆಯಿಂದ ಅನಾವಶ್ಯಕವಾಗಿ ಹೊರಗೆ ಓಡಾಡಬಾರದು.
| ಎಸ್. ಶ್ವೇತಾ, ಅರಣ್ಯಾಧಿಕಾರಿ, ಚನ್ನಗಿರಿ ವಲಯ.