2 ಸಾವಿರ ಎಕರೆ ಪ್ರದೇಶದಲ್ಲಿ ಅರಣ್ಯ ನಿರ್ಮಾಣ

Forest creation in an area of ​​2 thousand acres
ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಹಮ್ಮಿಕೊಂಡಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಎಂ.ಬಿ. ಪಾಟೀಲ ಚಾಲನೆ ನೀಡಿದರು. ಪ್ರಭು ಚನ್ನಬಸವ ಸ್ವಾಮೀಜಿ, ಎಂ.ಎಸ್​. ರುದ್ರಗೌಡರ ಮತ್ತಿತರರಿದ್ದಾರೆ.
Published on

ವಿಜಯಪುರ: ಬಾಬಾನಗರ ಬಳಿ ಅಂದಾಜು 2 ಸಾವಿರ ಎಕರೆ ಪ್ರದೇಶದಲ್ಲಿ ಹನಿ ನೀರಾವರಿ ಬಳಸಿ ಮಾನವ ನಿರ್ಮಿತ ಬೃಹತ್​ ಅರಣ್ಯ ಬೆಳೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಯಲ್ಲಮ್ಮನ ಹಳ್ಳಕ್ಕೆ ಅಂದಾಜು 2.20 ಕೋಟಿ ರೂ. ವೆಚ್ಚದಲ್ಲಿ ಹೊಸ ಜಿನುಗು ಕೆರೆ ನಿರ್ಮಾಣ, ಪೂಜಾರಿ ವಸ್ತಿ ಬಳಿ 2 ಕೋಟಿ ರೂ. ವೆಚ್ಚದಲ್ಲಿ ಜಿನುಗು ಕೆರೆ ನಿರ್ಮಾಣಕ್ಕೆ ಭೂಮಿ ಪೂಜೆ, ಯಲ್ಲಮ್ಮನ ಗುಡಿ ಜೀಣೋರ್ದ್ಧಾರ, ಬದು ನೀರು ನಿರ್ವಹಣೆ ಮತ್ತು ಒಳಚರಂಡಿ ಕಾಮಗಾರಿ, ಹುಡೇದ ವಸ್ತಿ ಗರಸು ರಸ್ತೆ ನಿರ್ಮಾಣ, ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ, ಕೆಆರ್​ಐಡಿಎಲ್​ ವತಿಯಿಂದ ನಿರ್ಮಿಸಿದ ಮರಾಠಾ ಸಮುದಾಯ ಭವನ ಲೋಕಾರ್ಪಣೆ, ನರೇಗಾ ಅಡಿ ನಿರ್ಮಿಸಿದ ಗ್ರಾ.ಪಂ. ಕಟ್ಟಡ, ಗೋದಾಮು ಉದ್ಘಾಟನೆ ಹಾಗೂ 1.91 ಕೋಟಿ ರೂ. ವೆಚ್ಚದ ಕೆಪಿಎಸ್​ ಪ್ರೌಢ ಮತ್ತು ಎಂಪಿಎಸ್​ ಶಾಲಾ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ನೀರಾವರಿ, ಸುಂದರ ಪರಿಸರದ ಮೂಲಕ ಬಸವನಾಡು ಜನರಿಗಷ್ಟೆ ಅಲ್ಲ ಪಶುಪಗಳಿಗೂ ಸಂಪದ್ಭರಿತವಾಗಬೇಕು ಎಂಬುದು ಸಿದ್ಧೇಶ್ವರ ಶ್ರೀಗಳ ಕನಸಾಗಿತ್ತು. ಅವರ ಆಶಯಗಳಿಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಆ ನಿಟ್ಟಿನಲ್ಲಿ ಶ್ರೀಗಳ ಸ್ವಗ್ರಾಮ ಬಿಜ್ಜರಗಿ ಪಕ್ಕದ ಬಾಬಾನಗರದ ಬಳಿ ಹನಿ ನೀರಾವರಿ ಬಳಸಿ ಮಾನವ ನಿರ್ಮಿತ ಬೃಹತ್​ ಅರಣ್ಯ ಬೆಳೆಸುವ ಮೂಲಕ ಶ್ರೀಗಳಿಗೆ ಗೌರವ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯ ಮತ್ತು ದೇಶದ ಸರಾಸರಿಗೆ ಅನುಗುಣವಾಗಿ ವಿಜಯಪುರ ಜಿಲ್ಲೆಯಲ್ಲಿಯೂ ಅರಣ್ಯ ಬೆಳೆಸಲು ಎಲ್ಲರೂ ಕೈಜೋಡಿಸಲು ಮುಂದಾಗಬೇಕು. ಈ ಮೂಲಕ ಪರಿಸರದಲ್ಲಿ ಲೀನರಾಗಿರುವ ಸಿದ್ಧೇಶ್ವರ ಶ್ರೀಗಳಿಗೆ ಗೌರವ ಸಲ್ಲಿಸೋಣ ಎಂದು ತಿಳಿಸಿದರು.

ಬಾಬಾನಗರ ಗ್ರಾ.ಪಂ. ಸದಸ್ಯರು ಇತರರಿಗೆ ಮಾದರಿಯಾಗುವಂತೆ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಬದ್ಧತೆಯಿಂದ ಶ್ರಮವಹಿಸಿ ಪ್ರಾಮಾಣಿಕ, ಕಳಕಳಿಯಿಂದ ಗ್ರಾಮದಲ್ಲಿ ಸುಧಾರಣೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಶಾಸಕ ಮತ್ತು ಸಚಿವನಾಗಿ ನಾನು ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಭಾವೈಕ್ಯದ ಊರಾಗಿರುವ ಬಾಬಾನಗರದಲ್ಲಿ ಪಾಣಿಸಾಹೇಬ ದರ್ಗಾ ಗ್ರಾಮಸ್ಥರ ಆರಾಧನಾ ಸ್ಥಳವಾಗಿದೆ. ಇಲ್ಲಿನ ರೈತರು ಶ್ರಮಜೀವಿಗಳು. ಸಂಕಷ್ಟದ ಸಮಯದಲ್ಲಿಯೂ ದ್ರಾ ಬೆಳೆ ಉಳಿಸಿ ಬೆಳೆಸಿದ್ದಾರೆ ಎಂದರು.

ಬೇಸಿಗೆಯಲ್ಲಿ ಈ ಭಾಗದಲ್ಲಿ ಉಂಟಾಗುವ ನೀರಿನ ಕೊರತೆ ನೀಗಿಸಲು ನಮ್ಮ ಕೋಟಾದಲ್ಲಿ ಲಭ್ಯವಿರುವ ಒಂದು ಟಿಎಂಸಿ ನೀರು ಎರಡು ಕಡೆ ಸಂಗ್ರಹಿಸಲು ಸ್ಟೋರೇಜ್​ ಟ್ಯಾಂಕ್​ ನಿರ್ಮಿಸುವ ಯೋಜನೆ ಇದೆ. ಸದ್ಯ ಇಲ್ಲಿನ ಭೂಮಿಗೆ ಬಂಗಾರದ ಬೆಲೆ ಬಂದಿದ್ದು, ಯಾರೂ ಭೂಮಿ ಮಾರಬೇಡಿ ಎಂದು ಸಚಿವರು ಸಲಹೆ ನೀಡಿದರು.

ಬೆಳಗಾವಿ ಜಿಲ್ಲೆಯ ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಮಾತನಾಡಿ, ಸಚಿವ ಎಂ.ಬಿ. ಪಾಟೀಲರು ಸಿದ್ಧೇಶ್ವರ ಶ್ರೀಗಳ ಆಶಯಗಳಿಗೆ ತಮ್ಮ ಮತೇತ್ರದಲ್ಲಿ ಅಭಿವೃದ್ಧಿ ಕೈಗೊಂಡು ರೈತರ ಬಾಳು ಹಸನಾಗಿಸಿದ್ದಾರೆ. ಸಚಿವರಿಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸಿದರು.

ತಿಕೋಟಾ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಎಂ.ಎಸ್​. ರುದ್ರಗೌಡರ, ಈರನಗೌಡ ರುದ್ರಗೌಡರ, ಆರ್​.ಎಸ್​. ಪಾಟೀಲ, ರಾಮನಿಂಗ ಮಸಳಿ, ಜಕ್ಕಪ್ಪ ಎಡವೆ, ಸತೀಶ ಕಾಡಶೆಟ್ಟಿಹಳ್ಳಿ, ಯಾಕೂಬ್​ ಜತ್ತಿ, ಸೋಮನಾಥ ಬಾಗಲಕೋಟ, ಅಶೋಕ ರುದ್ರಗೌಡರ, ಗ್ರಾ.ಪಂ. ಅಧ್ಯೆ ಸಾಹೇರಾಬಾನು ಯಳ್ಳಾಪುರ, ೂಣಸಗಿ ಗ್ರಾ.ಪಂ. ಅಧ್ಯ ಸುರೇಶ ಪವಾರ, ಯಲ್ಲಪ್ಪ ಹೊನಕಟ್ಟಿ, ಪಿ.ಆರ್​. ಆಯತವಾಡ, ಯಲ್ಲಾಲಿಂಗ ಹೊನವಾಡ, ಅಣ್ಣಾಸಾಹೇಬ ಬಿರಾದಾರ, ಜಗನು ಮಹಾರಾಜ, ಗುರುಲಿಂಗ ಮಾಳಿ, ಆರ್​.ಜಿ. ಯರನಾಳ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net