ಅರಣ್ಯ ತೆರವು ನಿಲ್ಲಿಸದಿದ್ದರೆ ರಕ್ತ ಕ್ರಾಂತಿ: ಮಧು ಬಂಗಾರಪ್ಪ ಎಚ್ಚರಿಕೆ

Madhu bangarappa (3)
Published on

ಶಿವಮೊಗ್ಗ: ಸೊರಬ, ತಾಳಗುಪ್ಪ ಸೇರಿದಂತೆ ಅರಣ್ಯ ವಾಸಿಗಳ ತೆರವು ಕಾರ್ಯಾಚರಣೆಯನ್ನು ತಕ್ಷಣ ಸ್ಥಗಿತಗೊಳಿಸಿದ್ದರೆ ಹೋರಾಟ ಆರಂಭಿಸುವುದು ನಿಶ್ಚಿತ. ರೈತರಿಗಾಗಿ ರಕ್ತ ಕ್ರಾಂತಿಗೂ ಸಿದ್ಧರಿದ್ದೇವೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಮಧು ಬಂಗಾರಪ್ಪ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಕಳೆದ ಮೂರ್ನಾಲ್ಕು ದಿನಗಳಿಂದ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸ ನಡೆಯುತ್ತಿದೆ. ಇಂದು 20 ಎಕರೆ ಮಾತ್ರ ತೆರವು ಮಾಡಿರಬಹುದು. ಇದೇ ರೀತಿ ತೆರವು ಕಾರ್ಯಾಚರಣೆ ಮುಂದುವರಿದರೆ ರಾಜ್ಯಾದ್ಯಂತ 20 ಲಕ್ಷ ಎಕರೆ ಆದರೂ ಅಚ್ಚರಿಪಡಬೇಕಿಲ್ಲ. ಹಾಗಾಗಿ ಈಗಲೇ ಎಚ್ಚೆತ್ತುಕೊಳ್ಳಬೇಕಿದ್ದು ಶೀಘ್ರವೇ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ ಅವರು ಕೇವಲ 15 ದಿನಗಳಲ್ಲಿ ಅರಣ್ಯವಾಸಿಗಳ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ನೀಡಿರುವ ಭರವಸೆ ಹುಸಿಯಾಗಿದೆ. ರೈತರ ರಕ್ಷಣೆ ಮಾಡುವ ಬದಲು ಒಕ್ಕಲೆಬ್ಬಿಸುವ ಕೆಲಸಕ್ಕೆ ಸರ್ಕಾರ ಮುಂದಾಗಿದೆ ಎಂದು ಕಿಡಿಕಾರಿದರು.

30-40 ವರ್ಷಗಳಿಂದ ಬೆಳೆದ ಅಡಕೆ ಮರಗಳನ್ನು ನೆಲಸಮ ಮಾಡಲಾಗಿದೆ. ಮಿಲಿಟರಿ ಮಾದರಿ ಅರಣ್ಯಾಧಿಕಾರಿಗಳು ದರ್ಪ ತೋರಿಸಿ ಅನ್ನ ನೀಡಿದ ರೈತರನ್ನು ಬೀದಿಗೆ ತಳ್ಳುತ್ತಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇದ್ದಾಗ ಒಬ್ಬ ರೈತನನ್ನೂ ಒಕ್ಕಲೆಬ್ಬಿಸಲಿಲ್ಲ. ಆದರೆ ಡಬಲ್ ಇಂಜಿನ್ ಸರ್ಕಾರ ಇದ್ದರೂ ರೈತರ ಬಗ್ಗೆ ಚಕಾರ ಎತ್ತದೆ, ರಕ್ಷಣೆ ಮಾಡುತ್ತಿಲ್ಲ. ರೈತರ ಬದುಕಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದು ಅವರನ್ನು ಯಾರು ರಕ್ಷಣೆ ಮಾಡಬೇಕಿದೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net