ಮಳೆ ಮೊಳಕಾಲ್ಮೂರಿಗೆ ಜೀವ ಕಳೆ

dj mlk aranya
Published on

ಕೆ.ಕೆಂಚಪ್ಪ ಮೊಳಕಾಲ್ಮೂರು
ರಾಜ್ಯದೆಲ್ಲೆಡೆ ಮುಂಗಾರು ಆರಂಭವಾಗಿದ್ದಾಗ ಮೊಳಕಾಲ್ಮೂರು, ಚಳ್ಳಕೆರೆ ಭಾಗದಲ್ಲಿ ಮಳೆಯ ಕುರುಹು ಇರಲಿಲ್ಲ. ಇಲ್ಲಿನ ಜನರಲ್ಲಿ ಈ ವರ್ಷವೂ ಬರದ ಛಾಯೆ ಆವರಿಸಿತ್ತು. ಆದರೆ, ಮಳೆ ಈ ಎಲ್ಲ ಲೆಕ್ಕಚಾರವನ್ನು ತಲೆಕೆಳಗಾಗಿಸಿತು.

ಬಯಲುಸೀಮೆಯಲ್ಲಿ ಹಸಿರುವನದ ಸಿರಿ ಹೆಚ್ಚಾಗುವಂತೆ ಮಾಡಿದ್ದಲ್ಲದೆ ಕೃಷಿ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ. ರೈತರ ಮೊಗದಲ್ಲಿ ಜೀವ ಕಳೆ ಬಂದಿದೆ.

ಪ್ರಸಕ್ತ ವರ್ಷದಲ್ಲಿ ಅರಣ್ಯ ಬೆಳೆಸುವ ಕಾರ್ಯಕ್ರಮದಡಿ ಆಯ್ಕೆ ಮಾಡಿಕೊಂಡಿರುವ ಕಮರಕಾವಲು ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬರೋಬ್ಬರಿ 6.86 ಸಾವಿರ ಸಸಿಗಳ ನೆಡುತೋಪು ಕಾರ್ಯ ಪೂರ್ಣ ಹಂತದಲ್ಲಿದೆ.

ಉತ್ತಮ ಮಳೆಯಾಗಿರುವ ಕಾರಣ ನೆಟ್ಟ ಸಸಿಗಳ ಬೆಳವಣಿಗೆಗೆ ಪೂರಕವಾಗಿ ಇನ್ನು 15 ದಿನಗಳ ವರೆಗೆ ತೇವಾಂಶ ಇರಲಿದೆ.

ಕಳೆದ 2 ತಿಂಗಳ ಕಾಲ ಬರದ ತಾಪವನ್ನು ತಂದೊಡ್ಡಿದ್ದ ಮಳೆರಾಯ ಕೊನೆಗೂ ಕೃಪೆ ತೋರಿದ್ದರಿಂದ ಈಚೆಗೆ ಸುರಿದ ಧಾರಕಾರ ಮಳೆ ನೆಮ್ಮದಿ ತರಿಸಿದೆ. ಬಿತ್ತನೆ ಮಾಡಿರುವ ಫಸಲಿಗೂ ಜೀವಕಳೆ ಬಂದರೆ ಅರಣ್ಯ ಪ್ರದೇಶ ಹಸಿರಿನಿಂದ ಕಂಗೊಳಿಸುತ್ತಿದೆ.

ತಾಲೂಕು ಸರಹದ್ದಿನ 739 ಚದರ ಕಿ.ಮೀ. ಸುತ್ತಳತೆಯಲ್ಲಿ ಬರುವ ಬಾಂಡ್ರಾವಿ, ಸಂತೆಬಂಡೆ, ಕೃಷ್ಣರಾಜಪುರ, ಕಮರಕಾವಲು, ಹಿರೇಅಡವಿ, ಓಬಣ್ಣ ಹಾಗೂ ಮಲ್ಲೂರಹಳ್ಳಿ ವ್ಯಾಪ್ತಿಯಲ್ಲಿ 15.050 ಹೆಕ್ಟೇರ್ ಕಾಯ್ದಿಟ್ಟ ಅರಣ್ಯ ಪ್ರದೇಶ ಕಣ್ಣಾಯಿಸಿದ ಕಡೆಯೆಲ್ಲ ಅರೆ ಮಲೆನಾಡ ಸಿರಿಯನ್ನು ನೆನಪಿಸುತ್ತಿದೆ.

ವಿಶೇಷವಾಗಿ 4.800 ಹೆ. ಬಾಂಡ್ರಾವಿ ಕಾಯ್ದಿಟ್ಟ ಪ್ರದೇಶವನ್ನು ನೋಡುವುದೆ ಸೊಬುಗು. ಅಡವಿಯಲ್ಲಿ ಜೀವಿಸುವ ಪ್ರಾಣಿ, ಪಕ್ಷಿ ಸಂಕುಲಕ್ಕೆ ಆಹಾರ, ನೀರಿಗೂ ವರದಾನವಾಗಿದೆ.

ಕಳೆದ ವರ್ಷ ಸಂಪೂರ್ಣ ಮಳೆ ಕೈಕೊಟ್ಟ ಕಾರಣ ಮುಂಗಾರು ಆರಂಭದಲ್ಲಿ ಬಂದ ಅಲ್ಪ ಮಳೆಗೆ ಕೇವಲ 60 ಸಾವಿರ ಮಾತ್ರ ನೆಡುತೋಪು ಕಾರ್ಯಕ್ರಮ ನೆಡೆದಿತ್ತು ಎನ್ನಲಾಗಿದೆ.

ವಿವಿಧ ಜಾತಿ ಸಸಿಗಳು: ಕಮರ, ಶಿವನೆ, ಬಾಗೆ, ಯದೇವು, ಆಲ, ಅರಳಿ, ಹೊಂಗೆ, ಹುಣಸೆ, ಬಸ್ರಿ, ಸೀತಾಫಲ, ಮತ್ತಿ ಇನ್ನು ಹಲವು ಜಾತಿ ಸಸಿಗಳನ್ನ ನೆಡಲಾಗಿದೆ.

ಕಾಡು ಇದ್ದರೆ ಊರಿಗೂ ಚಂದ. ಸಕಾಲಕ್ಕೆ ಮಳೆ-ಬೆಳೆ ಹಾಗೂ ಅಂತರ್ಜಲ ವೃದ್ಧಿಯಾಗಿ ನೀರಿನ ಅಭಾವ ತಗ್ಗಲಿದೆ. ಪ್ರತಿ ಹಳ್ಳಿಗಳಲ್ಲಿ ಸೌದೆಗೆ ಕಡಿವಾಣ ಹಾಕಿ ಅಡುಗೆ ಗ್ಯಾಸ್ ಸಿಲಿಂಡರ್ ಉಪಯೋಗಿಸುವ ಕಾರಣ ಕಾಡು ನಾಶ ಮಾಡುವ ಪ್ರವೃತ್ತಿ ಕಡಿಮೆಯಾಗಿದೆ. ಇದರಿಂದ ಕಾಯ್ದಿಟ್ಟ ಅರಣ್ಯ ಬೆಳವಣಿಗೆಯಲ್ಲಿ ಗಣನೀಯ ಏರಿಕೆಯಾಗಿದೆ.ಶ್ರೀಹರ್ಷ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಹಿಂದೆ ಎಲ್ಲದಕ್ಕೂ ಕಟ್ಟಿಗೆ ಹೇರಳವಾಗಿ ಬಳಸಲಾಗುತ್ತಿತ್ತು. ಇಂದು ಅಂತಹ ಪರಿಸ್ಥಿತಿ ಇಲ್ಲ. ಮನೆಗೊಂದು ಗ್ಯಾಸ್ ಸೌಲಭ್ಯ ಇದೆ. ಪರಿಣಾಮ ಹೊಲ, ರಸ್ತೆ ಬದಿ ಹಾಗೂ ಅರಣ್ಯದಲ್ಲಿ ಬೆಳೆದಿರುವ ಗಿಡ ಮರಗಳು ಉಳಿದಿವೆ. ಇನ್ನಷ್ಟು ಜನರಲ್ಲಿ ಪರಿಸರ ಜಾಗೃತಿ ಮೂಡಿಸಬೇಕಿದೆ.ಡಿ.ಆರ್.ಲೋಕೇಶ್ವರಪ್ಪ, ನಿವೃತ್ತ ವ್ಯವಸ್ಥಾಪಕ, ಜಿಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net