

ಮಡಿಕೇರಿ:
ತಮ್ಮ ಸಮುದಾಯ ಮತ್ತು ಆವಾಸ ಸ್ಥಾನಗಳ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ ಎಂದು ಆರೋಪಿಸಿ ನಾಗರಹೊಳೆ ಅರಣ್ಯದ ಆದಿವಾಸಿ ಸಮುದಾಯದವರು ಹೋರಾಟ ತೀವ್ರಗೊಳಿಸುವ ಸೂಚನೆ ನೀಡಿದ್ದಾರೆ. ಸಂರಕ್ಷಣೆ ನೆಪದಲ್ಲಿ ನಿರ್ಬಂಧಗಳ ಮೂಲಕ ಜೈವಿಕ, ಸಾಂಸ್ಕೃತಿಕ ಜೀವನ ಹಾಗೂ ಜೀವನೋಪಾಯದ ದಬ್ಬಾಳಿಕೆ ತಮ್ಮ ಮೇಲೆ ನಡೆಯುತ್ತಿದೆ ಎನ್ನುವ ನೋವು ಇವರದ್ದು.
ಇಂಥ ದಬ್ಬಾಳಿಕೆಗಳಿಂದಾಗಿಯೇ ಕಾಫಿ ತೋಟದ ಜೀತಕ್ಕಾಗಿ ಬಂಧನಕ್ಕಾಗಿ ತಳ್ಳಲ್ಪಟ್ಟಿದ್ದೇವೆ ಎನ್ನುವ ಆತಂಕದ ಮಧ್ಯೆ ತಮ್ಮ ಹಕ್ಕುಗಳನ್ನು ಪ್ರತಿಧ್ವನಿಸುವ ನಾಮಫಲಕವೊಂದನ್ನು ನಾಣಚ್ಚಿ ಹುಲಿ ಸಫಾರಿ ಪ್ರವೇಶದ್ವಾರದಲ್ಲಿ ಅಳವಡಿಸಿದ್ದಾರೆ.
ಅರಣ್ಯ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ನಾಗರಹೊಳೆಯ ಆದಿವಾಸಿ ಸಮುದಾಯಗಳು ವಿಶ್ವ ಆದಿವಾಸಿ ಜನರ ದಿನದ ಅಂಗವಾಗಿ ಶನಿವಾರ (ಆ.9) ಮತ್ತು ಭಾನುವಾರ (ಆ.10) ನಾಗರಹೊಳೆಯ ನಾಣಚ್ಚಿ ಹಾಡಿಯಲ್ಲಿ ಪ್ರತಿಭಟನೆ ನಡೆಸಿದ್ದರು. ಈ ಹಿಂದೆಯೂ ಅನೇಕ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರು. ಆದರೆ ಈತನಕ ತಮ್ಮ ಬೇಡಿಕೆ ಮಾತ್ರ ಈಡೇರಿಲ್ಲ ಎನ್ನುವ ನೋವು ಇವರದ್ದು. ಮುಂದಿನ ಹಂತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ರಾಜ್ಯಪಾಲರ ಬಳಿಗೆ ತೆರಳಿ ತಮ್ಮ ಬೇಡಿಕೆಗಳನ್ನು ಮುಂದಿಡಲು ನಿರ್ಧರಿಸಿದ್ದಾರೆ. ಅಲ್ಲಿಯೂ ಸ್ಪಂದನೆ ಸಿಗದಿದ್ದರೆ ಕೊನೆಯ ಅಸ್ತçವಾಗಿ ನಾಗರಹೊಳೆಗೆ ಪ್ರವೇಶಿಸುವ ನಾಲ್ಕೂ ಮಾರ್ಗಗಳನ್ನು ಮುಚ್ಚಲು ಕೂಡ ತೀರ್ಮಾನ ತೆಗೆದುಕೊಂಡಿದ್ದಾರೆ.
ಅ.9 ಮತ್ತು 10ರ ಪ್ರತಿಭಟನೆ ಸಂದರ್ಭ ಈ ನೆಲದಲ್ಲಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ಸಲುವಾಗಿ ನಾಗರಹೊಳೆ ಹುಲಿ ಮೀಸಲು ಪ್ರದೇಶದ ನಾಣಚ್ಚಿ ಹುಲಿ ಸಫಾರಿ ಪ್ರವೇಶ ದ್ವಾರದಲ್ಲಿ ನಾಮಫಲಕವೊಂದನ್ನು ಅಳವಡಿಸಿದ್ದಾರೆ.
'ನಾಗರಹೊಳೆ ಅರಣ್ಯವು ಇಲ್ಲಿ ವಾಸಿಸುವ ಆದಿವಾಸಿ ಕುಲಗಳು ಅಥವಾ ಮನೆತನಗಳು ಮತ್ತು ಕುಟುಂಬಗಳ ಪವಿತ್ರ ಸಾಂಪ್ರದಾಯಿಕ ಸ್ಥಳವಾಗಿದೆ. ನೀವು ಈಗ ಆದಿವಾಸಿ ಜನರ ಸಾಂಪ್ರದಾಯಿಕ ಗಡಿಗಳನ್ನು ಪ್ರವೇಶಿಸುತ್ತಿದ್ದೀರಿ. ನಾಗರಹೊಳೆ ನಾಗರಹೊಳೆ ಆದಿವಾಸಿ ಜನರ ಸ್ವ ಆಡಳಿತ ಪ್ರದೇಶ ಆಗಿದೆ. ಈ ಅರಣ್ಯಗಳು ಆದಿವಾಸಿ ಜನರ ಆವಾಸ ಸ್ಥಾನವಾಗಿದೆ. ಈ ಪೂರ್ವಜರ ಪ್ರದೇಶದಲ್ಲಿ ಜನರು, ಅರಣ್ಯ ಹಾಗೂ ಪ್ರಾಣಿಗಳು ಸಮಾನವಾಗಿದೆ. ಇಲ್ಲಿ ಆದಿವಾಸಿ ಜನರ ಸಾಂಪ್ರದಾಯಿಕ ಕಾನೂನು ಮತ್ತು ಗ್ರಾಮ ಪರಿಷತ್ತು, ಗ್ರಾಮ ಸಭೆಯ ವಿಶೇಷ ನಿಬಂದನೆಗಳು ಅನ್ವಯಿಸುತ್ತದೆ. ದಯವಿಟ್ಟು ಈ ಪ್ರದೇಶದಲ್ಲಿ ಗೌರವ ಮತ್ತು ಘನತೆಯಿಂದ ವರ್ತಿಸಿ,' ಎನ್ನುವ ನಾಮಫಲಕ ಹಾಕಲಾಗಿದೆ.
ನಮ್ಮ ಸಾಂಪ್ರದಾಯಿಕ ಮತ್ತು ಪೂರ್ವಜರ ಭೂಮಿ ಮತ್ತು ಕಾಡುಗಳನ್ನು ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ನಾಗರಹೊಳೆ ಹುಲಿ ಮೀಸಲು ಅಧಿಕಾರಿಗಳು ಸಂರಕ್ಷಣೆ ಹೆಸರಿನಲ್ಲಿ ತಲೆಮಾರುಗಳಿಂದ ನಮ್ಮಿಂದ ಕದ್ದಿದ್ದಾರೆ ಎನ್ನುವುದು ನಾಗರಹೊಳೆ ಆದಿವಾಸಿಗಳ ಆರೋಪ.
ನಮ್ಮ ಸಾವಿರಾರು ಕುಟುಂಬ ಸದಸ್ಯರನ್ನು ನಮ್ಮ ಪೂರ್ವಜರ ಭೂಮಿಯಿಂದ ಐತಿಹಾಸಿಕವಾಗಿ ಹಿಂಸಾತ್ಮಕವಾಗಿ ಹೊರ ಹಾಕಲಾಯಿತು ಎನ್ನುವ ಆಕ್ರೋಶ ಇಲ್ಲಿಯ ಆದಿವಾಸಿಗಳಲ್ಲಿ ಮನೆ ಮಾಡಿದೆ. ಮತ್ತೊಂದು ಕಡೆ ಇದೇ ನಮ್ಮನ್ನು ಬಲವಂತದಿAದ ಹೊರಹಾಕಲಾದ ನಮ್ಮ ಪೂರ್ವಜರ ಭೂಮಿಯಲ್ಲಿ ವಾಣಿಜ್ಯ ಪ್ರವಾಸೋದ್ಯಮ ಮತ್ತು ಹುಲಿ ಸಫಾರಿಗಳನ್ನು ನಿಶ್ಚಿಂತೆಯಿAದ ನಡೆಸುವ ಮೂಲಕ ನ್ಯಾಯವನ್ನೇ ಅಣಕಿಸಲಾಗುತ್ತಿದೆ ಎನ್ನುವ ನೋವು ತೋಡಿಕೊಳ್ಳುತ್ತಾರೆ.
ಅರಣ್ಯ ಹಕ್ಕುಗಳ ಕಾಯಿದೆ 2006 ಅಡಿಯಲ್ಲಿ ಸಮುದಾಯ ಅರಣ್ಯಗಳು, ಸಮುದಾಯ ಅರಣ್ಯ ಸಂಪನ್ಮೂಲ ಹಕ್ಕುಗಳು ಹಾಗೂ ಆವಾಸ ಸ್ಥಾನಗಳ ಮೇಲಿನ ಹಕ್ಕುಗಳನ್ನು ನಿರಂತವಾಗಿ ನಿರಾಕರಿಸಿಕೊಂಡು ಬರಲಾಗುತ್ತಿದೆ. ಸಂರಕ್ಷಿತ ಪ್ರದೇಶಗಳಲ್ಲಿ ವಾಸಿಸುವ ಅರಣ್ಯವಾಸಿಗಳ ಹಕ್ಕುಗಳನ್ನು ಗುರುತಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವಂತೆ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಹಲವಾರು ಆದೇಶ, ನಿರ್ದೇಶನ, ಜ್ಞಾಪನ ನೀಡಿದ್ದರೂ ಕೊಡಗು ಮತ್ತು ಮೈಸೂರು ಜಿಲ್ಲಾಡಳಿತ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಈ ಸಂಬAಧ 2011ರಿಂದಲೇ ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ ನಿರಾಕರಣೆಯ ಉತ್ತರವಷ್ಟೇ ಬರುತ್ತಿದೆ ಎನ್ನುತ್ತಾರೆ.
ನಾಗರಹೊಳೆಯ ಆದಿವಾಸಿ ಸಮುದಾಯಗಳ ಸಮುದಾಯ ಅರಣ್ಯ ಹಕ್ಕುಗಳು ಮತ್ತು ಆವಾಸಸ್ಥಾನ ಹಕ್ಕುಗಳನ್ನು ಸಂಪೂರ್ಣವಾಗಿ ಗುರುತಿಸುವವರೆಗೆ, ಹುಲಿ ಸಫಾರಿಗಳ ವ್ಯವಹಾರವನ್ನು ಅನುಮತಿಸಬಾರದು. ನಮ್ಮ ಜನರು ಮತ್ತು ನಮ್ಮೊಂದಿಗೆ ಒಗ್ಗಟ್ಟಿನಿಂದ ನಿಂತಿರುವ ಎಲ್ಲರ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು ಮತ್ತು ನಾಗರಹೊಳೆಯ ಆದಿವಾಸಿ ಮತ್ತು ಅರಣ್ಯ ವಾಸ ಮಾಡುವ ಸಮುದಾಯಗಳನ್ನು ತಮ್ಮ ಸಾಂವಿಧಾನಿಕ ಮತ್ತು ಸಾಂಪ್ರದಾಯಿಕ ಹಕ್ಕುಗಳನ್ನು ಕೋರಿದ್ದಕ್ಕಾಗಿ ಶಿಕ್ಷಿಸಲು ಅರಣ್ಯ ಇಲಾಖೆಯ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ನಿಬಂಧನೆಗಳನ್ನು ಬಳಸಬಾರದು. ಬೇಟೆಗಾರರು ಮತ್ತು ಅತಿಕ್ರಮಣಕಾರರಿಂದ ವನ್ಯಜೀವಿಗಳನ್ನು ರಕ್ಷಿಸಲು ಸುರಕ್ಷತೆ ಮತ್ತು ಭದ್ರತಾ ವ್ಯವಸ್ಥೆಗಳನ್ನು ನವೀಕರಿಸುವ ಹೆಸರಿನಲ್ಲಿ ನಾಗರಹೊಳೆ ಅರಣ್ಯಗಳ ಒಳಗೆ ಎಸ್‌ಟಿಪಿಎಫ್, ಇಟಿಎಫ್ ಹಾಗೂ ಎಐ ಆಧಾರಿತ ಕಣ್ಣಾವಲಿನ ಆತಂಕಕಾರಿ ಹೆಚ್ಚಳದಿಂದ ನಮ್ಮ ಸಮುದಾಯಗಳಿಂದ ಈ ದೇಶದ ಕಾನೂನುಗಳು ಮತ್ತು ಸಂವಿಧಾನದಲ್ಲಿ ನೀಡಲಾಗಿರುವ ನಮ್ಮ ಹಕ್ಕುಗಳನ್ನು ಹತ್ತಿಕ್ಕುವ ಗುರಿ ಹೊಂದಿರುವುದು ಕಂಡು ಬರುತ್ತಿದೆ. ನಾಗರಹೊಳೆ ಆದಿವಾಸಿ ಜನಸಂಖ್ಯೆಯ ಪ್ರದೇಶವಾಗಿರುವುದರಿಂದ, ಇದನ್ನು ಐದನೇ ಅನುಸೂಚಿತ ಬುಡಕಟ್ಟು ಪ್ರದೇಶವೆಂದು ಘೋಷಿಸುವ ಮತ್ತು ಪಿಇಎಸ್‌ಎ ಕಾಯಿದೆ 1996 ರ ನಿಬಂಧನೆಗಳನ್ನು ಜಾರಿಗೆ ತರುವ ತುರ್ತು ಅವಶ್ಯಕತೆಯಿದೆ ಎನ್ನುವ ಒತ್ತಾಯ ನಾಗರಹೊಳೆ ಆದಿವಾಸಿಗಳಿಂದ ಕೇಳಿಬರುತ್ತಿದೆ.
ಹುಲಿ ಮೀಸಲು ಅಧಿಕಾರಿಗಳು ನಮ್ಮ ಒಪ್ಪಿಗೆಯಿಲ್ಲದೆ ಹುಲಿ ಸಫಾರಿಯ ಹೆಸರಿನಲ್ಲಿ ಅತಿಯಾದ ಹಣ ಸಂಗ್ರಹಿಸುವ ಮೂಲಕ ನಮ್ಮ ಪವಿತ್ರ ಶಕ್ತಿಗಳು ಮತ್ತು ದೇವತೆಗಳಾದ ಹುಲಿಗಳು, ಆನೆಗಳು, ಕರಡಿಗಳು ಮತ್ತು ಕಾಡು ನಾಯಿಗಳನ್ನು ವಾಣಿಜ್ಯ ಪ್ರವಾಸೋದ್ಯಮದ ಪ್ರದರ್ಶನವಾಗಿ ಬಳಸುತ್ತಿರುವುದು ಅತ್ಯಂತ ಭಯಾನಕ ಮತ್ತು ಅಗೌರವಕರ. ಪವಿತ್ರ ಆಚರಣೆಗಳು, ಅಂತ್ಯಕ್ರಿಯೆಗಳು ಮತ್ತು ಸಣ್ಣ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ನಾವು ನಮ್ಮ ಸ್ವಂತ ಭೂಮಿಗೆ ಪ್ರವೇಶಿಸಿದರೆ ಅದೇ ಹುಲಿ ಅಧಿಕಾರಿಗಳು ನಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಾರೆ. ಪ್ರವಾಸಿ ನಿರ್ವಾಹಕರು, ಕಾಫಿ ತೋಟ ಆಧಾರಿತ ರೆಸಾರ್ಟ್ಗಳು ಮತ್ತು ಹುಲಿ ಮೀಸಲು ಅಧಿಕಾರಿಗಳ ನಡುವಿನ ಭ್ರಷ್ಟ ಮೈತ್ರಿಯನ್ನು ನಾವು ಖಂಡಿಸುತ್ತೇವೆ.
ಜೆ.ಎ. ಶಿವು, ಆದಿವಾಸಿ ಮುಖಂಡ, ನಾಣಚ್ಚಿ ಹಾಡಿ, ನಾಗರಹೊಳೆ