

ತುಮಕೂರು : ಜಿಲ್ಲೆಯಲ್ಲಿ ಶೇ.10 ಗೋಮಾಳ, ಗುಡ್ಡಗಾಡು ಪ್ರದೇಶ ಹೊಂದಿರುವ ಅರಣ್ಯ ಭೂಮಿ ಇದೆ. ಇದನ್ನು ಕನಿಷ್ಠ ಶೇ.30ಕ್ಕೆ ಹೆಚ್ಚಿಸುವ ಗುರಿ ಅರಣ್ಯ ಇಲಾಖೆಯದ್ದಾಗಿದೆ ಎಂದು ಡಿಎಫ್‌ಒ ರಮೇಶ್ ತಿಳಿಸಿದರು.
ನಗರದ ಶಿರಾಗೇಟ್ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸೋಮವಾರ ಧಾನ್ ಫೌಂಡೇಷನ್, ವಾಟರ್ ಫಾರ್ ವಾಯ್ಸಲೆಸ್ ಮತ್ತು ಅರಣ್ಯ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವನಮಹೋತ್ಸವದಲ್ಲಿ ಗಿಡಕ್ಕೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಕ್ಕಳಿಗೆ ಆಸ್ತಿ ಅಂತಸ್ತಿನ ಜತೆಗೆ ಉತ್ತಮ ಪರಿಸರ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ, ಮುಂದಿನ ಪೀಳಿಗೆಗಾಗಿ ಮರಗಿಡಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಪರಿಸರ ಸಂರಕ್ಷಣೆಗೆ ಅನೇಕ ಯೋಜನೆ ಹಾಕಿಕೊಳ್ಳುತ್ತದೆ, ಸರ್ಕಾರ ಏನೇ ಯೋಜನೆಗಳನ್ನು ಹಾಕಿಕೊಂಡರೂ ಅದರ ಬಗ್ಗೆ ಅರಿವು, ತಿಳಿವಳಿಕೆ, ಜಾಗೃತಿ ಬರಲಿಲ್ಲವೆಂದರೆ ಪರಿಸರ ಉಳಿಸಲು ಸಾಧ್ಯವಿಲ್ಲ. ಮೊದಲು ನಮ್ಮ ಮನೆಯ ಸುತ್ತಮುತ್ತಲ ಪರಿಸರ ಕಾಪಾಡಿಕೊಳ್ಳಬೇಕು, ಗ್ರಾಮೀಣ ಮಹಿಳೆಯರು ಹೆಚ್ಚು ಜವಾಬ್ದಾರಿ ತೆಗೆದುಕೊಂಡು ಗಿಡ ಮರ ಪೋಷಿಸುವ ಕೆಲಸ ಮಾಡಬೇಕು ಎಂದರು.
ರೈತರು ಜಮೀನುಗಳಲ್ಲಿ ಗಿಡ ನೆಟ್ಟರೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿಯಲ್ಲಿ ವರ್ಷಕ್ಕೆ 25 ರೂ. ನಂತೆ ಮೂರು ವರ್ಷಕ್ಕೆ 125 ರೂ.ಗಳು ರೈತರ ಖಾತೆಗೆ ಜಮೆಯಾಗಲಿದೆ. ಈ ಬಗ್ಗೆ ರೈತರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ಪಡೆದು ನೊಂದಾಯಿಸಿಕೊಳ್ಳಬಹುದು ಎಂದರು.
ವಾಟರ್ ಫಾರ್ ವಾಯ್ಸಲೆಸ್ ಸಂಸ್ಥೆ ಅಧ್ಯಕ್ಷ ಸನ್ನಿಜೈನ್ ಮಾತನಾಡಿ, ಜಿಲ್ಲೆಯಾದ್ಯಂತ 10 ಸಾವಿರ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ ಮುಂತಾದ ಕಡೆಗಳಲ್ಲಿ ಗಿಡಗಳನ್ನು ನೆಡುವ ಉದ್ಧೇಶವಿದೆ. ಇದಕ್ಕೆ ಅರಣ್ಯ ಇಲಾಖೆ ಕೈಜೊಡಿಸಲಿದೆ ಎಂದರು.
ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ಮರ ಗಿಡ ಬೆಳೆಸುವಂತೆ ಮನವರಿಕೆ ವಾಡಲು ಶಿಕ್ಷಕರು ಮುಂದಾಗಬೇಕು, ಸಸಿ ನೆಡುವುದರ ಜತೆಗೆ ಪ್ರಾಣಿ ಪಕ್ಷಿಗಳಿಗೆ ನೀರುಣಿಸುವ ಕಾರ್ಯವನ್ನೂ ವಾಡುವ ಉದ್ಧೇಶ ಇರಬೇಕು ಎಂದು ಸಲಹೆ ನೀಡಿದರು. ಧಾನ್ ಫೌಂಡೇಷನ್‌ನ ಶಶಿಧರ್, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ನಟರಾಜ್, ಧಾನ್ ಫೌಂಡೇಷನ್‌ನ ಸತೀಶ್, ಪಲ್ಲವಿ ಇದ್ದರು.
ಪರಿಸರ ಉಳಿಸಿಕೊಂಡು ಹೋಗಿ : ಪರಿಸರವಿದ್ದರೆ ಜನರು ಬದುಕುವುದಕ್ಕೆ ಸಾಧ್ಯ. ಉತ್ತಮ ಗಾಳಿಯಿಂದ ಉಸಿರಾಡಲು ಪರಿಸರ ಮುಖ್ಯವಾಗಿದೆ. ನಗರ ಪ್ರದೇಶದಲ್ಲಿ ಗಿಡ ಹಾಕಿ ಪರಿಸರ ಉಳಿಸಿಕೊಂಡು ಹೋಗಬೇಕಾಗಿದೆ ಎಂದು ಮಹಾನಗರ ಪಾಲಿಕೆ ಸದಸ್ಯ ಲಕ್ಷ್ಮೀನರಸಿಂಹರಾಜು ಹೇಳಿದರು.
ಪ್ರಕೃತಿ ಎನ್ನುವುದು ಎಲ್ಲರ ತಾಯಿಯ ಹಾಗೆ. ಅದರಿಂದಲೇ ಬದುಕು ನಡೆಸುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರವನ್ನು ಬೆಳೆಸಬೇಕಾಗಿರುವುದು ಎಲ್ಲರ ಕರ್ತವ್ಯ. ಪರಿಸರ ರಕ್ಷಣೆ ವಾಡಲು ಪಣ ತೊಡಬೇಕಾಗಿದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಣೆ ಕೇವಲ ಅರಣ್ಯ ಇಲಾಖೆಯವರ ಕೆಲಸ ಮಾತ್ರ ಅಲ್ಲ ಇದರಲ್ಲಿ ಎಲ್ಲರೂ ಭಾಗವಹಿಸಿ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿ ಪರಿಸರವನ್ನು ಉಳಿಸುವುದರ ಜೊತೆಗೆ ಗಿಡಮರಗಳನ್ನು ಬೆಳೆಸುವ ಕೆಲಸ ಆಗಬೇಕು. ಗಿಡಗಳನ್ನು ಕಡಿಯುವುದನ್ನು ಮೊದಲು ನಿಲ್ಲಿಸಬೇಕು ಇಲ್ಲವಾದಲ್ಲಿ ಒಂದು ದಿನ ಆಕ್ಸಿಜನ್ ಕೊರತೆಯಾಗಿ ಜೀವ ಕಳೆದುಕೊಳ್ಳಬೇಕಾಗುತ್ತದೆ ಎಂದರು.