

ಪಾ.ಶ್ರೀ.ಅನಂತರಾಮ್ ಕೋಲಾರ
ಕರೊನಾದಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲು ಸಾಧ್ಯವಿಲ್ಲ ಎಂದು ಹಣಕಾಸು ಇಲಾಖೆ ಸ್ಪಷ್ಟಪಡಿಸಿರುವುದರಿಂದ ಜಿಲ್ಲೆಯ ಅರಣ್ಯ ಭೂಮಿ ಸಂರಕ್ಷಣೆಗೆ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿ ಅಂದಾಜು 45 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ಇದ್ದು, ಆಸ್ತಿ ಕಾಪಾಡಲು ಸೂಕ್ತ ದಾಖಲೆ ಸಿದ್ಧಪಡಿಸಿಕೊಳ್ಳದಿರುವುದರಿಂದ ಒತ್ತುವರಿ ತೆರವು ಸವಾಲಾಗಿದೆ. ಇದೀಗ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಒತ್ತುವರಿ ತೆರವಿಗೆ ಕೈ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಲಭ್ಯವಿರುವ ಭೂಮಿ ಕಂದಾಯ ಅಥವಾ ಅರಣ್ಯ ಇಲಾಖೆಗೆ ಸೇರಿದ್ದೇ ಎಂಬ ಜಿಜ್ಞಾಸೆ ಮೂಡಿದ್ದು, ಇಲಾಖೆ ಮಾಹಿತಿ ಆಧರಿಸಿ ಕಂದಾಯ ಮ್ಯುಟೇಶನ್ ಮಾಡಿಸಿಕೊಳ್ಳುವ ಮೂಲಕ ಇಲಾಖೆ ಆಸ್ತಿಯನ್ನು ಭದ್ರಪಡಿಸಿಕೊಳ್ಳಲು ದಾಖಲೆಗಳ ಸಂಗ್ರಹ ಬಿರುಸಾಗಿದೆ.
ಡಿಜಿಟಲೀಕರಣಕ್ಕೆ ಕ್ರಮ: 45 ಸಾವಿರ ಹೆಕ್ಟೇರ್‌ನಲ್ಲಿ ಸುಮಾರು 1200 ಹೆಕ್ಟೇರ್‌ಗಿಂತ ಹೆಚ್ಚು ಭೂಮಿ ಒತ್ತುವರಿಯಾಗಿದ್ದು, ದಾಖಲೆ ಇಲ್ಲದೆ ಒತ್ತುವರಿ ತೆರವು ಮಾಡಲು ಅಸಾಧ್ಯವೆಂಬ ಹಿನ್ನೆಲೆಯಲ್ಲಿ 5 ತಾಲೂಕಿನ ಅರಣ್ಯ ಭೂಮಿಯ ಮಾಹಿತಿ ಸಂಗ್ರಹಿಸಿ ಪ್ರತ್ಯೇಕ ರಿಜಿಸ್ಟರ್ ಸಿದ್ಧಪಡಿಸಿ ದಾಖಲೆ ನಾಶ ಅಥವಾ ಕಳವು ಆಗದಂತೆ ಡಿಜಿಟಲೀಕರಣಕ್ಕೂ ಕ್ರಮ ಕೈಗೊಳ್ಳಲಾಗಿದೆ.
ಕೋಲಾರ ಎಪಿಎಂಸಿ ವಿಸ್ತರಣೆ ಹಾಗೂ ಘನತ್ಯಾಜ್ಯ ವಿಲೇವಾರಿಗೆ ಜಮೀನು ಬೇಕಿರುವುದರಿಂದ ಅರಣ್ಯ ಇಲಾಖೆಯ ಭೂಮಿ ಬಳಕೆಗೆ ಚಿಂತನೆ ನಡೆದಿದೆ. ಆದರೆ ಕಂದಾಯ ಇಲಾಖೆಯಿಂದ ಪರ್ಯಾಯ ಭೂಮಿ ಹಸ್ತಾಂತರವಾಗದೆ ತನ್ನ ಸ್ವತ್ತನ್ನು ನೀಡಲು ಅರಣ್ಯ ಇಲಾಖೆಗೆ ಅಧಿಕಾರವಿಲ್ಲದಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಅಡೆತಡೆ ಉಂಟಾಗುತ್ತಿದೆ.
ಶೇ.79 ಆಸ್ತಿಗಿಲ್ಲ ದಾಖಲೆ: ಇಲಾಖೆಯ ಭೂಮಿಗೆ ಸಂಬಂಧಿಸಿದಂತೆ ಶೇ.79 ಆಸ್ತಿಗೆ ದಾಖಲೆಗಳಿಲ್ಲ, ಆರ್‌ಟಿಸಿ ಇಲ್ಲ, ಹೀಗಾಗಿ ತಾಲೂಕುವಾರು ಅರಣ್ಯ ಭೂಮಿಯ ನಿಖರ ಮಾಹಿತಿ ಕಲೆ ಹಾಕಿ, ದಾಖಲೆಗೆ ಯೋಗ್ಯವಾದ ಬುಕ್‌ಲೆಟ್ ಸಿದ್ಧಪಡಿಸಲಾಗುತ್ತಿದೆ. ಮುಳಬಾಗಿಲು ಹೊರತುಪಡಿಸಿ ಉಳಿದ ತಾಲೂಕುಗಳ ದಾಖಲೆ ಸಿದ್ಧಪಡಿಸುವ ಕಾರ್ಯ ಅಂತಿಮಘಟ್ಟ ತಲುಪಿದ್ದು, ಇನ್ನೂ ಮೂರು ತಿಂಗಳಲ್ಲಿ ಎಲ್ಲ ದಾಖಲೆ ಜಿಲ್ಲಾಧಿಕಾರಿಗೆ ಹಸ್ತಾಂತರಿಸಿ ಮ್ಯುಟೇಶನ್‌ಗೆ ಮನವಿ ಮಾಡುವ ಸಾಧ್ಯತೆಗಳಿವೆ.
ಶ್ರೀನಿವಾಸಪುರ ಜಿಲ್ಲೆಗೆ ಪ್ರಥಮ: ಶ್ರೀನಿವಾಸಪುರದಲ್ಲಿ ಅತಿ ಹೆಚ್ಚು ಅರಣ್ಯ ಭೂಮಿ ಒತ್ತುವರಿಯಾಗಿದ್ದರೂ ದಾಖಲೆ ಇಲ್ಲದೆ ಒತ್ತುವರಿ ತೆರವು ಮಾಡಲು ಸಾಧ್ಯವಾಗದೆ ಕೈಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಇಲಾಖೆ ಬಳಿ ಇರುವ ದಾಖಲೆ ಆಧರಿಸಿ ಜಿಲ್ಲಾಧಿಕಾರಿಗಳು ಅರಣ್ಯ ಭೂಮಿಗೆ ಸಂಬಂಧಿಸಿದ ದಾಖಲೆಗಳನ್ನು ಮ್ಯುಟೇಶನ್ ಮಾಡಿಕೊಟ್ಟಲ್ಲಿ ಅದರ ಆಧಾರದ ಮೇಲೆ ಒತ್ತುವರಿ ತೆರವು, ಅಭಿವೃದ್ಧಿ ಹಾಗೂ ಅಭಿವೃದ್ಧಿ ಕೆಲಸಕ್ಕೆ ಹಸ್ತಾಂತರ ಮಾಡಬಹುದೆಂಬುದು ಅಧಿಕಾರಿಗಳ ಪ್ರತಿಪಾದನೆಯಾಗಿದೆ.
ಕರೊನಾದಿಂದ ಅಭಿವೃದ್ಧಿ ಕೆಲಸಕ್ಕೆ ಅನುದಾನ ಇಲ್ಲದಂತಾಗಿದೆ. ಜಿಲ್ಲೆಯಲ್ಲಿರುವ ಅರಣ್ಯ ಭೂಮಿ ಉಳಿಸಲು ದಾಖಲೆ ಸಿದ್ಧಪಡಿಸಿಕೊಳ್ಳಲಾಗುತ್ತಿದೆ. ದಾಖಲೆ ಇಲ್ಲದೆ ಒತ್ತುವರಿ ತೆರವಿಗೆ ಮುಂದಾದರೆ ಓಕ್ಕಲೆಬ್ಬಿಸುತ್ತಿದ್ದಾರೆಂಬ ಆರೋಪ ಕೇಳಿ ಬರುತ್ತದೆ. ಇನ್ನು ಮೂರು ತಿಂಗಳಲ್ಲಿ ದಾಖಲೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಿ ಕ್ರಮಬದ್ಧಗೊಳಿಸುವಂತೆ ಕೋರಲಾಗುವುದು. ದಾಖಲೆ ಪಕ್ಕಾ ಆದ ಮೇಲೆ ಅರಣ್ಯಾಭಿವೃದ್ಧಿಗೆ ಒತ್ತು ನೀಡಲಾಗುವುದು. ಈ.ಶಿವಶಂಕರ್, ಡಿಎಫ್‌ಒ, ಕೋಲಾರ