

ವಿಜಯವಾಣಿ ಸುದ್ದಿಜಾಲ ಧಾರವಾಡ
ಅಪರಾಧ ಪ್ರಕರಣಗಳ ತನಿಖೆಯಲ್ಲಿ ವಿಧಿ ವಿಜ್ಞಾನ ಪ್ರಕ್ರಿಯೆ ಮುಖ್ಯ. ಬೆರಳಚ್ಚು ಸೇರಿ ವಿಧಿ ವಿಜ್ಞಾನ ತಜ್ಞರು ಬೇಡಿಕೆ ಹೊಂದಿದ್ದು, ರಾಜ್ಯದಲ್ಲಿ ನೂತನವಾಗಿ ಆರಂಭವಾದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದ ಬೆಳವಣಿಗೆಗೆ ಕೇಂದ್ರ ಸರ್ಕಾರ ಅಗತ್ಯ ಸಹಾಯ, ಪ್ರೋತ್ಸಾಹ ನೀಡಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ವಾಲ್ಮಿ ಕಟ್ಟಡದಲ್ಲಿನ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಯ ಹಾಗೂ ಕರ್ನಾಟಕ ಡಿಎನ್‌ಎ ಸಂಶೋಧನಾ ಸಂಸ್ಥೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ಡಿಎನ್‌ಎ ಪೊರೆನ್ಸಿಕ್ಸ್‌ನಲ್ಲಿ ಇತ್ತೀಚಿನ ಪ್ರವೃತ್ತಿಗಳ ಕುರಿತ ಅಂತರಾಷ್ಟ್ರೀಯ ಸಮ್ಮೇಳನ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ನಿಯಂತ್ರಿಸುವಲ್ಲಿ ಆರೋಪಿಗಳ ತನಿಖೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಅಗತ್ಯ. ವಿಶ್ವವಿದ್ಯಾಲಯ ಮಟ್ಟದಲ್ಲಿ ಉನ್ನತ ವ್ಯಾಸಾಂಗ ಮಾಡುವ ಪದವಿಧರರು ಸಮರ್ಥವಾಗಿ ಈ ಕಾರ್ಯ ನಿರ್ವಹಿಸುತ್ತಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗೃಹ ಇಲಾಖೆ ಮೂಲಕ ವಿಧಿ ವಿಜ್ಞಾನ ಪದವೀಧರರಿಗೆ ಆದ್ಯತೆ ನೀಡಲಾಗುತ್ತಿವೆ. ಧಾರವಾಡದ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಮತ್ತು ಡಿಎನ್‌ಎ ಕೇಂದ್ರಗಳು ಉತ್ತಮ ಕಾರ್ಯ ಮಾಡುತ್ತಿದ್ದು, ಭವಿಷ್ಯದಲ್ಲಿ ರಾಷ್ಟ್ರದ ಬೇಡಿಕೆಗಳನ್ನು ಪೂರ್ಣಗೊಳಿಸುತ್ತವೆ ಎಂದರು.
ಎನ್‌ಎಫ್‌ಎಸ್‌ಯುನ ಸುದ್ದಿಪತ್ರದ ಮೊದಲ ಆವೃತ್ತಿಯನ್ನು ಬಿಡುಗಡೆ ಮಾಡಲಾಯಿತು. ಸಮ್ಮೇಳನದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳು, ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಗಳು, ರಾಜ್ಯ ಮತ್ತು ಪ್ರಾದೇಶಿಕ ವಿಧಿ ವಿಜ್ಞಾನ ಪ್ರಯೋಗಾಲಯಗಳ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಭಾಗವಹಿಸಿದ್ದರು.
ಡಾ.ಮಂಜುನಾಥ ಘಾಟೆ ಸ್ವಾಗತಿಸಿದರು.