ಜಾನಪದದತ್ತ ವಿದೇಶಿಯರು ಆಕರ್ಷಿತ

Published on

ಬಳ್ಳಾರಿ ; ಶ್ರೀಮಂತ ನಾಡಿನ ಕಲೆ, ಸಂಸ್ಕೃತಿ, ಜಾನಪದದತ್ತ ವಿದೇಶಿಯರು ಆಕರ್ಷಿತರಾಗುತ್ತಿದ್ದಾರೆ ಎಂದು ವಿಎಸ್‌ಕೆ ವಿವಿ ಕುಲಸಚಿವ ಎಸ್.ಎನ್.ರುದ್ರೇಶ ಹೇಳಿದರು.

ಇಲ್ಲಿನ ಕುವೆಂಪುನಗರದ ಶ್ರೀಅಮೃತೇಶ್ವರ ದೇವಸ್ಥಾನದಲ್ಲಿ ಹಳೇ ದರೋಜಿ ನಾಡೋಜ ಬುರ‌್ರಕಥಾ ಈರಮ್ಮ ಫೌಂಡೇಷನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಿಶೇಷ ಘಟಕ ಯೋಜನೆಯಡಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕರ್ನಾಟಕ ಜಾನಪದ ದಿಬ್ಬಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದವೊಂದರಲ್ಲಿ ಜಾನಪದ ನೃತ್ಯ, ಸಂಗೀತ, ಹಾಡು ಕಲಿಯಲು ವಿದೇಶಿ ವಿದ್ಯಾರ್ಥಿಗಳು ಒಂದು ವರ್ಷಕ್ಕೆ 10 ಲಕ್ಷ ರೂ. ಶುಲ್ಕ ಪಾವತಿಸುತ್ತಾರೆ. ಆದರೆ, ನಮ್ಮ ವಿದ್ಯಾರ್ಥಿಗಳು ಜಾನಪದದ ಮಹತ್ವ ಅರಿಯದೆ ನಿರ್ಲಕ್ಷಿಸುತ್ತಿದ್ದಾರೆ ಎಂದು ವಿಷಾಧಿಸಿದರು. ಪಾಲಕರು ತಮ್ಮಮಕ್ಕಳಲ್ಲಿರುವ ಪ್ರತಿಭೆ, ಆಸಕ್ತಿಯನ್ನು ಗುರುತಿಸಿ ಪ್ರೋತ್ಸಾಹ ನೀಡಬೇಕು. ನಾಡೋಜ ಬುರ‌್ರಕಥಾ ದರೋಜಿ ಈರಮ್ಮಮಹಾನ್ ಪ್ರತಿಭೆ. ಅಶಿಕ್ಷಿತರಾಗಿದ್ದರೂ ಹತ್ತು ಸಾವಿರ ಹಾಡುಗಳ ಕಣಜ ಅವರಾಗಿದ್ದರು. ಮನಶಾಸ್ತ್ರಜ್ಞರ ಪ್ರಕಾರ ಪ್ರತಿಯೊಬ್ಬರು ಯಾವುದಾದರೂ ಉತ್ತಮ ಹವ್ಯಾಸಗಳಲ್ಲಿ ತೊಡಗಿಸಿಕೊಂಡು ಸಂತಸದಿಂದ ಇರಬೇಕು ಎಂದು ತಿಳಿಸಿದರು.

ಕಲ್ಯಾಣ ಸಂಸ್ಥಾನ ಮಠದ ಶ್ರೀಕಲ್ಯಾಣ ಸ್ವಾಮೀಜಿ ಮಾತನಾಡಿ, ಕಲಾವಿದರೆಂದರೆ ಶಿವನ ಪ್ರತಿರೂಪ. ಜನಪದ, ರಂಗಭೂಮಿ ಕಲಾವಿದರನ್ನು ಗೌರವಿಸಬೇಕು. ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ಇವರಿಗೆ ಬಹುಮಾನ, ಪ್ರಶಸ್ತಿ ಪುರಸ್ಕಾರಗಳ ಮೂಲಕ ಗೌರವಿಸಬೇಕು ಎಂದು ಹೇಳಿದರು.

ಗಮನ ಸೆಳೆದ ಸಾಂಸ್ಕೃತಿಕ ಕಲಾ ಪ್ರದರ್ಶನಗಳು: ತಾರನಗರದ ಬಸವರಾಜ ಸ್ವಾಮಿ ತಂಡದ ವೀರಾಗಾಸೆ ನೃತ್ಯ, ದೇವಲಾಪುರದ ಜಗದೀಶ್ ತಂಡದ ಗೊರವರ ಕುಣಿತ, ಬುಡ್ಗ ಜಂಗಮ ಸುರೇಶ ತಂಡದ ಶೂರ್ಪನಖಿ ಗರ್ವ ಭಂಗ ಎಂಬ ಜನಪದ ಹಗಲುವೇಷ ನಾಟಕ, ಹುಬ್ಬಳ್ಳಿಯ ನಾಟ್ಯಲೋಕದ ಬಸಯ್ಯ ಬನ್ನಿಗೊಳಮಠ ತಂಡದ ಕಥಕಳಿ ನೃತ್ಯ ಪ್ರದರ್ಶನ, ರೇಣುಕಪ್ಪ ಮತ್ತು ಮಾರೇಶ ಅವರಿಂದ ಜಾನಪದ ಗಾಯನ, ಹುಬ್ಬಳ್ಳಿ ಸಂಗೀತ ವಿದೂಷಿ ಶೈಲಾ ಆರ್ ಹುಟಗಿ ತಂಡದ ಪದ ನೃತ್ಯ ಪ್ರದರ್ಶನ, ಬಾಲು ಮತ್ತು ಈರಣ್ಣ ಅವರಿಂದ ತಾಷ ರಾಂಡೋಲ್, ಮಂಜುನಾಥ ತಂಡದ ಪೋಟಿವೇಷ, ರಾಘವೇಂದ್ರ ತಂಡದ ಆಂಜನೇಯ ಪ್ರವೇಶ , ಅವನಿ ಗಂಗಾವತಿ ಅವರಿಂದ ಜನಪದ ಭರತನಾಟ್ಯ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ತಂಡದವರಿಂದ ತತ್ವಪದ ಗಾಯನ, ನಾದಸ್ವರ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ಜನಮಾನಸಗೊಂಡವು.

ಕಾರ್ಯಕ್ರಮದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶ್ವ ರಾಮಣ್ಣ ಸೇರಿದಂತೆ ಅತಿಥಿ ಗಣ್ಯರನ್ನು ದೇವಸ್ಥಾನ ಸಮಿತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net