

ಮಳವಳ್ಳಿ: ದುಷ್ಟರ ಶಿಕ್ಷೆಗೆ, ಶಿಷ್ಟರ ರಕ್ಷಣೆಗೆ ಶ್ರೀ ಕೃಷ್ಣ ಪರಮಾತ್ಮ ಜನ್ಮ ತಾಳಿದ್ದು, ಆತನ ಗೀತೋಪದೇಶದಂತೆ ಕಾಯಕ ನಿರ್ವಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ವಿಶ್ವ ಹಿಂದು ಪರಿಷತ್‌ನ ಪ್ರಾಂತ್ಯ ಸೇವಾ ಪ್ರಮುಖ್ ಸತೀಶ್ ಹೇಳಿದರು.
ವಿಶ್ವ ಹಿಂದು ಪರಿಷತ್‌ಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಟ್ಟಣದ ವಿದ್ಯಾ ವಿಕಾಸ್ ಶಾಲೆಯಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹಿಂದು ಧರ್ಮರ್ಮೀರ ಮೇಲೆ ಅನ್ಯರ ಆಕ್ರಮಣ ವ್ಯವಸ್ಥಿತ ರೂಪದಲ್ಲಿ ನಡೆಯುತ್ತಿದ್ದು, ಅದರಲ್ಲೂ ಹಿಂದು ಧರ್ಮದ ಹೆಣ್ಣು ಮಕ್ಕಳ ಮೇಲೆ ನಿರಂತರವಾಗಿ ಆಕ್ರಮಣಗಳು ನಡೆಯುತ್ತಿವೆ. ಹೀಗಾಗಿ ತಮ್ಮ ರಕ್ಷಣೆಗಾಗಿ ಹೆಣ್ಣು ಮಕ್ಕಳು ವೀರ ವನಿತೆಯಾಗಿ ಹೋರಾಡಬೇಕು. ವಿಶ್ವ ಹಿಂದು ಪರಿಷತ್ ಶ್ರೀ ಕೃಷ್ಣ ಜನ್ಮಾಷ್ಟಮಿಯಂದೇ ಪ್ರಾರಂಭವಾಗಿದ್ದು, ಅಂದಿನಿಂದಲೂ ಧರ್ಮ, ಹೆಣ್ಣು ಮಕ್ಕಳು ಮತ್ತು ಗೋ ಮಾತೆಯ ರಕ್ಷಣೆಗಾಗಿ ಅಖಂಡ ಭಾರತದ ಸಂಕಲ್ಪಕ್ಕಾಗಿ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿದೆ.ಹಿಂದು ಸಂಸ್ಕಾರವನ್ನು ರೂಢಿಗತವಾಗಿ ಬೆಳೆಸಿಕೊಳ್ಳಬೇಕು. ಪ್ರತಿ ಮಗುವೂ ಶ್ರೀ ಕೃಷ್ಣನಂತೆ ಧರ್ಮ ರಕ್ಷಣೆಗೆ ಪಣತೊಡಬೇಕು, ಆತನಂತೆ ರಾಜಕೀಯ ಮುತ್ಸದ್ದಿಯಾಗಿ, ಸಂಘಟನಾ ಚತುರನಾಗಿ, ಸಾಮರಸ್ಯದ ದ್ಯೋತಕವಾಗಿ ಬಾಳಬೇಕು ಎಂದು ತಿಳಿಸಿದರು.
ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಎಂ.ಎನ್.ಮಹೇಶ್‌ಕುಮಾರ್ ಮಾತನಾಡಿ, ಪ್ರತಿಯೊಂದು ಮನೆಯಲ್ಲಿಯೂ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು, ಆರೋಗ್ಯಕರ ಜೀವನ ಪದ್ಧತಿಯಾದ ಯೋಗ, ಸಾವಯವ ಯುಕ್ತ ಆಹಾರಗಳನ್ನು ಬಳಸಬೇಕು, ಮಕ್ಕಳು ಹಿರಿಯರಿಗೆ ಗೌರವ ಕೊಡಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ರಾಧಾ ಕೃಷ್ಣರ ವೇಷಭೂಷಣ ನೋಡುಗರ ಗಮನ ಸೆಳೆಯಿತು. ವಿದ್ಯಾ ವಿಕಾಸ್ ಟ್ರಸ್ಟ್ ಅಧ್ಯಕ್ಷ ನಾಗರಾಜೇಗೌಡ, ವಿಶ್ವ ಹಿಂದು ಪರಿಷತ್ ಜಿಲ್ಲಾ ಸೇವಾ ಪ್ರಮುಖ್ ಶ್ರೀಕಂಠಸ್ವಾಮಿ, ವಕೀಲ ರವೀಂದ್ರ, ಯೋಗ ಶಿಕ್ಷಕ ದೊಡ್ಡಣ್ಣ, ಯೋಜನಾಧಿಕಾರಿ ಪಾಂಡ್ಯನ್, ಶಾಲೆಯ ಮುಖ್ಯ ಶಿಕ್ಷಕರಾದ ಯೋಗೇಶ್, ಶಶಿರೇಖಾ ಇದ್ದರು.