

ಉಡುಪಿ: ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ವಿದೇಶಿ ಕರೆನ್ಸಿ ನೀಡುವುದಾಗಿ ವಂಚಿಸಿ ಸುಲಿಗೆ ಮಾಡುತ್ತಿದ್ದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೆಹಲಿ ಲಕ್ಷ್ಮೀನಗರದ ಮೊಹ್ಮದ್ ಪೊಲಾಶ್ ಖಾನ್ (42), ಮುಂಬೈ ಇಂದಿರಾನಗರದ ನಿವಾಸಿ ಮುಹಮ್ಮದ್ ಬಿಲಾಲ್ ಶೇಖ್ (43), ಪಶ್ಚಿಮ ಬಂಗಾಳ ಮೂಲದ ಈಶಾನ್ಯ ದೆಹಲಿ ನಿವಾಸಿ ಮಹಮ್ಮದ್ ಫಿರೋಝ್ (30), ಹರಿಯಾಣದ ಫರೀದಾಬಾದ್ ನಿವಾಸಿ ನೂರ್ ಮುಹಮ್ಮದ್ (36), ಪೂರ್ವ ದೆಹಲಿಯ ಮೀರಜ್ ಖಾನ್ (32), ಮುಹಮ್ಮದ್ ಜಹಾಂಗೀರ (60) ಬಂಧಿತರು.
ಬಂಧಿತರಿಂದ ವಿದೇಶಿ ಕರೆನ್ಸಿ ನೋಟುಗಳು, 19 ಮೊಬೈಲ್ ಫೋನ್, 6,29,000 ರೂ. ನಗದು, ಮೂರು ಬೈಕ್, 30 ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಸಾರ್ವಜನಿಕರ ಬಳಿ ವಿದೇಶಿ ದಿರಮ್ಸ್ ಕರೆನ್ಸಿ ಬದಲಾವಣೆ ಮಾಡಿಕೊಡುವ ಬಗ್ಗೆ ವಿಚಾರಿಸುವ ನೆಪದಲ್ಲಿ ಪರಿಚಯ ಮಾಡಿಕೊಂಡು ಮೊದಲಿಗೆ ಒಂದು ನೈಜ ವಿದೇಶಿ ಕರೆನ್ಸಿ ನೀಡಿ, ನಂಬಿಸಿ ಬಳಿಕ ತಮ್ಮ ಬಳಿ ಇನ್ನೂ ನೈಜ ದಿರಮ್ಸ್ ಕರೆನ್ಸಿಗಳಿದ್ದು ಕಡಿಮೆ ಮೌಲ್ಯಕ್ಕೆ ನೀಡುವುದಾಗಿ ನಂಬಿಸುತ್ತಿದ್ದು, ನಿಗದಿತ ಸ್ಥಳಕ್ಕೆ ಬರುವಂತೆ ಸೂಚಿಸುತ್ತಿದ್ದರು. ವಿದೇಶಿ ಕರೆನ್ಸಿ ಇರುವುದಾಗಿ ನಂಬಿಸಿ ಬಟ್ಟೆ ಮತ್ತು ಸೋಪು ಇರಿಸಿದ ಚೀಲವನ್ನು ನೀಡಿ, ಸಾರ್ವಜನಿಕರ ಕೈನಲ್ಲಿದ್ದ ಹಣದ ಚೀಲವನ್ನು ಸುಲಿಗೆ ಮಾಡಿಕೊಂಡು ಎಳೆದು ಕೊಂಡು ಹೋಗುತ್ತಿದ್ದರು. ಈ ಬಗ್ಗೆ ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು.