

ಮಡಿಕೇರಿ:
ರೆಮೆಲ್ ಚಂಡಮಾರುತದ ಪ್ರಭಾವ ಮನೆ ಮಾಡಿರುವ ವಾತಾವರಣದ ಮಧ್ಯೆ ಕೇರಳಕ್ಕೆ ಮುಂಗಾರು ಪ್ರವೇಶ ಪಡೆದಿದೆ. ಇನ್ನು ಒಂದು ವಾರದಲ್ಲಿ ಕೊಡಗಿಗೂ ಮಾನ್ಸೂನ್ ಕಾಲಿಡುವ ಮುನ್ಸೂಚನೆಗಳು ಸಿಗಲಾರಂಭಿಸಿದ್ದು, ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿದೆ. ಈ ಮಧ್ಯೆ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಸುರಿಯುವ ಬಗ್ಗೆ ಹವಾಮಾನ ಇಲಾಖೆ ಭವಿಷ್ಯ ನುಡಿದಿರುವುದರಿಂದ ಜಿಲ್ಲೆಯ ನದಿ ತೀರ ಮತ್ತು ಸೂಕ್ಷ್ಮ ಪ್ರದೇಶದ ನಿವಾಸಿಗಳು ಈಗಲೇ ಎಚ್ಚೆತ್ತುಕೊಂಡಿದ್ದು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾರಂಭಿಸಿದ್ದಾರೆ.
ಯಾವತ್ತೂ ಮಳೆಗೆ ಹೆದರದ ಕೊಡಗಿನವರನ್ನು ೨೦೧೮ರ ಮುಂಗಾರು ಅಕ್ಷರಶಃ ತತ್ತರಿಸುವಂತೆ ಮಾಡಿದ್ದ ಕಾರಣ ಪ್ರತಿ ವರ್ಷವೂ ಮಳೆಗಾಲವನ್ನು ಆತಂಕದಿಂದಲೇ ಎದುರು ಮಾಡಿಕೊಳ್ಳುವಂಥ ಸ್ಥಿತಿ ನಿರ್ಮಾಣ ಆಗಿದೆ. ೨೦೧೮ರಲ್ಲಿ ಸುರಿದ ಮಹಾಮಳೆ, ಅಚಾನಕ್ ಆಗಿ ಸಂಭವಿಸಿದ ಪ್ರಾಕೃತಿಕ ವಿಕೋಪ ಜಿಲ್ಲೆಯ ಜನತೆಯ ಪಾಲಿಗೆ ಮರೆಯಲಾರದ ಕರಾಳ ನೆನಪುಗಳನ್ನು ಉಳಿಸಿ ಹೋಗಿದ್ದು, ಈಗ ಮಳೆಯ ಪ್ರಮಾಣ ಸ್ವಲ್ಪ ಜಾಸ್ತಿ ಆದರೂ ಸಾಕು ನಿದ್ರೆಯಲ್ಲೂ ಬೆಚ್ಚಿ ಬೀಳುವಂತಾಗಿದೆ.
೨೦೧೮ರಲ್ಲಿ ಆಗಸ್ಟ್ ೧೩ರ ರಾತ್ರಿಯಿಂದ ಸುರಿಯಲು ಆರಂಭಿಸಿದ್ದ ಮಘಾ ಮಳೆ ಹಲವು ದಶಕಗಳ ನಂತರ ಜಿಲ್ಲೆಯಲ್ಲಿ ತನ್ನ ಪ್ರತಾಪ ಮೆರೆದಿತ್ತು. ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ಹಲವೆಡೆ ಸಂಭವಿಸಿದ ಭೂಕಸಿತ, ಕುಶಾಲನಗರ ಭಾಗದಲ್ಲಿ ನದಿ ತೀರದ ಬಡಾವಣೆಗಳಲ್ಲಿ ಪ್ರವಾಹದ ಸ್ಥಿತಿ, ನಿರಾಶ್ರಿತರಾದ ಸಾವಿರಕ್ಕೂ ಅಧಿಕ ಕುಟುಂಬಗಳು, ೧೯ಕ್ಕೂ ಹೆಚ್ಚು ಮಂದಿಯ ಪ್ರಾಣಹಾನಿ ನೋಡಿ ಕೊಡಗಿನ ಜನತೆ ಬೆಚ್ಚಿಬಿದ್ದಿತ್ತು.
೨೦೧೯ರಲ್ಲೂ ಹೆಚ್ಚು ಕಡಿಮೆ ಇಂಥದ್ದೇ ಪರಿಸ್ಥಿತಿ ಪುನರಾವರ್ತನೆ ಆಯಿತು. ಆಗಸ್ಟ್‌ನಲ್ಲಿ ಆಶ್ಲೇಷ ಮಳೆಯ ಅಬ್ಬರಕ್ಕೆ ವಿರಾಜಪೇಟೆ ತಾಲೂಕು ತೋರ ಗ್ರಾಮದಲ್ಲಿ ಬೆಟ್ಟ ಕುಸಿದು ೧೦ ಮಂದಿ ಮತ್ತು ಮಡಿಕೇರಿ ತಾಲೂಕು ಕೋರಂಗಾಲದಲ್ಲಿ ಮನೆ ಮೇಲೆ ಬರೆ ಜರಿದು ಐವರು ಸೇರಿ ಒಟ್ಟು ೧೭ ಮಂದಿ ಮೃತಪಟ್ಟಿದ್ದರು. ಕಾವೇರಿ ನದಿಯಲ್ಲಿನ ಪ್ರವಾಹದಿಂದಾಗಿ ವಿರಾಜಪೇಟೆ ಮತ್ತು ಮಡಿಕೇರಿ ತಾಲೂಕಿನಲ್ಲಿ ೯೦೦ಕ್ಕೂ ಅಧಿಕ ಕುಟುಂಬಗಳು ಮನೆ ಕಳೆದುಕೊಂಡು ಬೀದಿಗೆ ಬಂದಿದ್ದವು.
೨೦೨೦ರಲ್ಲೂ ಆಗಸ್ಟ್‌ನಲ್ಲಿ ಆಶ್ಲೇಷ ಮಳೆಯ ಪ್ರತಾಪ ಜೋರಾಗಿತ್ತು. ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ಗಜಗಿರಿ ಬೆಟ್ಟ ಕುಸಿದು ಅರ್ಚಕ ಕುಟುಂಬದ ಮೂವರು ಸೇರಿ ಐವರು ಭೂಸಮಾಧಿ ಆಗಿದ್ದರು. ಕಾವೇರಿ, ಲಕ್ಷ್ಮಣ ತೀರ್ಥ ಹಾಗೂ ಜಿಲ್ಲೆಯ ಇತರ ನದಿಪಾತ್ರಗಳಲ್ಲಿ ಕಾಣಿಸಿಕೊಂಡ ಪ್ರವಾಹದಿಂದ ಸಾಕಷ್ಟು ಹಾನಿಯೂ ಸಂಭವಿಸಿತ್ತು.
ಹೀಗೆ ಸತತ ಮೂರು ವರ್ಷಗಳ ಕಾಲ ಆಗಸ್ಟ್ ತಿಂಗಳಿನಲ್ಲಿ ಕೊಡಗನ್ನು ಕಾಡಿದ್ದ ಅಬ್ಬರದ ಮಳೆ ೨೦೨೧ ಮತ್ತು ೨೦೨೨ರಲ್ಲಿ ಹೇಳಿಕೊಳ್ಳುವಂಥ ಅನಾಹುತಗಳನ್ನು ಮಾಡಿರಲಿಲ್ಲ. ಕಳೆದ ವರ್ಷವಂತೂ ವಾಡಿಕೆಗಿಂತ ಶೇ. ೩೮ರಷ್ಟು ಕಡಿಮೆ ಮಳೆಯಾಗಿ ಬರಗಾಲವನ್ನು ನೆನಪಿಸುವಂಥ ವಾತಾವರಣ ಕಂಡು ಬಂದಿತ್ತು. ಹಾಗಾಗಿ ೨೦೨೧ರ ನಂತರ ಮಳೆಗಾಲ ಕೊಡಗಿನವರಿಗೆ ಅಷ್ಟಾಗಿ ಹೆದರಿಕೆ ಹುಟ್ಟಿಸಿರಲಿಲ್ಲ. ಆದರೆ ೨೦೧೮ರ ಮಹಾಮಳೆಗೆ ಮುನ್ನ ಆ ವರ್ಷದ ಬೇಸಿಗೆ ಈ ಬಾರಿಯ ಬೇಸಿಗೆಯಂತೆ ತೀಕ್ಷ್ಣವಾಗಿದ್ದು, ಈ ವರ್ಷದಂತೆ ನದಿಗಳೆಲ್ಲಾ ಬತ್ತಿ ಹೋಗಿದ್ದವು. ನಂತರ ಮಳೆಗಾಲ ಸಾಕಷ್ಟು ಅನಾಹುತಗಳಿಗೆ ಕಾರಣವಾಗಿತ್ತು. ಈ ಅಂಶ ಈಗ ಸ್ಥಳೀಯವಾಗಿ ಚರ್ಚೆಗೆ ಕಾರಣವಾಗಿದೆ.
ಕೊಡಗು, ಮೈಸೂರು, ಹಾಸನದ ಸಮ್ಮಿಶ್ರ ವಾತಾವರಣ ಇರುವ ಜಿಲ್ಲೆಯ ಗಡಿಭಾಗದ ಕುಶಾಲನಗರ ಎಲ್ಲಾ ದೃಷ್ಟಿಯಿಂದಲೂ ಸುರಕ್ಷಿತ ಸ್ಥಳ ಎನ್ನುವ ನಂಬಿಕೆಯನ್ನು ೨೦೧೮ರ ಮಳೆಗಾಲ ಸುಳ್ಳು ಮಾಡಿತ್ತು. ಪಟ್ಟಣದ ಮೂರು ಭಾಗದಲ್ಲಿ ಸುತ್ತುವರಿದು ಹರಿಯುತ್ತಿರುವ ಕಾವೇರಿ ನದಿ ತೀರ ಪ್ರದೇಶದ ಬಡಾವಣೆಗಳಿಗೆ ನುಗ್ಗಿ ದೊಡ್ಡ ಮಟ್ಟದ ಹಾನಿ ಮಾಡಿತ್ತು. ಕಾವೇರಿ ನದಿ ಭರ್ತಿ ಆಗುತ್ತಿದ್ದಂತೆಯೇ ಇದರ ಮೊದಲ ಪ್ರಹಾರ ಆಗುವುದೇ ಕುಶಾಲನಗರದ ಮೇಲೆ. ಹಾಗಾಗಿ ಸ್ಥಳೀಯ ನದಿ ತೀರದ ಬಡಾವಣೆ ನಿವಾಸಿಗಳು ಈ ಮಳೆಗಾಲವನ್ನು ಆತಂಕದಿಂದ ಎದುರು ನೋಡುತ್ತಿದ್ದಾರೆ.
೨೦೧೮ರಲ್ಲಿ ಸಂಭವಿಸಿದ ಅನಾಹುತಗಳಿಗೆ ಹಾರಂಗಿ ಅಣೆಕಟ್ಟೆಯಲ್ಲಿ ಅವೈಜ್ಞಾನಿಕ ನೀರು ನಿರ್ವಹಣೆಯೂ ಒಂದು ಕಾರಣ ಎನ್ನುವ ವಾದಗಳಿವೆ. ಹಾಗಾಗಿ ಅನುಭವದಿಂದ ಪಾಠ ಕಲಿತಿರುವ ಹಾರಂಗಿ ಜಲಾಶಯದ ಅಧಿಕಾರಿಗಳು ನಂತರದ ವರ್ಷಗಳಲ್ಲಿ ಜಾಣ್ಮೆಯಿಂದ ನೀರು ನಿರ್ವಹಣೆ ಮಾಡುತ್ತಿದ್ದಾರೆ. ಅಣೆಕಟ್ಟೆ ತುಂಬಲು ೫ ಅಡಿಯಷ್ಟು ಬಾಕಿ ಇಟ್ಟುಕೊಂಡು ಉಳಿದ ಎಲ್ಲಾ ನೀರನ್ನು ನದಿಗೆ ಹರಿಸುವ ತಂತ್ರ ಅನುಸರಿಸುತ್ತಾ ಬರಲಾಗುತ್ತಿದೆ. ಇದರಿಂದಾಗಿ ಒಂದು ವೇಳೆ ಹಿನ್ನೀರು ಪ್ರದೇಶದಲ್ಲಿ ಹೆಚ್ಚಿನ ಮಳೆ ಆದರೂ ಹೊರ ಹರಿವು ಮೇಲೆ ನಿಯಂತ್ರಣ ಇಟ್ಟುಕೊಳ್ಳಲು ಸಾಧ್ಯವಾಗುತ್ತಿದೆ. ಈ ಮೂಲಕ ಪ್ರವಾಹ ಪರಿಸ್ಥಿತಿ ತಪ್ಪಿಸುವ ಪ್ರಯತ್ನ ನಡೆದಿದೆ ಎನ್ನುತ್ತಾರೆ ಅಧಿಕಾರಿಗಳು.
ಮಳೆಗಾಲ ಎದುರಿಸಲು ಜಿಲ್ಲಾಡಳಿತವೂ ಅಗತ್ಯ ಸಿದ್ಧತೆಗಳನ್ನು ನಡೆಸಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಲಾಗಿದ್ದು, ವಾಡಿಕೆಯಂತೆ ಬರುವ ಮುಂಗಾರು ಎದುರಿಸಲು ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹವಾಮಾನ ಇಲಾಖೆಯಿಂದ ಕಾಲ ಕಾಲಕ್ಕೆ ಮಳೆ ಮುನ್ಸೂಚನೆ ಬಗ್ಗೆ ಮಾಹಿತಿ ಬಿಡುಗಡೆ ಮಾಡಲಾಗುತ್ತದೆ. ಆ ದಿಸೆಯಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಮಾಹಿತಿ ನೀಡುವುದು, ಶಾಲಾ-ಕಾಲೇಜುಗಳು, ಅಂಗನವಾಡಿ ಕಟ್ಟಡಗಳು ಸುಸ್ಥಿತಿ ಬಗ್ಗೆ ಗಮನಹರಿಸವುದು, ಅಗತ್ಯವಿದ್ದಲ್ಲಿ ಕಾಳಜಿ ಕೇಂದ್ರವನ್ನು ತೆರೆಯುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸದ್ಯದಲ್ಲೇ ಎನ್‌ಡಿಆರ್‌ಎಫ್‌ನ ಒಂದು ತುಕಡಿಯೂ ಜಿಲ್ಲೆಗೆ ಆಗಮಿಸಲಿದೆ.
ಪರಿಸರದ ಮೇಲೆ ಮಾನವನ ಅತಿಯಾದ ಹಸ್ತಕ್ಷೇಪದಿಂದ ವಾತಾವರಣದಲ್ಲಿ ಏರುಪೇರು ಕಂಡು ಬರುತ್ತಿದೆ ಎನ್ನುತ್ತಾರೆ ಪರಿಸರ ತಜ್ಞರು. ಕೊಡಗಿನ ಮಳೆ ಮತ್ತು ಇಲ್ಲಿಯ ಪರಿಸರ ಬಗ್ಗೆ ವಿಶೇಷ ಅಧ್ಯಯನ ನಡೆಸುತ್ತಿರುವ ವಿಜ್ಞಾನಿ ಡಾ. ಹೆಚ್.ಎಸ್.ಎಂ. ಪ್ರಕಾಶ್ ಇಲ್ಲಿಯ ಪ್ರಾಕೃತಿಕ ದುರಂತಕ್ಕೆ ತಮ್ಮದೇ ಆದ ವಾದವೊಂದನ್ನು ಮುಂದಿಟ್ಟು ಗಮನ ಸೆಳೆದಿದ್ದಾರೆ. ಸಕ್ರಿಯ ಭೂಕಂಪನ ಮತ್ತು ಜ್ವಾಲಾಮುಖಿಗಳು ಮಳೆಯ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಜಿಯೋಮೀಟಿಯೋರೋಲಜಿ ವಿಜ್ಞಾನ ಸಿದ್ಧಾಂತ ಮೂಲಕ ಅವರು ಸಮರ್ಥಿಸಿಕೊಂಡಿದ್ದರು. ಇದಕ್ಕೆ ಪೂರಕವಾಗಿ ೨೦೧೭, ೨೦೧೮ ಹಾಗೂ ೨೦೧೯ರ ಕೊಡಗು, ಕೇರಳದಲ್ಲಿ ಮಹಾಮಳೆ ಮತ್ತು ಪ್ರಾಕೃತಿಕ ವಿಕೋಪ ಸಂದರ್ಭ ಭಾರತಕ್ಕೆ ನಿಕಟವಾಗಿರುವ ಜ್ವಾಲಾಮುಖಿ ವಲಯಗಳು ದೊಡ್ಡ ಪ್ರಮಾಣದಲ್ಲಿ ಸಕ್ರಿಯವಾಗಿದ್ದವು ಎನ್ನುವುದನ್ನು ಪ್ರತಿಪಾದಿಸಿದ್ದರು. ೨೦೨೧, ೨೨, ೨೩ರಲ್ಲಿ ನಮಗೆ ಸಮೀಪದಲ್ಲಿ ಇಂತಹ ಸಕ್ರಿಯ ಜ್ವಾಲಾಮುಖಿಗಳು ಇಲ್ಲದ ಕಾರಣ ಸಾಮಾನ್ಯ ಮಳೆ ಬಂದರೂ ಅನಾಹುತಕಾರಿ ಆಗಿರುವುದಿಲ್ಲ ಎಂದಿದ್ದರು. ಈ ವರ್ಷವೂ ಅವರು ಅದೇ ಮಾತನ್ನು ಹೇಳಿದ್ದಾರೆ. ಮುಂಗಾರು ಸಾಮಾನ್ಯವಾಗಿರುತ್ತದೆ. ಹೆಚ್ಚಿನ ಯಾವುದೇ ಹಾನಿ ಆಗುವುದಿಲ್ಲ ಎನ್ನುವುದು ಅವರ ಮಾತು.
ಮಳೆಗಾಲಕ್ಕೆ ನಾವು ಯಾವತ್ತೂ ಹೆದರಿದವರಲ್ಲ. ಆದರೆ ೨೦೧೮, ೨೦೧೯ ನಮಗೆ ಮರೆಯಲಾಗದ ವರ್ಷಗಳು. ೨೦೧೮ರಲ್ಲಿ ನಮ್ಮ ಮನೆಗೆ ಸುಮಾರು ೯ ಅಡಿ ನೀರು ಬಂದಿತ್ತು. ೨೦೧೯ರಲ್ಲಿ ೧೨ ಅಡಿ ನೀರು ಬಂದಿತ್ತು. ಭಾಗಮಂಡಲ ವ್ಯಾಪ್ತಿಯಲ್ಲಿ ಜೋರು ಮಳೆಯಾಗಿ ಆ ನೀರು ಇಲ್ಲಿಗೆ ಬರಲು ಸುಮಾರು ೧೦ ಗಂಟೆ ಬೇಕಾಗುತ್ತದೆ. ಆ ನೀರು ಇಲ್ಲಿಗೆ ಬರುವ ಸಮಯದಲ್ಲಿ ಇಲ್ಲೂ ಮಳೆಯಾದರೆ ಪ್ರವಾಹ ಏರುವುದು ಖಚಿತ. ಈ ಬಾರಿ ವಾಡಿಕೆಗಿಂತ ಜಾಸ್ತಿ ಮಳೆ ಬರುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಹಾಗಾಗಿ ನಾವುಗಳು ಸೂಕ್ತ ಎಚ್ಚರಿಕೆ ವಹಿಸಿದ್ದೇವೆ.
ಅಮೆ ಜನಾರ್ದನ, ಕುವೆಂಪು ಬಡಾವಣೆ, ಕುಶಾಲನಗರ
ಜೂನ್ ಮೊದಲ ವಾರದಲ್ಲಿ ಮುಂಗಾರು ಆರಂಭವಾಗುವ ಸಾಧ್ಯತೆ ಇದ್ದು, ಕೊಡಗು ಜಿಲ್ಲೆಯಲ್ಲಿ ಈ ಬಾರಿ ವಾಡಿಕೆ ಮಳೆಯಾಗುವ ನಿರೀಕ್ಷೆ ಇದೆ. ಆದ್ದರಿಂದ ಹೆಚ್ಚಿನ ಮಳೆಯಾದಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕಿದೆ. ಈಗಾಗಲೇ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ತಹಸೀಲ್ದಾರರು, ತಾ.ಪಂ ಇಒಗಳು ಇತರರು ಜಂಟಿಯಾಗಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿದೆ. ಅಗ್ನಿಶಾಮಕ ದಳ ತುರ್ತು ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸಲು ಅಗತ್ಯ ಸುರಕ್ಷಾ ಉಪಕರಣಗಳೊಂದಿಗೆ ಸನ್ನದ್ಧವಾಗಿರಬೇಕು. ಗೃಹರಕ್ಷಕ ದಳ ಸಿಬ್ಬಂದಿಗಳು ಸಹ ತುರ್ತು ಸೇವೆಗೆ ಲಭ್ಯವಿರುವಂತೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಲಾಗಿದೆ.
ವೆಂಕಟ್ ರಾಜಾ, ಕೊಡಗು ಜಿಲ್ಲಾಧಿಕಾರಿ
ಜಿಯೋಮೀಟಿಯೋರೋಲಜಿ ವಿಜ್ಞಾನದ ಅಧ್ಯಯನದ ಆಧಾರದಲ್ಲಿ ಇದು ನೂರಕ್ಕೆ ನೂರು ವೈಜ್ಞಾನಿಕ ಮುನ್ಸೂಚನೆ. ಸಕ್ರಿಯ ಜ್ವಾಲಾಮುಖಿಗಳು ಮಳೆಯ ತೀವ್ರತೆ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಬಾರಿ ಭಾರತಕ್ಕೆ ಹತ್ತಿರದಲ್ಲಿ ಇಂತಹ ಯಾವುದೇ ಜ್ವಾಲಾಮುಖಿಗಳು ಕಂಡುಬರುತ್ತಿಲ್ಲ. ೨೦೧೯ರಲ್ಲಿ ಭಾರಿ ಮಳೆಯ ನನ್ನ ಭವಿಷ್ಯ ಸರಿಯಾಗಿತ್ತು. ೨೦೨೦, ೨೦೨೧, ೨೦೨೨ ರಲ್ಲಿ ನಾನು ಸಾಮಾನ್ಯ ಮುಂಗಾರು ಊಹಿಸಿದ್ದೆ. ಅದು ಕೂಡ ಸರಿಯಾಯಿತು. ೨೦೨೩ಕ್ಕೆ ನಾನು ನೈಋತ್ಯ ಮತ್ತು ಈಶಾನ್ಯ ಮುಂಗಾರಿನಲ್ಲೂ ಮಳೆಯ ಕೊರತೆ ಊಹಿಸಿದ್ದು ಕೂಡ ಸರಿ ಎಂದು ಸಾಬೀತಾಗಿದೆ. ೨೦೨೪ರಲ್ಲೂ ಇದು ಮುಂದುವರಿಯಲಿದೆ.