

ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್ಡಿಎಂ ಆಸ್ಪತ್ರೆಯ ವೈದ್ಯರ ತಂಡ ಅಪರೂಪದ ಶಸ್ತ್ರಚಿಕಿತ್ಸೆ ಮಾಡಿದ್ದು, ವ್ಯಕ್ತಿಯೊಬ್ಬನ ತುಂಡಾಗಿದ್ದ ಎಡಗೈಯನ್ನು ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದೆ.
ಸವದತ್ತಿ ತಾಲೂಕಿನ ಗ್ರಾಮವೊಂದರ 45 ವರ್ಷದ ವ್ಯಕ್ತಿಯ ಮುಂಗೈ, ಜಗಳದಲ್ಲಿ ಕುಡಗೋಲಿನ ಏಟಿಗೆ ತುಂಡಾಗಿತ್ತು. ಆತನ ಪತ್ನಿಯ ಕಿವಿಯ ಭಾಗ ತುಂಡರಿಸಿತ್ತು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಇಬ್ಬರನ್ನೂ ಎಸ್ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಾ. ನಿರಂಜನಕುಮಾರ ಅವರು ಪ್ಲಾಸ್ಟಿಕ್ ಸರ್ಜರಿಯ ವೈದ್ಯರ ತಂಡದ ನೇತೃತ್ವ ವಹಿಸಿ ಮಾರ್ಗದರ್ಶನ ನೀಡಿದರು. ಅವರೊಂದಿಗೆ ಡಾ. ಅವಿನಾಶ ಪ್ರಭು, ಡಾ. ಅನಿಲ ಆರ್., ಡಾ. ಸಂಚಿತಾ, ಡಾ. ಅಲಕಾ ಭಾಗವಹಿಸಿದ್ದರು. ಡಾ. ನವೀನ ಹಾಗೂ ಡಾ. ಪವಿತ್ ಅವರು ಎಲುಬುಗಳನ್ನು ಜೋಡಿಸಿದರೆ ಡಾ. ಸುನೀಲ ಅವರು ಇತರ ಗಾಯಗಳಿಗೆ ಚಿಕಿತ್ಸೆ ನೀಡಿದರು. ಡಾ. ಸಮೀರ ದೇಸಾಯಿ, ಡಾ. ಆಸಿಫ್ ಮತ್ತು ಡಾ. ಸುಶ್ಮಿತಾ ಅರಿವಳಿಕೆ ತಜ್ಞರಾಗಿ ಕಾರ್ಯನಿರ್ವಹಿಸಿದರು.
ಕರೊನಾ ಮಹಾಮಾರಿಯಿಂದಾಗಿ ಲಾಕ್ಡೌನ್ ಮಧ್ಯೆಯೂ ಮರುಜೋಡಣೆ ತುರ್ತಚಿಕಿತ್ಸೆಗೆ ವೈದ್ಯರು ಮುಂದಾದರು. ನಿರಂತರ 10 ಗಂಟೆಯಷ್ಟು ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದರು. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ವ್ಯಕ್ತಿಯ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.
ಇಂಥ ಸಂದರ್ಭದಲ್ಲಿ ಏನು ಮಾಡಬೇಕು?: ದೇಹದ ಭಾಗಗಳು ತುಂಡಾದಾಗ ಮರುಜೋಡಣೆ ಶಸ್ತ್ರಚಿಕಿತ್ಸೆ ಅನಿವಾರ್ಯ. ಅದು ಸಫಲವಾಗಲು ಮುಖ್ಯವಾಗಿ ಸ್ವಚ್ಛತೆ ಅಗತ್ಯ. ತುಂಡಾದ ಭಾಗವನ್ನು 2-3 ನಿಮಿಷ ಹರಿಯುವ ಶುದ್ಧ ನೀರಿನಲ್ಲಿ ತೊಳೆಯಬೇಕು. ನಂತರ ಸ್ವಚ್ಛವಾದ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ, ಅದರ ಸುತ್ತ ತಣ್ಣಗಾಗುವಂತೆ ಮಂಜುಗಡ್ಡೆಗಳನ್ನು ಹಾಕಬೇಕು. ಸೋಂಕು, ಕೀವು ಆಗದಂತೆ ಮುಂಜಾಗ್ರತೆ ವಹಿಸಬೇಕು. ಗಾಯಾಳುವನ್ನು ಶೀಘ್ರವೇ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಬೇಕು ಎಂದು ಡಾ. ನಿರಂಜನಕುಮಾರ ತಿಳಿಸಿದ್ದಾರೆ.