ನದಿ ನೀರು ಬಳಸದಂತೆ ಹೊರಡಿಸಿರುವ ಆದೇಶ ಹಿಂಪಡೆಯಲು ಒತ್ತಾಯ

bsp paksha
Published on

ಮಡಿಕೇರಿ: ಕೃಷಿ ಚಟುವಟಿಕೆಗಳಿಗೆ ನದಿ ನೀರು ಬಳಸದಂತೆ ಜಿಲ್ಲಾಡಳಿತ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆಗೆ ವಿರೋಧ ವ್ಯಕ್ತಪಡಿಸಿರುವ ಕೊಡಗು ಜಿಲ್ಲಾ ಬಹುಜನ ಸಮಾಜ ಪಕ್ಷ, ಕೂಡಲೇ ಆದೇಶವನ್ನು ಹಿಂಪಡೆಯುವಂತೆ ಪಕ್ಷದ ಜಿಲ್ಲಾಧ್ಯಕ್ಷ ದಿವಿಲ್ ಕುಮಾರ್ ಒತ್ತಾಯಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗಿನ ಆರ್ಥಿಕತೆಯು ಕಾಫಿ ಕೃಷಿಯನ್ನೇ ಅವಲಂಬಿಸಿದ್ದು, ವರ್ಷಕ್ಕೊಮ್ಮೆ ಕಾಫಿ ಗಿಡಗಳಿಗೆ ನೀರು ಹಾಯಿಸಬೇಕಾಗುತ್ತದೆ. ಸೂಕ್ತ ಸಮಯದಲ್ಲಿ ನೀರು ಒದಗಿಸದಿದ್ದಲ್ಲಿ ಮುಂದಿನ ವರ್ಷದ ಫಸಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಆರ್ಥಿಕತೆಯೇ ಬುಡಮೇಲಾಗಲಿದೆ. ಇದರಿಂದ ಬೆಳೆಗಾರರು ಮಾತ್ರವಲ್ಲ, ಕಾರ್ಮಿಕ ವರ್ಗವೂ ಸಮಸ್ಯೆಗೆ ಸಿಲುಕಲಿದೆ. ಮಾರ್ಚ್‌ನಲ್ಲಿ ಮಳೆಯಾಗದಿದ್ದರೆ, ನೀರಾವರಿ ಮೂಲಕ ಗಿಡಗಳನ್ನು ರಕ್ಷಿಸಿಕೊಳ್ಳಬೇಕಿದ್ದು, ಬೆಳೆಗಾರರರ ಸಂಕಷ್ಟ ಅರಿತು ಜಿಲ್ಲಾಧಿಕಾರಿಗಳು ತಮ್ಮ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.


ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಸ್ತುವಾರಿ ಕಳ್ಳೀರ ಹರೀಶ್, ಜಿಲ್ಲಾ ಉಪಾಧ್ಯಕ್ಷೆ ಹಾಜಿರಾಬಿ, ನಗರಾಧ್ಯಕ್ಷ ಪ್ರದೀಶ್, ನಗರ ಉಪಾಧ್ಯಕ್ಷೆ ರೋಹಿಣಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net