

ಲೋಕಾಪುರ : ಪಟ್ಟಣದ ರೈಲು ನಿಲ್ದಾಣದಿಂದ ಪ್ಯಾಸೆಂಜರ್ ರೈಲು ಆರಂಭಿಸಲು ಮೇ 22ರಂದು ಬಾಗಲಕೋಟೆಯಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ರಾಜ್ಯ ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ಧೀನ ಖಾಜಿ ಹೇಳಿದರು.
ಲೋಕಾಪುರ ರೈಲು ನಿಲ್ದಾಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯಿಂದ ಲೋಕಾಪುರದವರೆಗೆ ರೈಲ್ವೆ ಕಾಮಗಾರಿಗೆ ಸುಮಾರು ಒಂದು ಸಾವಿರ ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ, ಅಧಿಕಾರಿಗಳ ಮತ್ತು ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಈ ಕಾಮಗಾರಿ ಕುಂಟುತ್ತಾ ಸಾಗಿದೆ ಎಂದರು.
ಮುಧೋಳ, ಜಮಖಂಡಿ, ತೇರದಾಳ, ಮಹಾಲಿಂಗಾಪುರ, ಬನಹಟ್ಟಿ ಭಾಗದ ಸಾರ್ವಜನಿಕರಿಗೆ ಅನುಕೂಲವಾಗಲು ಶೀಘ್ರದಲ್ಲೇ ಲೋಕಾಪುರದಿಂದ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು. ಇದರಿಂದ ಬೆಂಗಳೂರಿಗೆ ಮತ್ತು ಹೈದ್ರಾಬಾದ್, ಮುಂಬೈಗೆ ಹೋಗಲು ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದರು.
ಯುವ ಮುಖಂಡ ಗುರುರಾಜ ಉದಪುಡಿ ಮಾತನಾಡಿ, 2012 ರಲ್ಲಿ ಪ್ರಾರಂಭವಾದ ಬಾಗಲಕೋಟೆ-ಕುಡಚಿ ರೈಲ್ವೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನವನಗರ, ಸುಳಿಕೇರಿ, ಚಿಕ್ಕಶೆಲ್ಲಿಕೇರಿ, ಕೆರಕಲಮಟ್ಟಿ ಮತ್ತು ಖಜ್ಜಿಡೋಣಿ ರೈಲು ನಿಲ್ದಾಣಗಳು ಧೂಳು ತಿಂದು ಕಟ್ಟಡಗಳು ಶಿಥಲಾವಸ್ಥೆಗೊಂಡಿವೆ. ಆದಷ್ಟು ಬೇಗನೆ ಲೋಕಾಪುರದವರೆಗೆ ಪ್ಯಾಸೆಂಜರ್ ರೈಲು ಪ್ರಾರಂಭಿಸಬೇಕು ಎಂದರು.
ರೈತ ಮುಖಂಡ ಸುಭಾಸ ಶಿರಬೂರ ಮಾತನಾಡಿ, ಲೋಕಾಪುರದಿಂದ ಕುಡಚಿಯವರೆಗೆ ಬಾಕಿ ಉಳಿದ ಕಾಮಗಾರಿಯನ್ನು ಏಕಕಾಲದಲ್ಲೇ ತುಂಡು ಗುತ್ತಿಗೆ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು. ಲೋಕಾಪುರದಿಂದ ರಾಮದುರ್ಗ, ಸವದತ್ತಿ ಯಲ್ಲಮ್ಮ, ಧಾರವಾಡವರೆಗೆ ನೂತನ ರೈಲು ಮಾರ್ಗದ ಅಂತಿಮ ಸಮೀಕ್ಷಾ ವರದಿಗೆ ಆದೇಶ ಮಾಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಗುಲಾಬಸಾಬ ಅತ್ತಾರ, ಮಹೇಶ ಹುಗ್ಗಿ, ಅರುಣ ನರಗುಂದ, ನೀಲೇಶ ಬನ್ನೂರ, ಲೋಕಣ್ಣಾ ಉಳ್ಳಾಗಡ್ಡಿ, ಮೈನುದ್ದೀನ ಖಾಜಿ ಮತ್ತಿತರರಿದ್ದರು.