ದೈಹಿಕ ಶಿಕ್ಷಣ ಶಿಕ್ಷಕರ ಸಮಸ್ಯೆ ಪರಿಹರಿಸಲು ಒತ್ತಾಯ

19-KLG-3 MANAVI
Published on

ಕಲಘಟಗಿ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಕಲಘಟಗಿ ತಾಲೂಕು ಘಟಕದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕರ ಪ್ರಮುಖ ಬೇಡಿಕೆಗಳನ್ನು ಈಡೇರಿಸುವುದು ಹಾಗೂ ಸಮಸ್ಯೆಗಳನ್ನು ಬಗೆಹರಿಸಿ ಶಾಶ್ವತ ಪರಿಹಾರ ದೊರಕಿಸಿ ಕೊಡಬೇಕು ಎಂದು ಸಂಘದ ವತಿಯಿಂದ ಹಲವು ವರ್ಷಗಳಿಂದ ಒತ್ತಾಯಿಸಲಾಗುತ್ತಿದೆ. ಆದರೆ, ಇಲಾಖೆಯಿಂದ ಇಲ್ಲಿಯವರೆಗೆ ಯಾವುದೇ ಆದೇಶ ನೀಡದೆ ವಿಳಂಬ ಮಾಡಲಾಗುತ್ತಿದೆ ಎಂದು ದೂರಿದರು.

ದೈಹಿಕ ಶಿಕ್ಷಣ ವಿಷಯ ಬೋಧಿಸುತ್ತಿರುವ ಶಿಕ್ಷಕರನ್ನು ಮುಖ್ಯ ಶಿಕ್ಷಕರ ಮುಂಬಡ್ತಿ, ದೈಹಿಕ ಶಿಕ್ಷಕರ ನೇಮಕಾತಿ, ಸಹ ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು. ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳನ್ನು ಜುಲೈ ಅಂತ್ಯದೊಳಗೆ ಈಡೇರಿಸದೇ ಇದ್ದಲ್ಲಿ ಪ್ರಸ್ತುತ ವರ್ಷದಿಂದ ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ದಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಆರ್. ಸನದಿ, ಕಾರ್ಯದರ್ಶಿ ಬಿ.ಬಿ. ಹಾದಿಮನಿ, ಖಜಾಂಜಿ ಎ.ಜೆ. ಪಠಾಣ, ಅಕ್ಕಪ್ಪ ಕುರಣಿ, ಸಿ.ಎಸ್. ಕಾಲವಾಡ, ಪ್ರಕಾಶ ಕುಂಬಾರ, ಎಸ್.ಡಿ. ನಾಯಕ, ಮಂಜುನಾಥ ಗಾಣಿಗೇರ, ಎಂ.ಕೆ. ಅರ್ಕಸಾಲಿ, ಎಂ.ಎ. ಕೊಂಕಣಿ, ಮ್ಯಾಕ್ಸಿ ಫರ್ನಾಂಡಿಸ್, ಸೌಭಾಗ್ಯ ವಗ್ಗರಣಿ, ದಾಕ್ಷಾಯಿಣಿ ಗಣಚಾರಿ, ಜಯಶ್ರೀ ಚಿಕ್ಕನರ್ತಿ, ಡಿ.ಬಿ. ಪದ್ಮಣ್ಣವರ ಹಾಗೂ ಸಂಘದ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net