

ಮೈಸೂರು; ಪಾಲಿಕೆ, ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೇರ ಪಾವತಿ, ಹೊರಗುತ್ತಿಗೆ ಪದ್ಧತಿಯ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ವಾಹನ ಚಾಲಕರ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಮಾಜಿ ಮೇಯರ್ ನಾರಾಯಣ ನೇತೃತ್ವದಲ್ಲಿ ಪೌರಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘ, ಮೈಸೂರು ಮಹಾನಗರ ಪಾಲಿಕೆ ಕಾಯಂ ಮತ್ತು ಗುತ್ತಿಗೆ ಪೌರಕಾರ್ಮಿಕರ ಮಹಾಸಂಘದ ನೇತೃತ್ವದಲ್ಲಿ ಸಿದ್ಧಾರ್ಥನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಹತ್ತು ಮಹಾನಗರ ಪಾಲಿಕೆಯಲ್ಲಿ ಹಲವು ವರ್ಷಗಳಿಂದ 544 ಜನ ಒಳಚರಂಡಿ ಸಹಾಯಕ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ವಿಳಂಬ ಮಾಡದೆ ಇವರನ್ನು ಕಾಯಂಗೊಳಿಸಬೇಕು. ಪೌರಕಾರ್ಮಿಕರಿಗೆ ಸಂಬಂಧಿಸಿದ ನೇಮಕಾತಿ ನಿಯಮಗಳಿಗೆ ಸಮಗ್ರ ತಿದ್ದುಪಡಿ ತರಬೇಕು. ಪ್ರಸ್ತುತ ಇರುವ ಶೇ.50ರಷ್ಟು ಕಾಯಂ, ಶೇ.50ರಷ್ಟು ನೇರಪಾವತಿ ಪದ್ಧತಿ ರದ್ದುಪಡಿಸಬೇಕು. ಶೇ.100ರಷ್ಟು ಕಾಯಂ ಸೇವೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಪೌರಕಾರ್ಮಿಕರ ನೇಮಕ ಕುರಿತು ವಿಶೇಷ ನೇಮಕಾತಿ ಜಾರಿಗೊಳಿಸಬೇಕು. 700 ಜನಕ್ಕೆ ಒಬ್ಬ ಪೌರಕಾರ್ಮಿಕ ಎಂಬುದರ ಬದಲು 500ಕ್ಕೆ ಒಬ್ಬ ಪೌರಕಾರ್ಮಿಕರಂತೆ ನೇಮಕ ಮಾಡಲು ಆದೇಶಿಸಬೇಕು ಎಂದು ಒತ್ತಾಯಿಸಿದರು.
ಮೈಸೂರು ಪಾಲಿಕೆಯಲ್ಲಿ ನೇರಪಾವತಿ ಪದ್ಧತಿಯಡಿ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮೃತಪಟ್ಟ ಪೌರಕಾರ್ಮಿಕರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬೇಕು. ನೇರಪಾವತಿ ಪೌರಕಾರ್ಮಿಕರು ಮೃತರಾದರೆ ಶವ ಸಂಸ್ಕಾರಕ್ಕೆ 25 ಸಾವಿರ ರೂ., ಪರಿಹಾರವಾಗಿ 10 ಲಕ್ಷ ರೂ. ನೀಡಬೇಕು. ನಿವೃತ್ತಿಯಾದರೆ 10 ಲಕ್ಷ ರೂ. ನಿವೃತ್ತಿ ವೇತನ ನೀಡಬೇಕು. ಗೃಹಭಾಗ್ಯ ಯೋಜನೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.
ಮನೆ-ಮನೆ ಕಸ ಸಂಗ್ರಹ ಮಾಡುವ ಸ್ವಚ್ಛತಾ ವಾಹನ ಚಾಲಕರ ಸೇವೆಯನ್ನು ಕಾಯಂ ಮಾಡಬೇಕು. ಎಲ್ಲ ಪೌರಕಾರ್ಮಿಕರಿಗೂ ಆರೋಗ್ಯ ಕಾರ್ಡ್ ನೀಡಬೇಕು. ಪೌರಕಾರ್ಮಿಕರಿಗೆ ಮೈಸೂರು ನಗರದಲ್ಲಿ ವಿಶ್ರಾಂತಿ ಕೊಠಡಿ, ಶೌಚಗೃಹ ಸೌಲಭ್ಯ ಕಲ್ಪಿಸಲು ಪಾಲಿಕೆ ನಿರ್ಲಕ್ಷೃ ವಹಿಸಿದ್ದು, ತಕ್ಷಣ ಈ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಪೌರಕಾರ್ಮಿಕರ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ರೈತ ವಿದ್ಯಾನಿಧಿ ಮಾದರಿಯಲ್ಲಿ ವಿದ್ಯಾರ್ಥಿ ವೇತನ ಜಾರಿ ಮಾಡಬೇಕು. ಒಳಚರಂಡಿ ಸಹಾಯಕ ಪೌರಕಾರ್ಮಿಕರಿಗೆ, ಸ್ವಚ್ಛತಾ ವಾಹನ ಚಾಲಕರಿಗೆ ಸಂಕಷ್ಟ ಭತ್ಯೆ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಪೌರಕಾರ್ಮಿಕರ ಮುಖಂಡರಾದ ಎಸ್.ಎಂ.ಪಳನಿಸ್ವಾಮಿ, ಎಸ್.ನಾಗರಾಜು, ಆರ್.ಶಿವಣ್ಣ, ಎನ್.ರಾಜು, ಆರ್.ದಾಸ್, ಯತಿರಾಜ್, ಪಿ.ಮಂಜುನಾಥ್, ಪಳನಿ, ಆರ್.ಹರೀಶ್, ಜೈರಾಮ್, ಶೇಷ, ಆರ‌್ಮುಗಂ, ಆರ್.ಆರ್.ರಮೇಶ್, ಆರ್.ಜಿ.ಅಶೋಕ್, ಬನ್ನಮ್ಮ, ಸಿ.ಪಿ.ರಾಜೀವ್‌ಕುಮಾರ್, ಕಮಲ್, ಶಂಕರಪ್ಪ, ಜಿ.ಮುರುಗೇಶ್ ಇತರರು ಇದ್ದರು.