

ಶಿಗ್ಗಾಂವಿ: ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ, ಹಳೇ ಪಿಂಚಣಿ ಯೋಜನೆ ಮರು ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯ ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಪಟ್ಟಣದಲ್ಲಿ ತಹಸೀಲ್ದಾರ್ ಸಂತೋಷ ಹಿರೇಮಠ ಮೂಲಕ ರಾಜ್ಯ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.
ಸರ್ಕಾರವು ಸರ್ಕಾರಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿ ಮಾಡುವ ಭರವಸೆ ನೀಡಿತ್ತು. ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೆ 2014ರ ಕಾಲ್ಪನಿಕ ವೇತನ ವಿಧೇಯಕವನ್ನು ಪೂರ್ವಾನ್ವಯಗೊಳಿಸಿರುವುದು ತಪ್ಪು ಮತ್ತು ಆ ಕಾಯ್ದೆಯನ್ನು ಭವಿಷ್ಯಾವರ್ತಿಯಾಗಿ, ಕಾಯ್ದೆ ಜಾರಿಗೆ ಬಂದ ದಿನದಿಂದ ಅನ್ವಯಿಸಲು ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಪತ್ರ ಬರೆದು ಆಗ್ರಹಿಸಿದ್ದರು. ಅಲ್ಲದೆ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅನುದಾನ ರಹಿತ ಅವಧಿ ಪರಿಗಣಿಸಿ ಪಿಂಚಣಿ ಸೌಲಭ್ಯ ನೀಡುವ ಭರವಸೆ ನೀಡಿದ್ದರು.
ಆದರೆ, 2006 ಏಪ್ರಿಲ್ 1ರ ಪೂರ್ವದಲ್ಲಿ ವಿವಿಧ ಇಲಾಖೆಗಳಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿರುವ ಪ್ರಕರಣ ಪರಿಗಣಿಸಿ ನೌಕರರನ್ನು ಎನ್‌ಪಿಎಸ್ ನಿಂದ ಒಪಿಎಸ್‌ಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ. ಅದರಂತೆಯೇ ಅನುದಾನಿತ ಶಾಲಾ ಕಾಲೇಜುಗಳಲ್ಲಿ ಸಾವಿರಾರು ನೌಕರರು 1987ರಿಂದ 2006ರ ಅವಧಿಯಲ್ಲಿ ಮಾದರಿ ಸಿಬ್ಬಂದಿ ನೇಮಕಾತಿ ನಿಯಮದಂತೆ ನೇಮಕ ಹೊಂದಿ ನಿರಂತರ ಸೇವೆ ಸಲ್ಲಿಸಿ 2006 ಏಪ್ರಿಲ್ 1ರ ನಂತರ ಸರ್ಕಾರದ ಸಹಾಯಾನುದಾನಕ್ಕೆ ಒಳಪಟ್ಟು ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಆದ್ದರಿಂದ ಸರ್ಕಾರವು ಖಾಸಗಿ ಅನುದಾನಿತ ಶಾಲಾ-ಕಾಲೇಜುಗಳಲ್ಲಿ 2006 ಏಪ್ರಿಲ್ 1ರ ಪೂರ್ವದಿಂದ ಸೇವೆ ಸಲ್ಲಿಸುತ್ತಿರುವ, ನಿವೃತ್ತಿ ಹೊಂದಿರುವ ನೌಕರರಿಗೆ ಸೇವೆಗೆ ಸೇರಿದ ದಿನಾಂಕದಿಂದಲೇ ಹಳೇ ಪಿಂಚಣಿ ವ್ಯವಸ್ಥೆ ಒದಗಿಸಿಕೊಡಬೇಕು ಎಂದು ಮನವಿ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕು ಅನುದಾನಿತ ಶಿಕ್ಷಕರ ಸಂಘದ ಗೌರವ ಅಧ್ಯಕ್ಷ ಪಿ.ವಿ. ತಂಬದಮನಿ, ಅಧ್ಯಕ್ಷ ಜೆ.ಎಂ. ದೇವರಮನಿ, ಬಿ.ಬಿ. ಸವಡಿ, ಎಂ.ಎ. ಗಾಣಿಗೇರ, ಐ.ವಿ. ತಾಡಪತ್ರಿಮಠ, ಕೆ.ಜೆ. ಮಲ್ಲೂರ, ಮಹೇಶ ಪಾಟೀಲ, ಡಿ.ಎಸ್. ದುಂಡಪ್ಪನವರ, ಎಂ.ಡಿ. ದೇಶಪಾಂಡೆ ಇದ್ದರು.