

ಗಜೇಂದ್ರಗಡ: ಪಟ್ಟಣದಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಗುರುವಾರ ಬಸ್ ಘಟಕದ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಗಜೇಂದ್ರಗಡ ತಾಲೂಕು ವೇಗವಾಗಿ ಬೆಳೆಯುತ್ತಿರುವ ಪಟ್ಟಣವಾಗಿದ್ದು, ಸುತ್ತಮುತ್ತಲಿನ ಬಹಳಷ್ಟು ಗ್ರಾಮಸ್ಥರು ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದರ್ಶನಕ್ಕೆ ಹೋಗಿ-ಬರುವ ಭಕ್ತರ ಸಂಖ್ಯೆ ಹೆಚ್ಚಿದೆ. ಗಜೇಂದ್ರಗಡದಿಂದ ಧರ್ಮಸ್ಥಳಕ್ಕೆ ಹೋಗಲು ಬಸ್ ಇಲ್ಲದ್ದರಿಂದ ತುಂಬಾ ತೊಂದರೆಯಾಗಿದೆ. ಕಾರಣ ಗಜೇಂದ್ರಗಡ ಸಾರಿಗೆ ಘಟಕದ ವ್ಯವಸ್ಥಾಪಕರು ಕೂಡಲೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಈಗಾಗಲೇ ಗದಗ ಜಿಲ್ಲಾ ಸಾರಿಗೆ ವ್ಯವಸ್ಥಾಪಕರು ಗಜೇಂದ್ರಗಡ ಸಾರಿಗೆ ಘಟಕಕ್ಕೆ ಹೊಸ ಆರು ಬಸ್ಗಳನ್ನು ಪೂರೈಸಿದ್ದಾರೆ. ಆದರೆ, ಘಟಕದ ವ್ಯವಸ್ಥಾಪಕರು ಹೊಸ ಬಸ್ಗಳನ್ನು ಬೇರೆ ಬೇರೆ ಊರುಗಳಿಗೆ ಸಂಚಾರ ಸೌಲಭ್ಯ ಒದಗಿಸಲಾಗಿದೆ. ಅದರಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿಗೂ ಬಸ್ ವ್ಯವಸ್ಥೆ ಕಲ್ಪಿಸಿ ಭಕ್ತಾದಿಗಳಿಗೆ ಅನುಕೂಲ ಮಾಡಿಕೊಡಬೇಕು. ಒಂದು ವಾರದೊಳಗೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಸ್ ವ್ಯವಸ್ಥೆ ಮಾಡದಿದ್ದರೆ ಸಾರಿಗೆ ಘಟಕಕ್ಕೆ ಮುತ್ತಿಗೆ ಹಾಕಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ಭೀಮಣ್ಣ ಇಂಗಳೆ, ಜಗದೀಶ ಮಡಿವಾಳರ, ಮಾರುತಿ ಬರಗಿ, ಮುತ್ತಣ್ಣ ರೇಣಿ, ರಾಜು ಮಾಳೋತ್ತರ, ವೀರೇಶ ಶಿವಶಿಂಪಿಗೇರ, ಪ್ರಕಾಶ ಇಂಗಳೆ, ವೆಂಕಟೇಶ ಶಿನ್ನೂರ, ಯಮನೂರ ಗೌಡರ, ಕಾಲೇಶ ತಳವಾರ, ಶಾಮೀದ ಮಾಲ್ದಾರ, ಮಂಗಲೇಶ ಹಾಳಕೆರಿ, ಸಂಗಪ್ಪ ಪತಂಗರಾಯ, ಇತರರಿದ್ದರು.