ವೃತ್ತ, ರಸ್ತೆಗಳಿಗೆ ಮಾಹಿತಿ ಫಲಕ ಅಳವಡಿಸಲು ಒತ್ತಾಯ

12
Published on

ಮೈಸೂರು: ನಗರದ ವೃತ್ತ, ರಸ್ತೆ, ಪ್ರತಿಮೆಗಳ ಮಾಹಿತಿ ನೀಡುವ ಫಲಕ, ಹೆಸರನ್ನು ಅಳವಡಿಸುವಂತೆ ಒತ್ತಾಯಿಸಿ ಕರ್ನಾಟಕ ಸೇನಾ ಪಡೆಯಿಂದ ಬುಧವಾರ ನಗರಪಾಲಿಕೆಗೆ ಮನವಿ ಸಲ್ಲಿಸಲಾಯಿತು.
ಪಾಲಿಕೆ ಕಚೇರಿಯಲ್ಲಿ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಅವರಿಗೆ ಮನವಿ ಸಲ್ಲಿಸಿದ ಪಡೆಯ ಮುಖಂಡರು, ಸಾಂಸ್ಕೃತಿಕ ನಗರಿಯಲ್ಲಿ ಮೈಸೂರು ಆಡಳಿತ ನಡೆಸಿದ ಅರಸರು ಸೇರಿದಂತೆ ಅನೇಕರ ಪ್ರತಿಮೆ, ವೃತ್ತ, ರಸ್ತೆಗಳು ಇವೆ. ಆದರೆ ಅವುಗಳಲ್ಲಿ ಅವರು ಯಾರು, ಹೆಸರು ಏನು ಎನ್ನುವ ಮಾಹಿತಿಯೇ ಇಲ್ಲ ಎಂದು ದೂರಿದರು.
ಕೆ.ಆರ್.ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆ ಇದೆ. ಅಲ್ಲಿ ಪ್ರತಿಮೆಯ ಸುತ್ತ ನಾಲ್ಕೂ ಕಡೆಗಳಲ್ಲಿ ಕನ್ನಡದಲ್ಲಿ ಪ್ರಧಾನವಾಗಿ, ದೊಡ್ಡದಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರಿನ ನಾಮಫಲಕ ಹಾಕಬೇಕು. ಅರಮನೆ ಉತ್ತರದ್ವಾರದಲ್ಲಿ ನಾಲ್ವಡಿ ಅವರ ತಂದೆ ಹತ್ತನೇ ಚಾಮರಾಜ ಒಡೆಯರ್ ಪ್ರತಿಮೆ ಇದೆ. ಅಲ್ಲಿ ಅವರ ಹೆಸರಿನ ನಾಮಫಲಕ, ದೀಪಾಲಂಕಾರ ಮಾಡಬೇಕು. ಹಾರ್ಡಿಂಜ್ ವೃತ್ತದಲ್ಲಿ ಜಯಚಾಮರಾಜ ಒಡೆಯರ್ ಪ್ರತಿಮೆ ಇದೆ. ಆಲ್ಲಿ ಅವರ ಹೆಸರಿನ ನಾಮಫಲಕಗಳನ್ನು ದೊಡ್ಡದಾಗಿ ಹಾಕಿ ಜನರಿಗೆ ಮಾಹಿತಿ ನೀಡುವಂತೆ ಆಗಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಸೇನಾ ಪಡೆಯ ಜಿಲ್ಲಾಧ್ಯಕ್ಷ ತೇಜೇಶ ಲೋಕೇಶ್‌ಗೌಡ, ಮುಖಂಡರಾದ ಶಿವಶಂಕರ್, ಸುರೇಶ್ ಗೋಲ್ಡ್, ಪ್ರಭುಶಂಕರ್, ರಾಧಾಕೃಷ್ಣ, ದೂರಸುರೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net