ಎಂಆರ್‌ಪಿ ನಿಗದಿಗೆ ಸೂಕ್ತ ನಿಯಮ ಜಾರಿಗೆ ಒತ್ತಾಯ

13
Published on

ಮೈಸೂರು: ಗರಿಷ್ಠ ಚಿಲ್ಲರೆ ಬೆಲೆಯ (ಎಂಆರ್‌ಪಿ) ನಿಗದಿಗೆ ಸೂಕ್ತ ನಿಯಮ ಹಾಗೂ ಕಾನೂನನ್ನು ಕಡ್ಡಾಯವಾಗಿ ಜಾರಿಗೆ ತರುವಂತೆ ಆಗ್ರಹಿಸಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದಿಂದ ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಮುಖಾಂತರ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಸಿದ್ದಾರ್ಥ ನಗರದಲ್ಲಿರುವ ನೂತನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಚಂದ್ರಶೇಖರ್ ನೇತೃತ್ವದಲ್ಲಿ ಮನವಿ ಪತ್ರ ಸಲ್ಲಿಸಿ, ಪ್ಯಾಕ್ ಮಾಡಲಾದ ವಸ್ತುಗಳ ಮೇಲೆ ಎಂಆರ್‌ಪಿ ಮುದ್ರಣವನ್ನು ಸರಿಪಡಿಸಲು ಕಾನೂನು ಮತ್ತು ನಿಯಂತ್ರಣ ತರಬೇಕು ಎಂದು ಒತ್ತಾಯಿಸಲಾಯಿತು.
ಸರ್ಕಾರವು 1970ರಲ್ಲಿ ಕಾನೂನು ಮಾಪನಶಾಸ್ತ್ರ ಶಾಸನದ ಅಡಿಯಲ್ಲಿ ಗರಿಷ್ಠ ಚಿಲ್ಲರೆ ಬೆಲೆಯನ್ನು ಪರಿಚಯಿಸಿತು. ಚಿಲ್ಲರೆ ಮಾರಾಟಕ್ಕೆ ಇರಿಸಲಾದ ಉತ್ಪನ್ನದ ಪ್ಯಾಕಿಂಗ್‌ನಲ್ಲಿ ಎಂಆರ್‌ಪಿ ಮುದ್ರಣವನ್ನು ಕಡ್ಡಾಯಗೊಳಿಸಲಾಗಿದೆ. ಚಿಲ್ಲರೆ ವ್ಯಾಪಾರಿಯು ಸಹಜವಾಗಿ ಎಂಆರ್‌ಪಿಗಿಂತ ಕಡಿಮೆ ಅಥವಾ ಹೆಚ್ಚಿನ ಬೆಲೆಗೆ ಉತ್ಪನ್ನವನ್ನು ಮಾರಾಟ ಮಾಡಬಹುದು. ವಿಪರ್ಯಾಸವೆಂದರೆ ಎಂಆರ್‌ಪಿ ಹೇಗೆ ನಿಗದಿಪಡಿಸಬೇಕು ಎಂಬುದರ ಕುರಿತು ಯಾವುದೇ ಮಾರ್ಗಸೂಚಿಗಳ ಬಗ್ಗೆ ಶಾಸನ ಇಲ್ಲ. ಹಾಗಾಗಿ ಉತ್ಪಾದಕರು ಮನಸೋ ಇಚ್ಛೆ ಎಂಆರ್‌ಪಿ ದರ ನಿಗದಿಪಡಿಸುತ್ತಿದ್ದಾರೆ ಎಂದು ದೂರಿದರು.
ಸಮಿತಿಯ ರಾಜ್ಯ ಸಂಚಾಲಕ ಜಿ.ವಿ.ರವಿಶಂಕರ್, ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ವಕೀಲರಾದ ರವೀಂದ್ರ, ಪ್ರಮುಖರಾದ ನಾಗಮಣಿ, ದರ್ಶನ್‌ಮೂರ್ತಿ, ಬೈರತಿ ಲಿಂಗರಾಜು, ರಾಕೇಶ್, ಸವಿತಾ ಘಾಟ್ಕೆ, ದುರ್ಗಾ ಪ್ರಸಾದ್, ಅಪೂರ್ವ ಸುರೇಶ್, ದಯಾನಂದ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net