ಒಂದು ಬಾರಿ ತೀರುವಳಿ ಯೋಜನೆ ಜಾರಿಗೆ ಒತ್ತಾಯ

Published on

ಮೈಸೂರು: ನಗರ ಪಾಲಿಕೆಯಿಂದಲೂ ಇತರೆಡೆಯಂತೆ ಆಸ್ತಿ ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಒಂದು ಬಾರಿ ತಿರುವಳಿ (ಒನ್ ಟೈಂ ಸೆಟಲ್‌ಮೆಂಟ್) ಯೋಜನೆ ಜಾರಿಗೆ ತರಬೇಕು ಎಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದರು.
ಬೃಹತ್ ಬೆಂಗಳೂರು ನಗರಪಾಲಿಕೆಯಲ್ಲಿ ಹಲವು ವರ್ಷಗಳಿಂದ ತೆರಿಗೆ ಪಾವತಿಸದವರಿಗಾಗಿ ಒನ್ ಟೈಂ ಸೆಟಲ್‌ಮೆಂಟ್ ಆಸ್ತಿ ತೆರಿಗೆ ಯೋಜನೆ ಜಾರಿಗೊಳಿಸಿದೆ. ಇದಕ್ಕೆ ದಂಡ ಹಾಗೂ ಬಡ್ಡಿ ಮನ್ನಾ ವಿನಾಯಿತಿ ನೀಡಲಾಗಿದೆ. ಇದೇ ವೇಳೆ ಮೈಸೂರು ನಗರದಲ್ಲಿಯೂ ಶೇ.40ರಷ್ಟು ಆಸ್ತಿ ತೆರಿಗೆ ಪಾವತಿ ಆಗುತ್ತಿಲ್ಲ. ಹೀಗಾಗಿ ಇಲ್ಲಿಯೂ ಆ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನಗರಪಾಲಿಕೆ ಹಾಗೂ ಮುಡಾ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಅನಧಿಕೃತ ಬಡಾವಣೆ ನಿರ್ಮಾಣವಾಗುತ್ತಿವೆ. ಹತ್ತಾರು ವರ್ಷಗಳಿಂದ ಸರ್ಕಾರ ಅಕ್ರಮ ಸಕ್ರಮ ಯೋಜನೆ ಇದಕ್ಕೆ ಅನ್ವಯಿಸುವುದಾಗಿ ಹೇಳುತ್ತಿದೆಯೇ ಹೊರತು ಸಮಸ್ಯೆ ಬಗೆಹರಿಸಿಲ್ಲ. ಹೀಗಾಗಿ, ಈ ಯೋಜನೆ ಅಗತ್ಯವಾಗಿದೆ ಎಂದು ಹೇಳಿದರು. ಮುಖಂಡರಾದ ಸು.ಮುರಳಿ, ಭಾನುಪ್ರಕಾಶ್, ಪದ್ಮನಾಭ್, ಸ್ಮಾರ್ಟ್ ಮಂಜು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net