

ಚಿತ್ರದುರ್ಗ: ಕವಾಡಿಗರಹಟ್ಟಿ ಪ್ರಕರಣ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಕರುನಾಡ ವಿಜಯಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಮೃತ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ, 20 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿಕೊಡುವುದು ಸೇರಿ ನ್ಯಾಯಯುತ ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ಮೃತ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ದಲಿತ ಕಾಲನಿಯ ಮಹಿಳೆಯರು ಸಂಘ-ಸಂಸ್ಥೆಗಳಿಂದ ಪಡೆದಿರುವ ಸಾಲ ಮನ್ನಾ ಮಾಡಬೇಕು. ಮೂರು ಕೊಳವೆ ಬಾವಿ ಕೊರೆಸಬೇಕು. ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕು. ಕವಾಡಿಗರಹಟ್ಟಿಯಲ್ಲಿ ನೂತನ ನಗರ ಆರೋಗ್ಯ ಕೇಂದ್ರ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ಮೃತ ಮಂಜುಳಾ ಪುತ್ರಿಗೆ ಪದವಿವರೆಗೂ ಉಚಿತ ಶಿಕ್ಷಣ ಕೊಡಿಸಬೇಕು. ಅಸ್ವಸ್ಥರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ನೀಡಬೇಕು. ಹಟ್ಟಿಗೆ ಎಲ್ಲಾ ರೀತಿಯ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಕೋರಿದರು.
ಸೇನೆಯ ರಾಜ್ಯ ಉಪಾಧ್ಯಕ್ಷ ಕೆ.ಆರ್.ಸಚ್ಚಿದಾನಂದ, ಜಿಲ್ಲಾ ಅಧ್ಯಕ್ಷ ಕೆ.ಟಿ.ಶಿವಕುಮಾರ್, ಮಹಿಳಾ ಜಿಲ್ಲಾ ಅಧ್ಯಕ್ಷೆ
ವೀಣಾ ಗೌರಣ್ಣ, ಪದಾಧಿಕಾರಿಗಳಾದ ವಿಜಯ್‌ಕುಮಾರ್, ಕಮಲಮ್ಮ, ಮೇಹ್ತಾ ಫರ್ಜಾನಾ, ಅಖಿಲೇಶ್, ಅವಿನಾಶ್, ಮಣಿಕಂಠ, ಪ್ರದೀಪ್, ಮಹಮ್ಮದ್ ರಫೀ ಇತರರಿದ್ದರು.