

ಚಿಕ್ಕಮಗಳೂರು: ಪರಿಶಿಷ್ಟ ಜಾತಿ ಮತ್ತು ವರ್ಗದ ನೌಕರರಿಗೆ ಡಿಸಿಸಿ ಬ್ಯಾಂಕ್‌ನಲ್ಲಿ ಸಂವಿಧಾನ ಬದ್ಧವಾಗಿ ಮೀಸಲಾತಿಯನ್ನು ರೋಸ್ಟರ್ ನಿಯಮದ ಪ್ರಕಾರ ಕಡ್ಡಾಯವಾಗಿ ಜಾರಿಗೊಳಿಸಿ ಪದೋನ್ನತಿ ನೀಡಬೇಕು ಎಂದು ಡಿಎಸ್‌ಎಸ್ ಮುಖಂಡರು ಡಿಸಿಸಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ತಿಮ್ಮಪ್ಪ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಪ್ರಧಾನ ಸಂಚಾಲಕ ಮರ್ಲೆ ಅಣ್ಣಯ್ಯ, ಹಲವಾರು ವರ್ಷಗಳ ಹಿಂದೆಯೇ ಬ್ಯಾಂಕಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರನ್ನು ನೇಮಕಗೊಳಿಸಿಕೊಳ್ಳಲಾಗಿದೆ. ಆದರೆ ಬ್ಯಾಂಕಿನ ಎರಡನೇ ಬ್ಯಾಚ್‌ನ ನೌಕರರಿಗೂ ಜೇಷ್ಠತಾ ಪಟ್ಟಿಯನ್ನು ತಯಾರಿಸಿದ್ದು, ಈ ಜೇಷ್ಟತಾ ಪಟ್ಟಿಯು ಸರಿಯಿಲ್ಲವೆಂದು ಹಿಂದಿನಿAದಲೂ ಆಕ್ಷೇಪಣೆ ಸಲ್ಲಿಸಲಾಗಿದೆ. ಯಾವ ಮಾನದಂಡದಿAದ ಪಟ್ಟಿ ತಯಾರಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದು ದೂರಿದರು.
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಬ್ಯಾಂಕಿನ ನೌಕರರಿಗೆ ಪದೋನ್ನತಿ ನೀಡಿರುವುದಿಲ್ಲ. ಇದನ್ನು ಪ್ರಶ್ನಿಸಿ ಆಡಳಿತ ಮಂಡಳಿಯ ವಿರುದ್ಧ ಹಿರಿಯ ನೌಕರರು ಮೊಕದ್ದಮೆ ಹೂಡಿದ ಬಳಿಕ ಕೇಸ್ ಹಿಂಪಡೆಯಲು ಮಾಜಿ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ಪರಿಶಿಷ್ಟ ಜಾತಿ, ವರ್ಗದ ನೌಕರರಿಗೆ ಮೀಸಲಾತಿ ನೀಡುತ್ತೇವೆಂದು ನಿರ್ಣಯ ಕೈಗೊಂಡಿದ್ದಾರೆ. ಈ ಬಳಿಕ ಮೊಕದ್ದಮೆ ಹಿಂಪಡೆಯಲಾಗಿದೆ ಎಂದರು.
ರಾಜ್ಯದ ಎಲ್ಲಾ ಜಿಲ್ಲೆಗಳ ಡಿಸಿಸಿ ಬ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ, ವರ್ಗದ ನೌಕರರಿಗೆ ಸರ್ಕಾರದ ನಿಯಮದ ಪ್ರಕಾರ ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಮೀಸಲಾತಿ ಅನ್ವಯ ಪದೋನ್ನತಿ ನೀಡಿರುತ್ತಾರೆ. ಆದರೆ ಚಿಕ್ಕಮಗಳೂರು ಮಾತ್ರ ಸರ್ಕಾರದ ನಿಯಮದ ಪ್ರಕಾರ ರೋಸ್ಟರ್ ಪದ್ಧತಿಯನ್ನು ಅಳವಡಿಸಿಕೊಂಡು ಮೀಸಲಾತಿ ಅನ್ವಯ ಪದೋನ್ನತಿ ನೀಡಿಲ್ಲ ಎಂದು ದೂರಿದರು.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕ ರಮೇಶ್, ಮುಖಂಡರಾದ ಸೋಮಶೇಖರ್ ಸರಪನಹಳ್ಳಿ, ಸೋಮಶೇಖರ್ ಬಸವನಹಳ್ಳಿ, ಚೇತನ್ ಹಿರೇಮಗಳೂರು ಮತ್ತಿತರರಿದ್ದರು.