

ಬ್ಯಾಡಗಿ: ನೀರಾವರಿ ಇಲಾಖೆ ವ್ಯವಸ್ಥಾಪಕರು ಹಾಗೂ ಇಂಜಿನಿಯರ್ಗಳ ನಿರ್ಲಕ್ಷ್ಯದಿಂದ ತಾಲೂಕಿನ ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆಯಲ್ಲಿ ಸಮರ್ಪಕವಾಗಿ ನೀರು ಹರಿಯುತ್ತಿಲ್ಲ. ಪರಿಣಾಮ ಮಳೆಗಾಲ ಮುಗಿಯುತ್ತ ಬಂದರೂ ಶೇ. 25ರಷ್ಟು ಕೆರೆ ತುಂಬಿಲ್ಲ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ರೈತ ಸಂಘದ ಜಿಲ್ಲಾ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ರೈತರ ಸಭೆಯಲ್ಲಿ ಅವರು ಮಾತನಾಡಿದರು.
ತಾಲೂಕಿನಲ್ಲಿ ನೀರಾವರಿ ಯೋಜನೆಗಳ ಜಾರಿಗೆ ರೈತ ಸಂಘ ಹೋರಾಟ ನಡೆಸಿತ್ತು. ಬಳಿಕ ಆಣೂರು ಹಾಗೂ ಬುಡಪನಹಳ್ಳಿ ಕೆರೆ ತುಂಬಿಸುವ ಯೋಜನೆ ಮಂಜೂರಾಗಿವೆ. 400 ಕೋಟಿ ರೂ.ಅಧಿಕ ವೆಚ್ಚವಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಲ್ಲಲ್ಲಿ ಕಾಮಗಾರಿ ಉಳಿದುಕೊಂಡಿದೆ. ಆಣೂರು ಕೆರೆಯಿಂದ ಕೆಲವೇ ಕೆರೆಗಳು ಭರ್ತಿಯಾಗಿವೆ ಹೊರತು ಸಂಪೂರ್ಣವಾಗಿ ಎಲ್ಲ ಕೆರೆಗಳಿಗೂ ಇನ್ನೂ ತಲುಪಿಲ್ಲ. ಬುಡಪನಹಳ್ಳಿಯ ಕೆರೆಯ ಸುಮಾರು 35 ಎಕರೆ ಪೈಕಿ 10 ಎಕರೆಯಲ್ಲಿ ನೀರು ನಿಂತಿಲ್ಲ, ಹೀಗಾದರೆ, ಯೋಜನೆ ಸಫಲವಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಎಲ್ಲ ಕೆರೆಗಳಿಗೂ ಸಮರ್ಪಕವಾಗಿ ಪೈಪ್ಲೈನ್ ಮೂಲಕ ನೀರು ಹರಿಸಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದರು.
ವಿಮೆ ಕಂಪನಿ ಮೋಸದಾಟ: ಹಾವೇರಿ ಜಿಲ್ಲೆಯ ರೈತರಿಗೆ ರಿಲಾಯನ್ಸ್ ವಿಮೆ ಕಂಪನಿಯಿಂದ ತೀವ್ರ ಮೋಸವಾಗಿದೆ. 2022-23 ರಲ್ಲಿ ಜಿಲ್ಲೆಯ ರೈತರು 27.60 ಕೋಟಿ ರೂ. ವಿಮೆ ಕಂತು ತುಂಬಿದ್ದಾರೆ. ರಾಜ್ಯ ಸರ್ಕಾರ 114 ಕೋಟಿ ರೂ. ಹಾಗೂ ಕೇಂದ್ರದಿಂದ 114 ಕೋಟಿ ರೂ. ಜಮೆಯಾಗಿದೆ. ಒಟ್ಟು ವಿಮೆ ಕಂಪನಿಗೆ ರೈತರು ಹಾಗೂ ಸರ್ಕಾರಗಳಿಂದ 255 ಕೋಟಿ ರೂ. ಜಮೆಯಾಗಿದೆ. ಈ ಪೈಕಿ ಶೇ.25ರಷ್ಟು ಮಧ್ಯಂತರ ಪರಿಹಾರವಾಗಿ 131 ಕೋಟಿ ರೂ. ಮಾತ್ರ ಕಂಪನಿ ನೀಡಿ ಕೈತೊಳೆದುಕೊಂಡಿದೆ. ರೈತರು, ಸರ್ಕಾರಗಳ 124 ಕೋಟಿ ರೂ. ಹಣವನ್ನು ವಿಮಾ ಕಂಪನಿ ಉಳಿಸಿಕೊಂಡು ಮೋಸ ಮಾಡುತ್ತಿದೆ. ಈ ಕುರಿತು ಜಿಲ್ಲೆಯ ಸಂಸದರು ಧ್ವನಿ ಎತ್ತುತ್ತಿಲ್ಲ. ರೈತರು ವಿಮಾ ಕಂಪನಿಯ ಕೇಂದ್ರ ಕಚೇರಿಗೆ ತೆರಳಿ ದೂರು ನೀಡಲು ಸಾಧ್ಯವೇ. ಸರ್ಕಾರ ಮಧ್ಯಸ್ಥಿಕೆ ವಹಿಸಿ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ವಿವಿಧ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಶೀಘ್ರದಲ್ಲೆ ಜಿಲ್ಲಾಧಿಕಾರಿಗಳ ಕಾರ್ಯಾಲಯ ಎದುರು ಹೋರಾಟ ಹಮ್ಮಿಕೊಳ್ಳುವುದಾಗಿ ತಿಳಿಸಿದರು.
ರೈತ ಮುಖಂಡ ಕಿರಣ ಗಡಿಗೋಳ ಮಾತನಾಡಿ, ತುಂಬಿರುವ ಕೆರೆಗಳಿಗೆ ರೈತ ಸಂಘದ ಆಶ್ರಯದಲ್ಲಿ ಎಲ್ಲ ಗ್ರಾಮಸ್ಥರೊಂದಿಗೆ ಬಾಗಿನ ಅರ್ಪಿಸುವ ದೊಡ್ಡ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ರೈತ ಮುಖಂಡರಾದ ರುದ್ರಗೌಡ್ರ ಕಾಡನಗೌಡ್ರ, ಶಂಕರ ಮರಗಾಲ, ಕರಬಸಪ್ಪ ಬಡ್ಡಿಯವರ, ಈರನಗೌಡ್ರ ತೆವರಿ, ಸಂತೋಷ ಬಡ್ಡಿಯವರ, ನಿಂಗಪ್ಪ ಇತರರಿದ್ದರು.