ಸಿಎಂ ಕುಟುಂಬದ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಲು ಒತ್ತಾಯ

Published on

ಮೈಸೂರು: ದಲಿತ ಕುಟುಂಬದಿಂದ ಜಮೀನು ಪಡೆದ ಸಿದ್ದರಾಮಯ್ಯ ಹಾಗೂ ಇದಕ್ಕೆ ಸಹಕರಿಸಿದ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ ಅಡಿ ದೂರು ದಾಖಲಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಒತ್ತಾಯಿಸಿದ್ದಾರೆ.
ದಲಿತರ ಜಮೀನು ಪಡೆಯುವ ಮೂಲಕ ಸಿದ್ದರಾಮಯ್ಯ ಅವರ ಕುಟುಂಬ ದಲಿತರಿಗೆ ಹಾಗೂ ಜಮೀನಿನ ಮೂಲ ಮಾಲೀಕ ನಿಂಗ ಅವರ ಕುಟುಂಬಕ್ಕೆ ವಂಚಿಸಿದೆ. ಅವರಿಗೆ ಸೇರಬೇಕಾದ ಕೋಟ್ಯಂತರ ರೂ. ಬೆಲೆ ಬಾಳುವ ನಿವೇಶನವನ್ನು ತಮ್ಮ ಪತ್ನಿ ಪಾರ್ವತಿ ಅವರ ಹೆಸರಿಗೆ ಪಡೆದುಕೊಂಡಿದ್ದಾರೆ ಎಂದು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜಮೀನಿಗೆ ಸಂಬಂಧಿಸಿದಂತೆ ಯಾವುದೇ ಹಕ್ಕು ಬಾಧ್ಯತೆಗೆ ಒಳಪಡದವರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಮೈದುನ ಮಲ್ಲಿಕಾರ್ಜುನಸ್ವಾಮಿ ಜಮೀನು ಬರೆಸಿಕೊಂಡಿದ್ದಾರೆ. ಅಲ್ಲದೇ ನಿಯಮ ಬಾಹಿರವಾಗಿ ದಲಿತರ ಜಮೀನನ್ನು ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ದಾನಪತ್ರ ಸೃಷ್ಟಿಸಿ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ದೂರಿದ್ದಾರೆ.
ಈ ಕೃತ್ಯಕ್ಕೆ ನಿಂಗನ ಸಹೋದರ ಮತ್ತು ಸಹೋದರರ ಮಗ ಸಹಕರಿಸಿದ್ದು, ರಾಜಕೀಯ, ಅಧಿಕಾರ ಪ್ರಭಾವ ಬಳಸಲಾಗಿದೆ. ಇದರಿಂದ ದಲಿತ ಕುಟುಂಬಕ್ಕೆ ಹಾಗೂ ಮೂಲ ಜಮೀನಿನ ಮಾಲೀಕರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ನಿಯಮ ಉಲ್ಲಂಘಿಸಿ ದಲಿತರಿಗೆ ಅನ್ಯಾಯ ಮಾಡಿರುವುದರಿಂದ ಸಿದ್ದರಾಮಯ್ಯ, ಬಾಮೈದುನ ಮಲ್ಲಿಕಾರ್ಜುನ, ಪತ್ನಿ ಪಾರ್ವತಿ ಹಾಗೂ ಸಹಕರಿಸಿದ ಅಧಿಕಾರಿಗಳ ವಿರುದ್ಧ ದಲಿತ ದೌರ್ಜನ್ಯ ಕಾಯ್ದೆ, ಭಾರತೀಯ ದಂಡ ಸಂಹಿತೆ ಸೂಕ್ತ ಕಾಲಂ ಪ್ರಕಾರ ಪ್ರಕರಣ ದಾಖಲಿಸಿ ತುರ್ತು ವಿಚಾರಣೆ ನಡೆಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net